ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಚಿತ್ರದುರ್ಗ ಜಿಲ್ಲೆಯ ರೈತರಿಗೆ ’ಪುನರ್‌ರಚಿತ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿಯಲ್ಲಿ ಬಾಕಿ ಇರುವ ವಿಮಾ ಮೊತ್ತವನ್ನು ಶೀಘ್ರವಾಗಿ ಬಿಡುಗಡೆಗೊಳಿಸುವಂತೆ ಒತ್ತಾಯಿಸಿ ಸಂಸದರಾದ ಗೋವಿಂದ ಎಂ.ಕಾರಜೋಳ ರವರು ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್‌ರವರನ್ನು ದೆಹಲಿಯಲ್ಲಿ ಭೇಟಿ ಮಾಡಿ ವಿಮಾ ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಿದರು.
ಮನವಿ ಪತ್ರದಲ್ಲಿ ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ರೈತರಿಗೆ ’ಪುನರ್‌ರಚಿತ ಹವಾಮಾನ ಆಧಾರಿದ ಬೆಳೆ ವಿಮೆ ಯೋಜನೆ’ ಅಡಿಯಲ್ಲಿ ವಿಮಾ ಮೊತ್ತ ಬಿಡುಗಡೆಯಾಗುವಲ್ಲಿ ತೀವ್ರ ವಿಳಂಬವಾಗಿರುತ್ತದೆ. ಇದರಿಂದ ಕೃಷಿ ಸಮುದಾಯಕ್ಕೆ ತೀವ್ರ ಸಂಕಷ್ಟವನ್ನುಂಟು ಮಾಡಿದೆ.
ಪ್ರಸುತ ಚಿತ್ರದುರ್ಗ ಜಿಲ್ಲೆಯ ಒಟ್ಟು ೪,೮೪೩ ರೈತರು ಈ ಯೋಜನೆಯಡಿ ನೋಂದಾಯಿಸಿಕೊಂಡಿದ್ದಾರೆ. ಆದರೆ, ಇದುವರೆಗೆ ಒಬ್ಬ ರೈತನಿಗೂ ವಿಮಾ ಮೊತ್ತ ಪಾವತಿಯಾಗದಿರುವುದು ಗಂಭೀರ ಆತಂಕದ ವಿಷಯವಾಗಿದೆ. ಚಿತ್ರದುರ್ಗ ಜಿಲ್ಲೆಯ ವಿಮಾ ಕ್ಲೈಮ್ ಗಳಿಗಾಗಿ ಅಂದಾಜು ರೂ. ೧೫ ಕೋಟಿ ಮೊತ್ತವನ್ನು ಬಿಡುಗಡೆ ಮಾಡಬೇಕಿದೆ.
ಈ ಯೋಜನೆಯಡಿ ಚಿತ್ರದುರ್ಗ ಜಿಲ್ಲೆಗೆ ಕ್ಷೇಮ ಜನರಲ್ ಇನ್ಶೂರೆನ್ಸ್ ಲಿಮಿಟೆಡ್ ಅಧಿಸೂಚಿತ ವಿಮಾ ಕಂಪನಿಯಾಗಿದೆ. ಬೆಳೆ ಹಂಗಾಮು ಮುಗಿದಿದ್ದು, ಹವಾಮಾನ ದತ್ತಾಂಶ ಲಭ್ಯವಿದ್ದರೂ ಮತ್ತು ಅಗತ್ಯ ಪ್ರಕ್ರಿಯೆಗಳು ಪೂರ್ಣಗೊಂಡಿದ್ದರೂ ಸಹ, ದೀರ್ಘಕಾಲದವರೆಗೆ ವಿಮೆ ಹಣ ಬಾಕಿ ಉಳಿದಿದೆ. ಬೆಳೆ ನಷ್ಟದಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ರೈತರು, ಬಾಕಿ ಇರುವ ಮೊತ್ತಕ್ಕಾಗಿ ಹಪಹಪಿಸುತ್ತಿದ್ದಾರೆ. ಈ ವಿಳಂಬವು ಈ ಯೋಜನೆ ಮೂಲ ಉದ್ದೇಶವನ್ನೇ ವಿಫಲಗೊಳಿಸುತ್ತಿದೆ.
ಚಿತ್ರದುರ್ಗ ಜಿಲ್ಲೆಯ ಬಾಕಿ ಇರುವ ವಿಮಾ ಕ್ಲೈಮ್‌ಗಳ ಸ್ಥಿತಿಗತಿಯನ್ನು ಪರಿಶೀಲಿಸಿ, ಅರ್ಹವಿರುವ ಎಲ್ಲಾ ವಿಮಾ ಮೊತ್ತವನ್ನು ಕೂಡಲೇ ಇತ್ಯರ್ಥಪಡಿಸಲು ಕ್ಷೇಮ ಜನರಲ್ ಇನ್ಶೂರೆನ್ಸ್ ಲಿಮಿಟೆಡ್‌ಗೆ ಅಗತ್ಯ ಸೂಚನೆಗಳನ್ನು ನೀಡುವುದರ ಮೂಲಕ ಬಾಕಿ ಇರುವ ಅಂದಾಜು ರೂ. ೧೫.೦೦ ಕೋಟಿ ಮೊತ್ತವನ್ನು ಸಂಕಷ್ಟದಲ್ಲಿರುವ ರೈತರಿಗೆ ಯಾವುದೇ ವಿಳಂಬವಿಲ್ಲದೆ ಶೀಘ್ರವಾಗಿ ಬಿಡುಗಡೆ ಮಾಡುವಂತೆ ಒತ್ತಾಯಿಸಿದ ಸಂಸದರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಕೃಷಿ ಸಚಿವರು ಕೂಡಲೇ ಬಾಕಿ ಇರುವ ವಿಮಾ ಮೊತ್ತವನ್ನು ಬಿಡುಗಡೆಗೊಳಿಸಲು ನಿರ್ದೇಶನ ನೀಡುವುದಾಗಿ ತಿಳಿಸಿದರು.


