ಚಂದ್ರವಳ್ಳಿ ನ್ಯೂಸ್, ಮೊಳಕಾಲ್ಮೂರು:
ಪಟ್ಟಣದ ಎನ್.ಎಂ.ಎಸ್. ಬಡಾವಣೆಯ ಕುಗಯ್ಯರ ಹಟ್ಟಿ ವ್ಯಾಪ್ತಿಯಲ್ಲಿರುವ ಸುಮಾರು 25ಕ್ಕೂ ಹೆಚ್ಚು ಜಮೀನುಗಳಿಗೆ ಸೂಕ್ತ ಕಾಲುದಾರಿ ಹಾಗೂ ಬಂಡಿದಾರಿ ಇಲ್ಲದೆ ರೈತರು ನಿತ್ಯ ಪರದಾಡುವಂತಾಗಿದೆ. ಈ ಸಮಸ್ಯೆಯನ್ನು ತಕ್ಷಣ ಬಗೆಹರಿಸಿ, ಖಾಯಂ ದಾರಿ ಗುರುತಿಸಿಕೊಡಬೇಕೆಂದು ಆಗ್ರಹಿಸಿ ಸಮಾಜ ಪರಿವರ್ತನಾ ವೇದಿಕೆ ಹಾಗೂ ಸ್ಥಳೀಯ ಜಮೀನುದಾರರು ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ರೈತರ ಸಮಸ್ಯೆಗೆ ಕಾರಣವೇನು?
ಕುಗಯ್ಯರ ಹಟ್ಟಿಯ ಮುಂಭಾಗದಲ್ಲಿರುವ ಜಮೀನುಗಳ ಮಾಲೀಕರು ಬೋರ್‌ವೆಲ್ ತೋಡಿಸಿಕೊಂಡು, ತಮ್ಮ ಹೊಲಗಳ ಸುತ್ತಲೂ ಬೇಲಿ ಹಾಕಿ ಹದ್ದುಬಸ್ತು ಮಾಡಿಕೊಂಡಿದ್ದಾರೆ. ಇದರಿಂದಾಗಿ ಹಿಂಭಾಗದಲ್ಲಿರುವ ಸರ್ವೆ ನಂಬರ್ 122, 130, 131, 132, 133, 134, 135, 162, 163, 164 ಹಾಗೂ 167 ರ ವ್ಯಾಪ್ತಿಯ ಜಮೀನುಗಳಿಗೆ ತಲುಪಲು ದಾರಿಯಿಲ್ಲದಂತಾಗಿದೆ.
ಇದರ ಜೊತೆಗೆ ಹೊಲಗಳ ಮಧ್ಯಭಾಗದಲ್ಲಿ ರೈಲು ಮಾರ್ಗವೂ ಹಾದುಹೋಗಿರುವುದರಿಂದ, ರೈತರು ತಮ್ಮ ಜಮೀನುಗಳಿಗೆ ತೆರಳಿ ದಿನನಿತ್ಯದ ಕೃಷಿ ಚಟುವಟಿಕೆಗಳನ್ನು ನಡೆಸಲು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಇದ್ದ ಸ್ವಲ್ಪ ದಾರಿಯಲ್ಲೂ ಸಂಚರಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.
ಖಾಯಂ ದಾರಿ ಗುರುತಿಸಲು ಮನವಿ: ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕಂದಾಯ ಇಲಾಖೆ ತಕ್ಷಣವೇ ಸ್ಥಳ ಪರಿಶೀಲನೆ ನಡೆಸಿ, ಜಮೀನುಗಳಿಗೆ ತೆರಳಲು ಖಾಯಂ ದಾರಿಯನ್ನು ಅಳತೆ ಮಾಡಿ ಗುರುತಿಸಿಕೊಡಬೇಕು ಎಂದು ರೈತ ಮುಖಂಡರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ವೈ. ನಾಗರಾಜ್, ಬೊಮ್ಮಣ್ಣ, ಕರಿಯಮ್ಮ, ಬಸಣ್ಣ, ಹೆಚ್. ತಿಪ್ಪೇಸ್ವಾಮಿ, ಹನುಮಂತಪ್ಪ, ಅನಂತಮ್ಮ (ಅನಂತಕ್ಕ), ತಮ್ಮಯ್ಯ, ಎಳನೀರು ಬಸವರಾಜ, ಎಂ. ಸಿದ್ದಪ್ಪ, ಸಣ್ಣ ಬೋರಯ್ಯ, ಗಿರಿಯಪ್ಪ, ಪಾತಯ್ಯ, ದುರ್ಗಮ್ಮ, ಅಂಜಿನಪ್ಪ ಸೇರಿದಂತೆ ಬಾಧಿತ ಜಮೀನಿನ ಮಾಲೀಕರು ಉಪಸ್ಥಿತರಿದ್ದರು.
ಸಮಾಜ ಪರಿವರ್ತನಾ ವೇದಿಕೆಯ ಮುಖ್ಯಸ್ಥರಾದ ಜಿ. ಪರಮೇಶ್, ಎಚ್. ವಿಜಯ್ ಕುಮಾರ್, ಚಿತ್ತಯ್ಯ, ಗೊಲ್ಲಾಳಪ್ಪ, ಆಸ್ಪತ್ರೆ ಅಂಜಿನಪ್ಪ, ಶರಣೇಶ, ನವೀನ್ ಕುಮಾರ್, ಭರತ್, ರಾಜು, ತರುಣ್, ಅಭಿಷೇಕ್, ಸತ್ಯನಾರಾಯಣ ಹಾಗೂ ಅನೇಕ ರೈತ ಮುಖಂಡರು ಭಾಗವಹಿಸಿ ತಹಶೀಲ್ದಾರ್ ಅವರಿಗೆ ಶೀಘ್ರ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.




