ಚಂದ್ರವಳ್ಳಿ ನ್ಯೂಸ್, ಬೆಂಗಳೂರು / ಪ್ಯಾರಿಸ್:
ಜಾಗತಿಕ ಮಟ್ಟದ ಪ್ರಮುಖ ಏರೋಸ್ಪೇಸ್ ಹಾಗೂ ರಕ್ಷಣಾ ತಂತ್ರಜ್ಞಾನ ಸಂಸ್ಥೆಯಾದ ‘ಸಫ್ರಾನ್’ ಕೇಂದ್ರಕ್ಕೆ ಭಾರಿ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್ ನೇತೃತ್ವದ ರಾಜ್ಯದ ಪ್ರತಿನಿಧಿ ನಿಯೋಗ ಭೇಟಿ ನೀಡಿದೆ. ಈ ಸಂದರ್ಭದಲ್ಲಿ ಕರ್ನಾಟಕದಲ್ಲಿ ಸಂಸ್ಥೆಯ ಉತ್ಪಾದನಾ ವಿಸ್ತರಣೆ ಮತ್ತು ಹೊಸ ಹೂಡಿಕೆ ಅವಕಾಶಗಳ ಕುರಿತು ಪ್ರಮುಖ ಚರ್ಚೆಗಳು ನಡೆದವು.
ಸಫ್ರಾನ್ ಎಲೆಕ್ಟ್ರಾನಿಕ್ಸ್ ಅಂಡ್ ಡಿಫೆನ್ಸ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಫ್ರಾಂಕ್ ಸಾವುಡೊ ಅವರೊಂದಿಗೆ ಸಚಿವರು ಮಾತುಕತೆ ನಡೆಸಿದರು. ರಾಜ್ಯದಲ್ಲಿ ಹೂಡಿಕೆ ವಾತಾವರಣ, ತಂತ್ರಜ್ಞಾನ ನಾವೀನ್ಯತೆ ಹಾಗೂ ಉದ್ಯೋಗ ಸೃಷ್ಟಿಯ ಕುರಿತು ಉಭಯ ನಾಯಕರು ಸಮಾಲೋಚನೆ ನಡೆಸಿದರು.
ಬೆಂಗಳೂರು ವಿಮಾನ ನಿಲ್ದಾಣದ ಬಳಿ ಹೊಸ ಘಟಕ: 400ಕ್ಕೂ ಹೆಚ್ಚು ಉದ್ಯೋಗ
‘ಗ್ಲೋಬಲ್ ಇನ್ವೆಸ್ಟರ್ಸ್ ಮೀಟ್’ ಸಂದರ್ಭದಲ್ಲಿ ಸಹಿ ಮಾಡಲಾದ ಒಪ್ಪಂದದಂತೆ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ 12,000 ಚದರ ಮೀಟರ್ ವಿಸ್ತೀರ್ಣದಲ್ಲಿ ಸಫ್ರಾನ್ ಸಂಸ್ಥೆಯ ಅತ್ಯಾಧುನಿಕ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಘಟಕ ನಿರ್ಮಾಣಗೊಳ್ಳುತ್ತಿದೆ. ಈ ಯೋಜನೆಯಿಂದ ರಾಜ್ಯದ 400ಕ್ಕೂ ಹೆಚ್ಚು ನುರಿತ ಯುವಕರಿಗೆ ಉದ್ಯೋಗಾವಕಾಶ ದೊರೆಯಲಿದೆ.
ಕಲ್ಯಾಣಿ ಟೆಕ್ ಪಾರ್ಕ್‌ನಲ್ಲಿ R&D ಕೇಂದ್ರ
ಈಗಾಗಲೇ ಬೆಂಗಳೂರಿನ ಕಲ್ಯಾಣಿ ಟೆಕ್ ಪಾರ್ಕ್‌ನಲ್ಲಿ 3,000 ಚದರ ಮೀಟರ್ ವಿಸ್ತೀರ್ಣದ ಸಂಶೋಧನೆ ಮತ್ತು ಅಭಿವೃದ್ಧಿ (R&D) ಕೇಂದ್ರ ಕಾರ್ಯಾಚರಿಸುತ್ತಿದ್ದು, ಇಲ್ಲಿ 250ಕ್ಕೂ ಹೆಚ್ಚು ಉನ್ನತ ಕೌಶಲ್ಯ ಹೊಂದಿದ ಎಂಜಿನಿಯರ್‌ಗಳು ಹಾಗೂ ತಜ್ಞರು ಕಾರ್ಯನಿರ್ವಹಿಸುತ್ತಿದ್ದಾರೆ. ಇದು ಕರ್ನಾಟಕದ ಮಾನವ ಸಂಪನ್ಮೂಲ ಮತ್ತು ತಾಂತ್ರಿಕ ಸಾಮರ್ಥ್ಯದ ಮೇಲೆ ಜಾಗತಿಕ ಸಂಸ್ಥೆಗಳು ಇಟ್ಟಿರುವ ವಿಶ್ವಾಸಕ್ಕೆ ಸಾಕ್ಷಿಯಾಗಿದೆ.
ಕರ್ನಾಟಕವನ್ನು ಏರೋಸ್ಪೇಸ್ ಹಬ್ ಮಾಡಲು ಬದ್ಧ: ಎಂ.ಬಿ. ಪಾಟೀಲ್
GIM ಸಂದರ್ಭದಲ್ಲಿ ಹೂಡಿಕೆ ಮಾಡಿದ ಯೋಜನೆಗಳು ಇಂದು ರಾಜ್ಯದಲ್ಲಿ ಉದ್ಯೋಗ ಮತ್ತು ಉತ್ಪಾದನೆಯ ರೂಪದಲ್ಲಿ ಫಲ ನೀಡುತ್ತಿರುವುದು ಹೆಮ್ಮೆಯ ವಿಚಾರ ಎಂದು ಸಚಿವರು ಸಂತಸ ವ್ಯಕ್ತಪಡಿಸಿದ್ದಾರೆ.
ಏವಿಯಾನಿಕ್ಸ್, ಬಾಹ್ಯಾಕಾಶ ಎಲೆಕ್ಟ್ರಾನಿಕ್ಸ್ ಹಾಗೂ ಅತ್ಯಾಧುನಿಕ ಏರೋಸ್ಪೇಸ್-ಡಿಫೆನ್ಸ್ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಕರ್ನಾಟಕದಲ್ಲಿ ಹೊಸ ಅವಕಾಶಗಳನ್ನು ಅನ್ವೇಷಿಸುವಂತೆ ಸಫ್ರಾನ್ ಸಂಸ್ಥೆಗೆ ಸಚಿವರು ಆಹ್ವಾನ ನೀಡಿದರು. ರಾಜ್ಯವನ್ನು ಜಾಗತಿಕ ಏರೋಸ್ಪೇಸ್ ಮತ್ತು ರಕ್ಷಣಾ ವಲಯದ ಪ್ರಮುಖ ಕೇಂದ್ರವನ್ನಾಗಿ ಬೆಳೆಸಲು ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಅವರು ಭರವಸೆ ನೀಡಿದರು.




