ಚಂದ್ರವಳ್ಳಿ ನ್ಯೂಸ್, ಚಿಕ್ಕಮಗಳೂರು:
'ಯೂತ್ ಫಾರ್ ನೇಷನ್' ಚಿಕ್ಕಮಗಳೂರು ಘಟಕದ ವತಿಯಿಂದ "ಪರೀಕ್ಷೆಯಿಂದ ಪರಿವರ್ತನೆಗೆ" ಎಂಬ ವಿಶೇಷ ಕಾರ್ಯಕ್ರಮ ಹಾಗೂ ನೀಟ್ ಪರೀಕ್ಷಾರ್ಥಿಗಳೊಂದಿಗೆ ಸಂವಾದ ಮತ್ತು ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭವನ್ನು ಆಯೋಜಿಸಲಾಗಿತ್ತು.
ಚಿಕ್ಕಮಗಳೂರಿನ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಆಯೋಜಿಸಲಾಗಿರುವ ಈ ಕಾರ್ಯಕ್ರಮದಲ್ಲಿ, ನೀಟ್ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದು ಸಾಧನೆ ಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಗೌರವಿಸಲಾಯಿತು.

"ಶಿಕ್ಷಣವೇ ಶಕ್ತಿ, ಯುವಶಕ್ತಿಯೇ ರಾಷ್ಟ್ರಶಕ್ತಿ" ಹಾಗೂ "ನಿಮ್ಮ ಕನಸುಗಳಿಗೆ ದಿಕ್ಕು ಕೊಡಲು ನಾವು ನಿಮ್ಮೊಂದಿಗಿದ್ದೇವೆ" ಎಂದು ಮುಖ್ಯ ಅತಿಥಿಗಳು ವಿದ್ಯಾರ್ಥಿಗಳಲ್ಲಿ ವಿಧಾನ ಪರಿಷತ್ ಶಾಸಕ ಸಿ.ಟಿ ರವಿ ಅವರು ಉತ್ತೇಜನ ತುಂಬಿದರು.
ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಉದ್ಘಾಟಿಸಿ ಮಕ್ಕಳಿಗೆ ದೇಶಭಕ್ತಿ ಕುರಿತು ಮಹತ್ವದ ಸಂದೇಶ ಸಾರಿದರು.
ವಿದ್ಯಾರ್ಥಿ ಪರಿಷತ್ತಿನ ರಾಜ್ಯ ಉಪಾಧ್ಯಕ್ಷರು ಹಾಗೂ ಉಪನ್ಯಾಸಕ ಬಿ. ಕುಮಾರೇಗೌಡ ಅವರು ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ಪಾಲನೆ, ಸತತ ಪರಿಶ್ರಮ ಇದ್ದರೆ ಸಾಧನೆ ಸುಲಭ ಎಂದು ಹೇಳಿದರು.
ಯುವ ಮುಖಂಡರಾದ ಮಾಲತೇಶ್ ಸಿಗಸೆ, ಪುಣ್ಯಪಾಲ್, ಯೂತ್ ಫಾರ್ ನೇಷನ್ ಸಂಚಾಲಕ ಸಂತೋಷ್ ಕೋಟ್ಯಾನ್ ಮತ್ತಿತರರು ಇದ್ದರು.
ತಶಿ ಸನಾತನ ವೇದಿಕೆಗೆ ಗಣ್ಯರ ಆಹ್ವಾನಿಸಿದರು. ರವೀಂದ್ರ ಪ್ರಭು ಅವರು ವಂದೇ ಮಾತರಂ ಗೀತೆ ಗಾಯನ ಮಾಡಿದರು. ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ರಾಜೇಶ್ ಕಲ್ಲೊಡ್ಡಿ ಸ್ವಾಗತಿಸಿದರು. ಯುವ ಮುಖಂಡ ಪುಣ್ಯಪಾಲ್ ಪ್ರಾಸ್ತಾವಿಕ ನುಡಿಗಳನ್ನು ಆಡಿದರು.



