ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲೂಕಿನ ತೂಬಗೆರೆ ಹೋಬಳಿ ಕಾರಹಳ್ಳಿ ಗ್ರಾಮದಲ್ಲಿ ಹಾಡೋನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರ, ಕ್ರೆಡಿಟ್ ಆಕ್ಸೆಸ್ ಇಂಡಿಯಾ ಫೌಂಡೇಷನ್ ವತಿಯಿಂದ ದೇಸಿ ಜಾನುವಾರು ತಳಿಗಳ ಸಂರಕ್ಷಣಾ ತರಬೇತಿ ಮತ್ತು ಜಾನುವಾರುಗಳ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜನೆ ಮಾಡಲಾಗಿತ್ತು.
ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ (ಪ್ರಭಾರ)ರಾದ ಡಾ.ಜಿ.ಈಶ್ವರಪ್ಪ ಜಾನುವಾರು ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ ಆಗಿಂದಾಗ್ಗೆ ಜಾನುವಾರುಗಳ ಆರೋಗ್ಯ ತಪಾಸಣೆ ಮಾಡಿಸಿ, ಸೂಕ್ತ ಸಮಯಕ್ಕೆ ಲಸಿಕೆಗಳನ್ನು ನೀಡುವುದರಿಂದ ಅವುಗಳಿಗೆ ತಗಲುವ ರೋಗಗಳನ್ನು ಪ್ರಾರಂಭಿಕ ಹಂತದಲ್ಲಿಯೇ ನಿಯಂತ್ರಿಸ ಬಹುದೆಂದು ರೈತರಿಗೆ ಮನದಟ್ಟು ಮಾಡಿಕೊಟ್ಟರು.
ಶಿಬಿರದಲ್ಲಿ ಬೆಂಗಳೂರಿನ ಹೆಬ್ಬಾಳದ ಪಶು ವೈದ್ಯಕೀಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಅಹಮದ್ ಉಮರ್ ಪಾಷ ಮಾತನಾಡಿ ಮೇವಿನ ತಳಿಗಳ ಸುಧಾರಿತ ಬೇಸಾಯ ಕ್ರಮಗಳು ಹಾಗೂ ಉತ್ಕೃಷ್ಟ ಮೇವಿನ ಬೆಳೆಗಳಾದ ಸಿ-ಓ - 5, ಕುದುರೆ ಮಸಾಲೆ, 2 ಹುರುಳಿ, ಅಲಸಂದೆ ಮುಂತಾದ ಹಸಿ ಮೇವುಗಳನ್ನು 20 ಕೆ.ಜಿ. ಹಾಗೂ 5 ಕೆ.ಜಿ. ಒಣಹುಲ್ಲು ಅನುಪಾತದಲ್ಲಿ ಪ್ರತಿದಿನ ನೀಡುವುದರಿಂದ ರಾಸುಗಳ ಪೋಷಕಾಂಶ ನಿರ್ವಹಣೆ ಮಾಡಬಹುದೆಂದು ಸೂಚಿಸಿ, ಕರುಗಳಲ್ಲಿ ಜಂತು ನಾಶಕ ಔಷಧಿಗಳ ಮಹತ್ವವನ್ನು ತಿಳಿಸಿದರು.
ಈ ಶಿಬಿರಕ್ಕೆ ಬಂದ 60 ರಾಸುಗಳಿಗೆ ಜ್ವರ, ಕೆಮ್ಮು, ಹರ್ನಿಯಾ, ರಕ್ತಪಿಂಜರಿ, ಹೊಟ್ಟೆ ಉಬ್ಬರ, ಥೈಲೇರಿಯಾ, ವಿಷಬಾಧೆ, ಅಜೀರ್ಣ, ಪುನಾರವರ್ತಿತ ಸಂತಾನೋತ್ಪತ್ತಿ, ಚರ್ಮದ ಸೋಂಕು, ಗಾಯ, ಕೆಚ್ಚಲು ಭಾವು, ಜಂತು ಹುಳು ಬಾಧೆ, ಉಣ್ಣೆ ಹುಳುವಿನ ಬಾಧೆ ಇತ್ಯಾದಿ ಸಮಸ್ಯೆಗಳ ಕುರಿತು ತಪಾಸಣೆ ನಡೆಸಿ ಚಿಕಿತ್ಸೆ ನೀಡಿದರು. ಈ ಶಿಬಿರದಲ್ಲಿ ಪಶು ವೈದ್ಯ ಡಾ.ಭರತ್, ರಾಸುಗಳ ವಿವಿಧ ಕಾಯಿಲೆಗಳಿಗೆ ನಾಟಿ ಔಷಧಿ ಬಳಕೆ, ಗರ್ಭಾವಸ್ಥೆ ರಾಸುಗಳ ಆರೈಕೆ, ಪಶು ಆಹಾರ, ವಿವಿಧ ಲಸಿಕೆಗಳ ಬಗ್ಗೆ ತಿಳಿವಳಿಕೆ ನೀಡಿದರು.
ಬೆಂಗಳೂರಿನ ಕ್ರೆಡಿಟ್ ಆ್ಯಕ್ಸೆಸ್ ಇಂಡಿಯಾ ಫೌಂಡೇಷನ್‌ನಿಂದ ಕ್ಯಾಲ್ಸಿಯಂ ಪೂರಕಗಳು, ಮಲ್ಟಿ ವಿಟಮಿನ್‌ಗಳನ್ನು ಜಾನುವಾರುಗಳಿಗೆ ಉಚಿತವಾಗಿ ನೀಡಲಾಯಿತು.
ಈ ಸಂದರ್ಭದಲ್ಲೌ ಕೃಷಿ ವಿಜ್ಞಾನ ಕೇಂದ್ರದ ಬೇಸಾಯಶಾಸ್ತ್ರ ವಿಜ್ಞಾನಿ ಡಾ.ಜಿ.ಕೆ.ನಿಂಗರಾಜು, ಕೃಷಿ ವಿಸ್ತರಣಾ ವಿಜ್ಞಾನಿ ಡಾ.ವೈ. ಎಂ.ಗೋಪಾಲ್, ಕಾರಹಳ್ಳಿ ಡೇರಿ ಅಧ್ಯಕ್ಷ ಮುನೇಗೌಡ, ಉಪಾಧ್ಯಕ್ಷ ನಾಗರತ್ನಮ್ಮ, ಗ್ರಾಮದ ಮುಖಂಡರು ಹಾಜರಿದ್ದರು.




