ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಭೀಮನಬಂಡೆಯ ‘ಯಾಜ್ಞವಲ್ಕ್ಯ ಸಿಬಿಎಸ್‌ಇ ಶಾಲೆ’ ಒಂದು ಮಹತ್ವದ ಮೈಲಿಗಲ್ಲು ಸಾಧಿಸಿದ್ದು, ಗ್ರಾಮೀಣ ಭಾಗದ ಶಾಲೆಯಾಗಿ ರಾಷ್ಟ್ರ ಮಟ್ಟದಲ್ಲಿ ರಾಜ್ಯದ ಹೆಸರನ್ನು ಉನ್ನತ ಎತ್ತರಕ್ಕೆ ಕೊಂಡೊಯ್ದಿದೆ.
ಶಾಲೆಯ ವಿದ್ಯಾರ್ಥಿಗಳು ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ, ಅವರೊಂದಿಗೆ ವೈಯಕ್ತಿಕವಾಗಿ ಸಂವಾದ ನಡೆಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಕರ್ನಾಟಕಕ್ಕೆ ಹೆಮ್ಮೆಯ ಗರಿ:
ರಾಷ್ಟ್ರಪತಿಯವರನ್ನು ಭೇಟಿಯಾಗುವ ಈ ಅಪರೂಪದ ಹಾಗೂ ಪ್ರತಿಷ್ಠಿತ ಅವಕಾಶ ಪಡೆದ ಕರ್ನಾಟಕದ ಏಕೈಕ ಶಾಲೆ 'ಯಾಜ್ಞವಲ್ಕ್ಯ ಸಿಬಿಎಸ್‌ಇ ಶಾಲೆ' ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಕುರಿತು ಶಾಲೆಯಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಸಂಸ್ಥಾಪಕರಾದ ಸುರೇಶ್‌ಟಿ ಅವರು, "ಒಂದು ಸಣ್ಣ ಗ್ರಾಮೀಣ ಪ್ರದೇಶದಿಂದ ರಾಷ್ಟ್ರ ರಾಜಧಾನಿಯವರೆಗಿನ ನಮ್ಮ ವಿದ್ಯಾರ್ಥಿಗಳ ಈ ಪಯಣವು ಗ್ರಾಮೀಣ ಭಾರತದ ಪ್ರತಿಭೆ ಮತ್ತು ಸಾಮರ್ಥ್ಯಕ್ಕೆ ಉಜ್ವಲ ಸಾಕ್ಷಿಯಾಗಿದೆ. ಇದು ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಮತ್ತು ಇಡೀ ಸಂಸ್ಥೆಗೆ ಅಪಾರ ಹೆಮ್ಮೆ ತಂದಿದೆ" ಎಂದು ಹರ್ಷ ವ್ಯಕ್ತಪಡಿಸಿದರು.
ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಸಾಧನೆಗಳು:
ವೈ.ಪಿ.ಎಸ್ ವಿದ್ಯಾರ್ಥಿಗಳು ಶೈಕ್ಷಣಿಕ ಕ್ಷೇತ್ರದ ಜೊತೆಗೆ ವಿವಿಧ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ನಿರಂತರವಾಗಿ ಸಾಧನೆ ಮಾಡುತ್ತಾ ಬಂದಿದ್ದಾರೆ.
International Green Olympiad ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ ಪ್ರಥಮ ಸ್ಥಾನ.
ಐಐಟಿ ಬೊಂಬಾಯಿ ನಡೆಸಿದ International Entrepreneurship Olympiad ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ ಪ್ರಥಮ ಸ್ಥಾನ.
ISKCON Heritage Fest ನ ರಾಜ್ಯ ಮಟ್ಟದ ಅಂತರಶಾಲಾ ಸ್ಪರ್ಧೆಗಳಲ್ಲಿ ವಿವಿಧ ವಿಭಾಗಗಳಲ್ಲಿ ಹಲವಾರು ಬಹುಮಾನ ಮತ್ತು ಪ್ರಶಸ್ತಿಗಳು.
ಶೈಕ್ಷಣಿಕ ಹಾಗೂ ನಾಯಕತ್ವ ಗುಣಗಳ ವರ್ಧನೆ:
ವಿದ್ಯಾರ್ಥಿಗಳಲ್ಲಿ ಕೌಶಲ್ಯ, ಆತ್ಮವಿಶ್ವಾಸ, ಸಂವಹನ సామರ್ಥ್ಯ ಮತ್ತು ನಾಯಕತ್ವ ಗುಣಗಳನ್ನು ರೂಪಿಸುವಲ್ಲಿ ಶಾಲೆ ನಿರಂತರವಾಗಿ ಶ್ರಮಿಸುತ್ತಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೂ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಲು ಸೂಕ್ತ ವೇದಿಕೆ ಮತ್ತು ಅವಕಾಶಗಳನ್ನು ಕಲ್ಪಿಸುತ್ತಿರುವುದೇ ಈ ದೊಡ್ಡ ಮಟ್ಟದ ಯಶಸ್ಸಿಗೆ ಕಾರಣವಾಗಿದೆ.
ರಾಷ್ಟ್ರಪತಿಗಳ ಸ್ಪೂರ್ತಿದಾಯಕ ಸಂದೇಶ:
ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಮಾನ್ಯ ರಾಷ್ಟ್ರಪತಿಯವರು, ವಿದ್ಯಾರ್ಥಿಗಳಿಗೆ ಪ್ರೇರಣೆಯಾಗುವಂತೆ ನಾಲ್ಕು ಮುಖ್ಯ ಸಂದೇಶಗಳನ್ನು ನೀಡಿದರು.
ಇನ್ನೂ ದೊಡ್ಡ ಕನಸುಗಳನ್ನು ಕಾಣಿರಿ.
ನಿರಂತರವಾಗಿ ಕಲಿಯುವ ಹವ್ಯಾಸ ಬೆಳಸಿಕೊಳ್ಳಿ.
ಧೈರ್ಯದಿಂದ ಸ್ಪರ್ಧೆಯನ್ನು ಎದುರಿಸಿ.
ನಿಸ್ವಾರ್ಥ ಮನಸ್ಸಿನಿಂದ ದೇಶದ ಸೇವೆ ಮಾಡಿ.
ದೆಹಲಿ ಹಾಗೂ ಸಾಂಸ್ಕೃತಿಕ ಪ್ರವಾಸ:
ಈ ಐತಿಹಾಸಿಕ ಭೇಟಿಯ ಭಾಗವಾಗಿ ವಿದ್ಯಾರ್ಥಿಗಳು ವಾರಾಣಸಿ, ಅಯೋಧ್ಯೆ, ಮಥುರಾ ಮತ್ತು ವೃಂದಾವನ ಸೇರಿದಂತೆ ಹಲವು ಧಾರ್ಮಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಿಗೆ ಭೇಟಿ ನೀಡಿದರು. ಜೊತೆಗೆ ನವದೆಹಲಿಯ ರಾಷ್ಟ್ರಪತಿ ಭವನ, ಸಂಸತ್ ಭವನ, ಕೆಂಪುಕೋಟೆ, ರಾಜ್‌ಘಾಟ್, ಸುಪ್ರೀಂ ಕೋರ್ಟ್ ಹಾಗೂ ಅಕ್ಷರಧಾಮ ದೇವಾಲಯಗಳನ್ನು ವೀಕ್ಷಿಸಿ ಅಪಾರ ಜ್ಞಾನ ಮತ್ತು ಅನುಭವವನ್ನು ಪಡೆದುಕೊಂಡರು.
ಭಾಗವಹಿಸಿದ ವಿದ್ಯಾರ್ಥಿಗಳು ಮತ್ತು ಮಾರ್ಗದರ್ಶಕರು:
ಈ ಐತಿಹಾಸಿಕ ಸಂದರ್ಭದಲ್ಲಿ ಶಾಲೆಯ 9ನೇ ತರಗತಿಯ ವಿದ್ಯಾರ್ಥಿಗಳಾದ ಪುನೀತ್ ಎಸ್, ಧರ್ಮವೀರ ಪಿ, ಅನನ್ಯಾ ಎಸ್, ನಯನಾ ಎಸ್. ಬಿ, ಮತ್ತು ಹನ್ಸಿಕಾ ಎನ್ ಭಾಗವಹಿಸಿದ್ದರು. ವಿದ್ಯಾರ್ಥಿಗಳಿಗೆ ಶಾಲೆಯ ಉಪ ಪ್ರಾಂಶುಪಾಲರಾದ ನವೀನ್ ಪ್ರಭು .ಎಂ. ಪಿ. ಅವರು ಮಾರ್ಗದರ್ಶಕರಾಗಿ ಸಾಥ್ ನೀಡಿದ್ದರು.
"ಪ್ರತಿಭೆಗೆ ಭೌಗೋಳಿಕ ಗಡಿಗಳಿಲ್ಲ, ಭೀಮನಬಂಡೆಯಲ್ಲಿ ಚಿಗುರಿದ ಕನಸು ಇಂದು ರಾಷ್ಟ್ರದ ಅತ್ಯುನ್ನತ ವೇದಿಕೆಯನ್ನು ತಲುಪಿದೆ" ಎಂಬುದಕ್ಕೆ ಈ ಸಾಧನೆಯೇ ಪ್ರತ್ಯಕ್ಷ ಸಾಕ್ಷಿ.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಪ್ರಮುಖರಾದ ಶ್ರೀಶಾನ್, ನವೀನ್‌ಪ್ರಭು, ಶ್ರೀನಿವಾಸ್‌ಮೂರ್ತಿ ಹಾಗೂ ಪ್ರಶಾಂತ್‌ಉಪಸ್ಥಿತರಿದ್ದರು.




