ಚಂದ್ರವಳ್ಳಿ ನ್ಯೂಸ್ ಬೆಂಗಳೂರು:
ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್ (MSIL) ಸಂಸ್ಥೆಯಲ್ಲಿ ವಿವಿಧ ಹಂತಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಬೃಹತ್ ಮತ್ತು ಮಧ್ಯಮ ಕೈಗೋಾರಿಕೆ ಸಚಿವರಾದ ಶ್ರೀ ಎಂ.ಬಿ. ಪಾಟೀಲ್ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.
ಎಂಎಸ್ಐಎಲ್ ಸಂಸ್ಥೆಯ ಹಿರಿಯ ಅಧಿಕಾರಿಗಳೊಂದಿಗೆ ಇಂದು ಉನ್ನತ ಮಟ್ಟದ ಸಭೆ ನಡೆಸಿದ ಸಚಿವರು, ನೇಮಕಾತಿ ಪ್ರಕ್ರಿಯೆಯ ಪ್ರಗತಿಯನ್ನು ಪರಿಶೀಲಿಸಿದರು. ಉದ್ಯೋಗಾಕಾಂಕ್ಷಿಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಹಾಗೂ ಸಂಸ್ಥೆಯ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಸಲುವಾಗಿ ಈ ಮಹತ್ವದ ಕ್ರಮ ಕೈಗೊಳ್ಳಲಾಗಿದೆ.
ಸಭೆಯ ಪ್ರಮುಖ ನಿರ್ಧಾರಗಳು:
ತ್ವರಿತ ನೇಮಕಾತಿ ಪ್ರಕ್ರಿಯೆ: ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿ ಪ್ರಕ್ರಿಯೆಗೆ ವೇಗ ನೀಡಿ, ನಿಗದಿತ ಅವಧಿಯೊಳಗೆ ಮುಕ್ತಾಯಗೊಳಿಸಬೇಕು.
ನೇಮಕಾತಿ ಪತ್ರ ವಿತರಣೆ: ಆಯ್ಕೆ ಪ್ರಕ್ರಿಯೆ ಮುಗಿಯುತ್ತಿದ್ದಂತೆ, ಅರ್ಹ ಅಭ್ಯರ್ಥಿಗಳಿಗೆ ಯಾವುದೇ ವಿಳಂಬವಿಲ್ಲದೆ ಶೀಘ್ರದಲ್ಲೇ ನೇಮಕಾತಿ ಪತ್ರಗಳನ್ನು (Appointment Letters) ವಿತರಿಸಲು ಅಗತ್ಯವಿರುವ ಎಲ್ಲಾ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಸಚಿವರು ಸೂಚಿಸಿದ್ದಾರೆ.



