ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಆರ್‌ಎಸ್‌ಎಸ್ ವಿಷಯದಲ್ಲಿ ನನ್ನನ್ನು ಪ್ರಶ್ನಿಸುವ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಮೊದಲು ತಮ್ಮ ಮಗ 'ಮರಿ ಅಶೋಕ್' ಮತ್ತು ತಮ್ಮದೇ ಪಕ್ಷದ ವಿರುದ್ಧ ಎದ್ದಿರುವ ಗಂಭೀರ ಪ್ರಶ್ನೆಗಳಿಗೆ ಉತ್ತರಿಸಲಿ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಹಾಗೂ ಮಾಧ್ಯಮಗಳ ಮುಂದೆ ಸರಣಿ ಪ್ರಶ್ನೆಗಳನ್ನು ಎಸೆದಿರುವ ಪ್ರಿಯಾಂಕ್ ಖರ್ಗೆ, ಆರ್‌ಎಸ್‌ಎಸ್ ಹಾಗೂ ಕೆಪಿಎಸ್‌ಸಿ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಆರ್. ಅಶೋಕ್ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ.
ಮರಿ ಅಶೋಕ್ ಏಕಿಲ್ಲ 'ಗಣವೇಶ'?: "ಆರ್‌ಎಸ್‌ಎಸ್ ಬಗ್ಗೆ ಪ್ರಶ್ನೆ ಮಾಡುತ್ತಿರುವ 'ಮರಿ ಖರ್ಗೆ' ಬಗ್ಗೆ ನಿಮಗೆ ತುಂಬಾ ಚಿಂತೆ ಇದ್ದಂತಿದೆ. ಆದರೆ 'ಮರಿ ಅಶೋಕ್' ಇದುವರೆಗೆ ಏಕಾಗಿ ಆರ್‌ಎಸ್‌ಎಸ್ ಗಣವೇಶ ಧರಿಸಿಲ್ಲ? ಗೋಶಾಲೆಯಲ್ಲಿ ಗೋಮೂತ್ರ ಸೇವಿಸುತ್ತಿಲ್ಲವೇಕೆ? ಇನ್ನೂ 'ಧರ್ಮರಕ್ಷಕ'ನಾಗಿ ಏಕೆ ಬದಲಾಗಿಲ್ಲ? ಹಿರಿ ಅಶೋಕ್ ಅವರು ಇದಕ್ಕೆ ಮೊದಲು ಉತ್ತರ ನೀಡಲಿ" ಎಂದು ಚಾಟಿ ಬೀಸಿದ್ದಾರೆ.
ಕೆಪಿಎಸ್‌ಸಿ ನೇಮಕಾತಿ ಅಕ್ರಮದ ಮೌನ ಏಕೆ?: ಕೆಪಿಎಸ್‌ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮದ ಪ್ರಮುಖ ಆರೋಪಿಗಳಾದ ಶಿವಶಂಕರಪ್ಪ ಸಾಹುಕಾರ್ ಹಾಗೂ ಬಸವರಾಜ ಕನ್ನಾಳೆ ಕುರಿತು ಆರ್. ಅಶೋಕ್ ಯಾವಾಗ ಮಾತನಾಡುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ನೇಮಕಾತಿ ಹಣ ಸಂದಾಯದ ಆರೋಪ: ಕೆಪಿಎಸ್‌ಸಿ ಅಧ್ಯಕ್ಷರು ಮತ್ತು ಸದಸ್ಯರ ನೇಮಕಕ್ಕಾಗಿ ಬಿಜೆಪಿ ನಾಯಕರಿಗೆ ಎಷ್ಟು ಮೊತ್ತದ ಹಣ ಸಂದಾಯವಾಗಿದೆ ಎಂಬುದನ್ನು ಬಿಜೆಪಿ ಬಹಿರಂಗಪಡಿಸಬೇಕಿದೆ.
ಪಕ್ಷದ ನಾಯಕರ ಫೋಟೋ ರಹಸ್ಯ: ಬಿಜೆಪಿ ನಾಯಕರು ತಮ್ಮದೇ ಪಕ್ಷಕ್ಕೆ ಸೇರಿದ ನಾಯಕರ ಅಕ್ರಮ ಹಾಗೂ ವೈರಲ್ ಚಿತ್ರಗಳ ಬಗ್ಗೆ ಮಾತನಾಡದೆ ಮೌನಕ್ಕೆ ಶರಣಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.
ಆರ್‌ಎಸ್‌ಎಸ್ ಹಾಗೂ ಕೆಪಿಎಸ್‌ಸಿ ವಿಚಾರದಲ್ಲಿ ವಿಪಕ್ಷಗಳು ಅನಗತ್ಯ ರಾಜಕೀಯ ಮಾಡುತ್ತಿದ್ದು, ತಮ್ಮ ಸಾಲು ಸಾಲು ಪ್ರಶ್ನೆಗಳಿಗೆ ಶೀಘ್ರವೇ ಸ್ಪಷ್ಟ ಉತ್ತರ ನೀಡಬೇಕೆಂದು ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ.




