ಚಂದ್ರವಳ್ಳಿ ನ್ಯೂಸ್, ಶಿರಾ:
ತಾಲೂಕಿನ ಪ್ರತಿಯೊಂದು ಗ್ರಾಮಕ್ಕೂ ಎತ್ತಿನಹೊಳೆ ಯೋಜನೆಯಿಂದ ಕುಡಿಯುವ ನೀರು ಪೂರೈಸುವ ಯೋಜನೆಗೆ ಸಂಬಂಧಿಸಿದಂತೆ ವಿಸ್ತೃತ ಯೋಜನಾ ವರದಿ ಸಿದ್ಧಗೊಂಡಿದ್ದು, ಶೀಘ್ರದಲ್ಲೇ ಸರ್ಕಾರಕ್ಕೆ ಅನುಮೋದನೆಗಾಗಿ ಸಲ್ಲಿಸಲಾಗುವುದು ಎಂದು ಶಿರಾ ಶಾಸಕರು ಹಾಗೂ ಕರ್ನಾಟಕ ಸರ್ಕಾರದ ನವದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ ಜಯಚಂದ್ರ ಅವರು ತಿಳಿಸಿದ್ದಾರೆ.
ಮಾಜಿ ಸಚಿವ ಜಯಚಂದ್ರ ಅವರ ಬೆಂಗಳೂರನ ಕಚೇರಿಯಲ್ಲಿ ನಗರಾಭಿವೃದ್ಧಿ, ಸಣ್ಣ ನೀರಾವರಿ ಇಲಾಖೆ ಹಾಗೂ ಎತ್ತಿನಹೊಳೆ ಯೋಜನೆ ಹಾಗೂ ಆರ್‌ಡಿಪಿಆರ್ ಮುಖ್ಯ ಎಂಜಿನಿಯರ್‌ಗಳು ಮತ್ತು ಅಧಿಕಾರಿಗಳೊಂದಿಗೆ ನಡೆದ ಸುದೀರ್ಘ ಸಭೆಯಲ್ಲಿ ಈ ಕುರಿತು ವಿಸ್ತೃತ ಚರ್ಚೆ ನಡೆಸಲಾಯಿತು.
0.50 TMC ನೀರು ಬಳಕೆ: ಎತ್ತಿನಹೊಳೆ ಯೋಜನೆಯಡಿ ಶಿರಾ ತಾಲೂಕಿಗೆ ಹಂಚಿಕೆಯಾಗಿರುವ 0.50 TMC ನೀರನ್ನು ಸಂಪೂರ್ಣವಾಗಿ ಕುಡಿಯುವ ನೀರಿನ ಉದ್ದೇಶಕ್ಕೆ ಮಾತ್ರ ಸದುಪಯೋಗಪಡಿಸಿಕೊಳ್ಳಲಾಗುವುದು. (ಕೆರೆ ತುಂಬಿಸುವ ಯೋಜನೆ ಇದರಲ್ಲಿ ಸೇರಿರುವುದಿಲ್ಲ).
ಪ್ರತಿಯೊಂದು ಗ್ರಾಮಕ್ಕೂ ನೀರು: ತಾಲೂಕಿನ ಪ್ರತಿಯೊಂದು ಗ್ರಾಮ ಮತ್ತು ಮನೆಗಳಿಗೆ ನೀರು ತಲುಪಿಸುವ ನಿಟ್ಟಿನಲ್ಲಿ ಯಾವ ಕೆರೆ ಅಥವಾ ಮೂಲದಿಂದ ನೀರನ್ನು ಹೇಗೆ ವಿತರಿಸಬೇಕು ಎಂಬ ಬಗ್ಗೆ ಸಭೆಯಲ್ಲಿ ನಕ್ಷೆ ತಯಾರಿಸಿ ಸುದೀರ್ಘವಾಗಿ ಚರ್ಚಿಸಲಾಯಿತು ಎಂದು ಅವರು ಹೇಳಿದರು.
ಶೀಘ್ರ ಅನುಮೋದನೆ: ಕಳೆದ ಮೂರ್ನಾಲ್ಕು ವರ್ಷಗಳಿಂದ ನಡೆಯುತ್ತಿದ್ದ ಈ ಪ್ರಕ್ರಿಯೆ ಈಗ ಅಂತಿಮ ಹಂತಕ್ಕೆ ತಲುಪಿದ್ದು, DPR ಸಿದ್ಧವಾಗಿದೆ. ಇದನ್ನು ಸದ್ಯದಲ್ಲೇ ಸರ್ಕಾರಕ್ಕೆ ಸಲ್ಲಿಸಿ ಮಂಜೂರಾತಿ ಪಡೆಯಲಾಗುವುದು.
ಜಿಲ್ಲೆಯಲ್ಲೇ ಮೊದಲು: ಎತ್ತಿನಹೊಳೆ ನೀರಿನ ಸದುಪಯೋಗಕ್ಕಾಗಿ ತುಮಕೂರು ಜಿಲ್ಲೆಯಲ್ಲೇ ಪ್ರಥಮವಾಗಿ ಶಿರಾ ತಾಲೂಕಿನ DPR ಪೂರ್ಣಗೊಂಡಿದೆ.
ಸಭೆಯ ಬಳಿಕ ವಿಷಯ ತಿಳಿದ ಸಾರ್ವಜನಿಕರು ಹಾಗೂ ಸ್ಥಳೀಯರು, ತಾಲೂಕಿನ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಜಯಚಂದ್ರ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.
ಎತ್ತಿನಹೊಳೆ ಯೋಜನೆಯಡಿ ಶಿರಾ ತಾಲೂಕಿಗೆ ಹಂಚಿಕೆಯಾಗಿರುವ 0.514 ಟಿ.ಎಂ.ಸಿ ಅಡಿ ನೀರನ್ನು ಸಮರ್ಥವಾಗಿ ಬಳಸಿಕೊಂಡು, ಶಿರಾ ತಾಲೂಕಿನ ಗ್ರಾಮೀಣ ಹಾಗೂ ನಗರ ಪ್ರದೇಶಕ್ಕೆ ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡಲು ಸಮಗ್ರ ಯೋಜನೆ ಸಿದ್ಧಪಡಿಸುವ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸಲಾಗಿದೆ.
ಶಿರಾ ತಾಲೂಕಿನ ನೀರಾವರಿ ಯೋಜನೆಗಳ ಅನುಷ್ಠಾನ ಹಾಗೂ ಅಂತರ್ಜಲ ಕಲುಷಿತಗೊಂಡಿರುವ ಕುರಿತು ಹಿರಿಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಡುವೆ ಮಹತ್ವದ ಸಭೆ ನಡೆಯಿತು.
ಸಭೆಯಲ್ಲಿ ವ್ಯಕ್ತವಾದ ಮುಖ್ಯ ಅಂಶಗಳು: ಹೇಮಾವತಿ ಹಾಗೂ ಎತ್ತಿನಹೊಳೆ ಯೋಜನೆಗಳ ಬಳಕೆ: ತಾಲೂಕಿನ ನೀರಾವರಿ ಅಗತ್ಯತೆಗಳನ್ನು ಪೂರೈಸಲು ಹೇಮಾವತಿ ನೀರು ಪ್ರಮುಖ ಮೂಲವಾಗಿದ್ದು, ಗ್ರಾವಿಟಿ ಮೂಲಕ ನೀರು ಹರಿಯುವುದರಿಂದ ಇದು ಅತ್ಯಂತ ಸೂಕ್ತವಾಗಿದೆ. ಜೊತೆಗೆ ಎತ್ತಿನಹೊಳೆ ಯೋಜನೆಯಿಂದ ಲಿಫ್ಟ್ ನೀರಾವರಿ ಮಾಡುವ ಸಾಧ್ಯತೆಗಳ ಕುರಿತು ಚರ್ಚಿಸಲಾಯಿತು.
ಕುಡಿಯುವ ನೀರಿನ ಕಲುಷಿತ ಸಮಸ್ಯೆ: ಶಿರಾ ಭಾಗದಲ್ಲಿ ೮೦೦ ಅಡಿಗಿಂತ ಹೆಚ್ಚು ಆಳದ ಕೊಳವೆ ಬಾವಿ ತೊಡಿಸಿದಾಗ ನೀರು ತೀವ್ರವಾಗಿ ಕಲುಷಿತಗೊಳ್ಳುತ್ತಿದ್ದು, ಫ್ಲೋರೈಡ್, ನೈಟ್ರೇಟ್ ಮತ್ತು ಆರ್ಸೆನಿಕ್ ಅಂಶಗಳು ಹೆಚ್ಚಾಗಿ ಕಂಡುಬರುತ್ತಿವೆ. ಇದರಿಂದ ನೂರಾರು ಜನರು ದೈಹಿಕ ಅಂಗವಿಕಲತೆ ಹಾಗೂ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ರೈತರ ಸ್ವಯಂ ಪ್ರೇರಿತ ಪ್ರಯತ್ನ ಹಾಗೂ ಸಣ್ಣ ನೀರಾವರಿ: ನೀರಾವರಿ ತಲುಪದ ಗ್ರಾಮಗಳಲ್ಲಿ ರೈತರೇ ಸ್ವತಃ ಹಣ ಹೂಡಿಕೆ ಮಾಡಿ ಪಂಪ್ ಹಾಗೂ ಕೊಳವೆಗಳ ಮೂಲಕ ಕೆರೆಗಳಿಗೆ ನೀರು ತುಂಬಿಸಿಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಶಾಸನಬದ್ಧ ಯೋಜನೆಗಳನ್ನು ರೂಪಿಸಿ, ಎಲ್ಲ ಪ್ರದೇಶಗಳಿಗೂ ನೀರು ಸಿಗುವಂತೆ ಕ್ರಮ ವಹಿಸಲು ಮನವಿ ಮಾಡಲಾಯಿತು ಎಂದು ಜಯಚಂದ್ರ ಅವರು ತಿಳಿಸಿದರು.
ಸಭೆಯಲ್ಲಿ ತಾಂತ್ರಿಕ ಸಲಹೆಗಾರರು ಮತ್ತು ವಿಶೇಷಾಧಿಕಾರಿ ಗೋಷಿಕುಂಟೆ ಈಶ್ವರಯ್ಯ, ಗ್ರಾ.ಕು.ನೀ ಮತ್ತು ನೈ. ವೃತ್ತ, ಬೆಂಗಳೂರು ಅಧೀಕ್ಷಕ ಅಭಿಯಂತರ ಅನಿಲ್ ಕುಮಾರ್ ಕೆ.ಎನ್, ಗ್ರಾ.ಕು.ನೀ.ನೈ. ವೃತ್ತ ಅಧೀಕ್ಷಕ ಅಭಿಯಂತರ ಜಿ. ಇಂದ್ರಕುಮಾರ್, ಗ್ರಾ.ಕು.ನೀ ಮತ್ತು ನೈ. ವಿಭಾಗ, ತುಮಕೂರು ಕಾರ್ಯಪಾಲಕ ಅಭಿಯಂತರ ವಾಸುದೇವ್ ಬಿ.ಹೆಚ್, ಭದ್ರಾ ಮೇಲ್ದಂಡೆ ಯೋಜನೆ ಕಾರ್ಯಪಾಲಕ ಅಭಿಯಂತರ ಸಂದೇಶ್ ಎಂ.ಎಸ್., ನಗರಸಭೆ ಶಿರಾ ಪೌರಾಯುಕ್ತ ರುದ್ರೇಶ್ ಕೆ., ಸ.ಕಾ.ಇಂ, ಗ್ರಾ.ಕು.ನೀ.ನೈ. ಉಪವಿಭಾಗ, ಶಿರಾ ಮಂಜುಪ್ರಸಾದ್ ಎ.ಆರ್., ಸ.ಕಾ.ಇಂ, ಸಣ್ಣ ನೀರಾವರಿ ಉಪವಿಭಾಗ, ಶಿರಾ ಎಂ. ಗಂಗಾಧರ, ಸ.ಕಾ.ಇಂ., ನಂ. 2 ಉಪವಿಭಾಗ ತುಮಕೂರು ಕೆ.ಎಲ್. ಸೋಮಶೇಖರ ನಾಯ್ಕ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಬೆಂಗಳೂರು, ತುಮಕೂರು ಮತ್ತು ಶಿರಾ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ತುಮಕೂರು ಎತ್ತಿನಹೊಳೆ ಯೋಜನೆಯ ಅಧಿಕಾರಿಗಳು ಹಾಜರಿದ್ದರು.




