Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕೆರೆಗಳ ಒತ್ತುವರಿ ತಡೆಗೆ ಜಿಯೋ ಫೆನ್ಸಿಂಗ್-ಎಡಿಸಿ ಬಿ.ಟಿ.ಕುಮಾರಸ್ವಾಮಿ

Advertisement
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕೆರೆಗಳ ಒತ್ತುವರಿ ತಡೆಗೆ ಜಿಯೋ ಫೆನ್ಸಿಂಗ್ ಹಾಗೂ ವಿಸ್ತೀರ್ಣದ ಮಾಹಿತಿ ಇರುವ ಫಲಕಗಳನ್ನು ಅಳವಡಿಸುವಂತೆ ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಅವರು ಸೂಚಿನೆ ನೀಡಿದರು.
ಸಮುದಾಯ ಆಧಾರಿತ ಕೆರೆ ಬಳಕೆದಾರರ ಸಂಘಗಳಿಗೆ ಕೆರೆಗಳ ನಿರ್ವಹಣೆ ಮತ್ತು ಸಂರಕ್ಷಣೆ ಹೊಣೆ ವಹಿಸುವ ಕುರಿತು ಮಂಗಳವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಮಟ್ಟದ ಕೆರೆ ಸಂರಕ್ಷಣೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


ಒತ್ತುವರಿಯಿಂದ ಜಿಲ್ಲೆಯಲ್ಲಿ ಕೆರೆಗಳ ವಿಸ್ತೀರ್ಣ ಕಡಿಮೆಯಾಗುತ್ತಿರುವುದು ಆತಂಕಕಾರಿ ವಿಷಯವಾಗಿದ್ದು, ಕೆರೆಗಳ ಮೂಲ ಸ್ವರೂಪವನ್ನು ಉಳಿಸಿಕೊಳ್ಳಲು, ಅಧಿಕಾರಿಗಳು ಮತ್ತು ಸಾರ್ವಜನಿಕರು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಕೆರೆಗಳ ಸರ್ವೆ ಮಾಡಿಸಿ ಗಡಿ ಗುರುತಿಸಬೇಕು. ಕೆರೆಯ ಗಡಿಭಾಗದಲ್ಲಿ ದೊಡ್ಡ ಮಟ್ಟದ ಕಂದಕಗಳನ್ನು ತೋಡಿ, ಅಲ್ಲಿ ಸಾಲು ಮರಗಳನ್ನು ನೆಡುವ ಮೂಲಕ ಜಿಯೋ ಫೆನ್ಸಿಂಗ್' ಮಾಡಬೇಕು. ಇದರಿಂದ ಭವಿಷ್ಯದಲ್ಲಿ ಒತ್ತುವರಿಯಾಗುವುದನ್ನು ತಡೆಯಬಹುದು ಎಂದರು.

ಪ್ರತಿಯೊಂದು ಕೆರೆಯ ಗಡಿ ಮತ್ತು ವಿಸ್ತೀರ್ಣದ ಬಗ್ಗೆ ಸಾರ್ವಜನಿಕರಿಗೆ ಸ್ಪಷ್ಟ ಮಾಹಿತಿ ಇರಬೇಕು. ಈ ನಿಟ್ಟಿನಲ್ಲಿ ಕೆರೆಯ ಮಾಲೀಕತ್ವ, ಸರ್ವೆ ನಂಬರ್, ನಿಖರ ವಿಸ್ತೀರ್ಣ ಮತ್ತು ಸಮುದ್ರ ಮಟ್ಟದಿಂದ ಇರುವ ಎತ್ತರವನ್ನು ಒಳಗೊಂಡ ಮಾಹಿತಿ ಫಲಕಗಳನ್ನು ಇಲಾಖೆಯ ಅನುದಾನದಲ್ಲಿ ಅಳವಡಿಸಬೇಕು. ಇದರೊಂದಿಗೆ ಪ್ರತಿಯೊಂದು ಕೆರೆಯ ಬಳಿ ಕಡ್ಡಾಯವಾಗಿ ನಾಮಫಲಕಗಳನ್ನು ಅಳವಡಿಸಬೇಕು. ಕೆರೆಗೆ ಹಾನಿ ಮಾಡಿದರೆ ಅಥವಾ ಅಕ್ರಮ ಎಸಗಿದರೆ ಕಾನೂನು ಪ್ರಕಾರ ಎಂತಹ ಶಿಕ್ಷೆಯಾಗುತ್ತದೆ ಎಂಬ ಮಾಹಿತಿಯುಳ್ಳ ಎಚ್ಚರಿಕೆ ಫಲಕಗಳನ್ನು ಅಳವಡಿಸಿ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಸೂಚಿಸಿದರು.

ಜಿಲ್ಲೆಯ ಕೆರೆಗಳ ನೈಸರ್ಗಿಕ ಸ್ವರೂಪವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕೋಡಿಗಳನ್ನು ವೈಜ್ಞಾನಿಕವಾಗಿ ನಿರ್ವಹಿಸಬೇಕು. ಕೆರೆ ಕೋಡಿ ಎತ್ತರದಲ್ಲಿ ಬದಲಾವಣೆ ಮಾಡಬಾರದು. ಕೆರೆಗೆ ನೀರು ಹರಿದು ಬರುವ ಮೂಲಗಳಾದ ರಾಜಕಾಲುವೆಗಳು ಮತ್ತು ಹರಿವಿನ ಹಾದಿಗಳು ಗಿಡಗಂಟೆಗಳಿಂದ ಮುಚ್ಚಿಹೋಗಿವೆ. ಇದರಿಂದ ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿಯದೆ ಹೊಲಗದ್ದೆಗಳಿಗೆ ನುಗ್ಗಿ ಬೆಳೆ ಹಾನಿಯಾಗುತ್ತಿದೆ.



ಕನಿಷ್ಠ ಎರಡು ಅಥವಾ ಮೂರು ವರ್ಷಕ್ಕೊಮ್ಮೆಯಾದರೂ ಈ ಹರಿವಿನ ಹಾದಿಗಳನ್ನು ಸ್ವಚ್ಛಗೊಳಿಸಿ, ನೀರು ಸರಾಗವಾಗಿ ಕೆರೆ ಸೇರುವಂತೆ ವ್ಯವಸ್ಥೆ ಮಾಡಬೇಕು. ಕೆರೆ ಕೇವಲ ಒಂದು ಇಲಾಖೆಯ ಸ್ವತ್ತಲ್ಲ, ಅದು ಸಾರ್ವಜನಿಕ ಸ್ವತ್ತು. ಸಣ್ಣ ನೀರಾವರಿ ಇಲಾಖೆ, ಜಿಲ್ಲಾ ಪಂಚಾಯತ್ ಮತ್ತು ಕಂದಾಯ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ಕೆರೆಗಳ ರಕ್ಷಣೆ ಮಾಡಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ನಿರ್ದೇಶಿಸಿದರು.

ಕೆರೆಗಳಲ್ಲಿ ಹೂಳು ಎತ್ತುವ ಕಾರ್ಯಕ್ಕೆ ಆದ್ಯತೆ ನೀಡಬೇಕು. ರೈತರು ತಮ್ಮ ಜಮೀನುಗಳಿಗೆ ಮಣ್ಣು ಸಾಗಿಸಲು ಕೆರೆ ಸಂಘಗಳ ಸಹಭಾಗಿತ್ವದಲ್ಲಿ ಕೆಲಸ ಮಾಡಬೇಕು. ಕೆರೆಗಳಲ್ಲಿ ಹೂಳೆತ್ತುವ ನೆಪದಲ್ಲಿ ಜೆಸಿಬಿ ಬಳಸಿ ಆಳವಾಗಿ ಮಣ್ಣು ತೆಗೆಯುವುದು ಅವೈಜ್ಞಾನಿಕ. ಇಲಾಖೆಯ ನಿಯಮದಂತೆ ಮಾತ್ರ ಹೂಳೆತ್ತಲು ಅವಕಾಶವಿದೆ. ಹೂಳೆತ್ತುವ ಪ್ರಕ್ರಿಯೆಯನ್ನು ಅಧಿಕಾರಿಗಳು ನಿರಂತರವಾಗಿ ಮೇಲ್ವಿಚಾರಣೆ ಮಾಡಬೇಕು. ಕೃಷಿ ಉದ್ದೇಶಕ್ಕೆ ಮಾತ್ರ ಹೂಳು ತೆಗೆಯಲು ಆದ್ಯತೆ ನೀಡಬೇಕು. ವಾಣಿಜ್ಯ ಉದ್ದೇಶಕ್ಕಾಗಿ ಮರಳು ಅಥವಾ ಗ್ರಾವೆಲ್ ತೆಗೆಯುವುದಕ್ಕೆ ಅವಕಾಶ ನೀಡಬಾರದು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ಭವಿಷ್ಯದ ದಿನಗಳಲ್ಲಿ ನೀರಿನ ಅಭಾವ ಎದುರಾಗುವ ಸಾಧ್ಯತೆಗಳಿರುತ್ತವೆ, ಹೀಗಾಗಿ ಜಲಮೂಲಗಳ ರಕ್ಷಣೆ ಅತಿ ಮುಖ್ಯವಾಗಿದೆ. ಅಧಿಕಾರಿಗಳು ಕೆರೆಗಳ ಅಭಿವೃದ್ಧಿಗೆ ಅಗತ್ಯವಿರುವ ಅಂದಾಜು ಪಟ್ಟಿ ಸಿದ್ಧಪಡಿಸಿ, ಜಿಲ್ಲಾ ಖನಿಜ ಪ್ರತಿಷ್ಠಾನ ಅಥವಾ ಲಭ್ಯವಿರುವ ಇತರ ಅನುದಾನಗಳ ಮೂಲಕ ಕಾಮಗಾರಿ ಕೈಗೊಳ್ಳಲು ಪ್ರಸ್ತಾವನೆ ಸಲ್ಲಿಸುಬೇಕು. ಕೆರೆಗಳ ಮೀನು ಹರಾಜು ಪ್ರಕ್ರಿಯೆ ಮತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಸಂಘ-ಸಂಸ್ಥೆಗಳು ಸಲ್ಲಿಸಿರುವ ಮನವಿಯನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ತಿಳಿಸಿದರು.

ಸಣ್ಣ ನೀರಾವರಿ ಇಲಾಖೆ ಕಾರ್ಯಪಾಲಕ ಅಭಿಯಂತರ ಮೇಘರಾಜ್.ಕೆ.ಎಂ., ಹೆಚ್.ಜಿ.ಅಣ್ಣಪ್ಪ, ಪಂಚಾಯತ್ ರಾಜ್ ಕಾರ್ಯಪಾಲಕ ಅಭಿಯಂತರ ಅವಿನಾಶ್.ಎಸ್, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಸೋಮಶೇಖರ್, ಕೆರೆ ಬಳಕೆದಾರರ ಸಂಘದ ಅಧ್ಯಕ್ಷ ನಾಗರಾಜಯ್ಯ, ಕಾರ್ಯದರ್ಶಿ ಜಿ.ಆರ್.ನಾಗರಾಜ್ ಸೇರಿದಂತೆ ಮತ್ತಿರರು ಸಭೆಯಲ್ಲಿ ಉಪಸ್ಥಿತರಿದ್ದರು.
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ