ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜಿಲ್ಲೆಯಲ್ಲಿ ತೀವ್ರ ಮಳೆ ಕೊರತೆಯಿಂದಾಗಿ ಬೆಳೆಗಳು ಒಣಗಿ ಹೋಗುತ್ತಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಚಿತ್ರದುರ್ಗ, ಹೊಳಲ್ಕೆರೆ ಹಾಗೂ ಮೊಳಕಾಲ್ಮೂರು ತಾಲೂಕುಗಳನ್ನು ತಕ್ಷಣವೇ ‘ಬರಪೀಡಿತ ತಾಲೂಕುಗಳು’ ಎಂದು ಘೋಷಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಡಾ. ವಾಸುದೇವ ಮೇಟಿ ಬಣ) ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಮಳೆ ಇಲ್ಲದೆ ಕಮರಿಹೋದ ಬೆಳೆಗಳು: ರೈತರು ಬ್ಯಾಂಕ್ ಹಾಗೂ ಕೈಸಾಲ ಮಾಡಿ, ಕೊನೆಗೆ ಚಿನ್ನಾಭರಣಗಳನ್ನು ಅಡವಿಟ್ಟು ಬಿತ್ತನೆ ಬೀಜ ಮತ್ತು ಗೊಬ್ಬರ ತಂದು ಹೊಲಗಳಲ್ಲಿ ಬಿತ್ತನೆ ಮಾಡಿದ್ದರು. ಆದರೆ ಸೂಕ್ತ ಮಳೆಯಿಲ್ಲದೆ ಬಿತ್ತಿದ ಬೀಜಗಳು ಭೂಮಿಯಲ್ಲೇ ಮೊಳಕೆಯೊಡೆದು ಕಮರಿಹೋಗಿವೆ. ಇನ್ನು ಕೆಲವು ಕಡೆ ಮೆಕ್ಕೆಜೋಳ, ಸೂರ್ಯಕಾಂತಿ, ತೊಗರಿ, ಶೇಂಗಾ, ಈರುಳ್ಳಿ ಹಾಗೂ ತರಕಾರಿ ಬೆಳೆಗಳು ಕೇವಲ ಒಂದೆರಡು ಅಡಿ ಬೆಳೆದು ಒಣಗಿ ನಿಂತಿವೆ.
ಬೇರೆ ದಾರಿಯಿಲ್ಲದೆ ರೈತರು ಒಣಗಿದ ಬೆಳೆಗಳಿಗೆ ದನ-ಕರು, ಕುರಿ-ಮೇಕೆಗಳನ್ನು ಬಿಟ್ಟು ಮೇಯಿಸುತ್ತಿದ್ದಾರೆ. ಇನ್ನು ಕೆಲವು ಕಡೆ ಟ್ರ್ಯಾಕ್ಟರ್ ರೋಟವೇಟರ್ ಹೊಡೆಸಿ ಬೆಳೆಯನ್ನು ನಾಶಪಡಿಸುತ್ತಿದ್ದಾರೆ.
ಕುಡಿಯುವ ನೀರಿಗೂ ತಟವಟ:
ಹೊಳಲ್ಕೆರೆ ತಾಲೂಕಿನ ಕೊಳಹಾಳ್, ತೆಕಲವಟ್ಟಿ, ಕುಮಾರನಹಳ್ಳಿ ಹಾಗೂ ಚೌಡಗೊಂಡನಹಳ್ಳಿ ಗ್ರಾಮಗಳಲ್ಲಿ ಅಂತರ್ಜಲ ಮಟ್ಟ ಸಂಪೂರ್ಣ ಪಾತಾಳಕ್ಕೆ ಕುಸಿದಿದ್ದು, ಕುಡಿಯುವ ನೀರಿಗೂ ಹಾಹಾಕಾರ ಶುರುವಾಗಿದೆ. ಬೋರ್‌ವೆಲ್‌ಗಳಲ್ಲಿ ನೀರು ಬಾರದೆ ಅಡಿಕೆ ಮತ್ತು ತೆಂಗಿನ ಮರಗಳು ಒಣಗಿ ಹೋಗುತ್ತಿವೆ ಎಂದು ರೈತ ಮುಖಂಡರು ಅಳಲು ತೋಡಿಕೊಂಡರು.
ಕಪ್ಪು ಪಟ್ಟಿ ಪ್ರದರ್ಶನದ ಎಚ್ಚರಿಕೆ:
ಜಿಲ್ಲೆಯ ಈ ಮೂರೂ ತಾಲೂಕುಗಳನ್ನು ಕೂಡಲೇ ಬರಪೀಡಿತ ಪ್ರದೇಶಗಳೆಂದು ಘೋಷಿಸಬೇಕು. ಇಲ್ಲವಾದಲ್ಲಿ, ಮುಂಬರುವ ದಿನಗಳಲ್ಲಿ ಮುಖ್ಯಮಂತ್ರಿಗಳು ಚಿತ್ರದುರ್ಗ ಜಿಲ್ಲೆಗೆ ಯಾವ ಸಂದರ್ಭದಲ್ಲೇ ಭೇಟಿ ನೀಡಿದರೂ ಅವರಿಗೆ ಕಪ್ಪು ಪಟ್ಟಿ ಪ್ರದರ್ಶಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ರೈತ ಸಂಘದ ಪದಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಮನವಿ ಸಲ್ಲಿಸಿದ ಪದಾಧಿಕಾರಿಗಳು:
ಮನವಿ ಸಲ್ಲಿಕೆ ವೇಳೆ ಜಿಲ್ಲಾಧ್ಯಕ್ಷ ಇ.ಎನ್. ಲಕ್ಷ್ಮೀಕಾಂತ, ಮಹಿಳಾ ಜಿಲ್ಲಾಧ್ಯಕ್ಷೆ ಲೋಲಾಕ್ಷಮ್ಮ, ತಾಲೂಕು ಅಧ್ಯಕ್ಷರಾದ ಪವಿತ್ರ (ಚಿತ್ರದುರ್ಗ), ಮಂಜುಳ ಕೊಳಹಾಳ್ (ಹೊಳಲ್ಕೆರೆ), ಜಯಲಕ್ಷ್ಮಿ (ಚಳ್ಳಕೆರೆ), ಶಕುಂತಲ (ಹಿರಿಯೂರು) ಹಾಗೂ ರೈತ ಮುಖಂಡರಾದ ಓಬಳೇಶ್, ಕಾಂತರಾಜ್, ನಾಗರಾಜ್, ರಂಗಸ್ವಾಮಿ, ಹೇಮಾರೆಡ್ಡಿ, ತಿಪ್ಪೇಸ್ವಾಮಿ, ಗುಂಡೂರ್ ರಮೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.




