ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಗ್ರಾಮದ ಆರಾಧ್ಯ ದೈವಗಳಾದ ಶ್ರೀ ಹೊಸೂರಾಂಭದೇವಿ, ಶ್ರೀ ಬೀರಲಿಂಗೇಶ್ವರ ಹಾಗೂ ಶ್ರೀ ವೆಂಕಟರಮಣಸ್ವಾಮಿ ದೇವರುಗಳ ದೊಡ್ಡ ಜಾತ್ರಾ ಮಹೋತ್ಸವವು ಸಡಗರ-ಸಂಭ್ರಮದಿಂದ ಜರುಗುತ್ತಿದೆ.
ಜಾತ್ರೆಯ ವಿಶೇಷ ಸಂದರ್ಭದಲ್ಲಿ ಶ್ರೀ ರೇಣುಕಾಯಲ್ಲಮ್ಮ ಹಾಗೂ ನರಸಿಂಹಸ್ವಾಮಿಯ ಗುಡಿಕಟ್ಟಿನ ಅಣ್ಣತಮ್ಮಂದಿರು ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಹೊಸೂರಾಂಭಾ ದೇವಿಗೆ "ಮಡಿಲು ಅಕ್ಕಿ" ನೀಡುವ ಮೂಲಕ ಭಕ್ತಿ ಸಮರ್ಪಿಸಿದರು. ದೇವಸ್ಥಾನದ ಆವರಣದಲ್ಲಿ ನೆರೆದಿದ್ದ ನೂರಾರು ಭಕ್ತಾದಿಗಳ ಸಮ್ಮುಖದಲ್ಲಿ ಮಡಿಲು ತುಂಬುವ ಕಾರ್ಯಕ್ರಮ ಅತ್ಯಂತ ಶ್ರದ್ಧಾಭಕ್ತಿಯಿಂದ ನಡೆಯಿತು.
ಈ ಪವಿತ್ರ ಸೇವೆಯಲ್ಲಿ ಗುಡಿಕಟ್ಟಿನ ಅಣ್ಣತಮ್ಮಂದಿರಾದ ಸಿದ್ದಯ್ಯ, ಬೂತಣ್ಣ, ನರಸಿಂಹಪ್ಪ, ಪರಮೇಶ್ವರಪ್ಪ, ಸಣ್ಣಕೆಂಚಪ್ಪ, ಜೋಗಪ್ಪ, ತಿಪ್ಪೇಸ್ವಾಮಿ, ಯರಗುಂಟಪ್ಪ, ನರಸಿಂಹಪ್ಪ, ಕೆಂಚರಾಯ, ರಂಗಸ್ವಾಮಿ, ಶಿವರಾಜ್ ಹಾಗೂ ಗ್ರಾಮದ ಮುಖಂಡರು ಮತ್ತು ಸದ್ಭಕ್ತ ಮಂಡಳಿಯವರು ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾದರು.
"ಹಿರಿಯರು ಹಾಕಿಕೊಟ್ಟ ಸಂಪ್ರದಾಯದಂತೆ, ಗುಡಿಕಟ್ಟಿನ ಅಣ್ಣತಮ್ಮಂದಿರೆಲ್ಲರೂ ಸೇರಿ ದೇವಿಗೆ ಮಡಿಲು ಅಕ್ಕಿ ನೀಡುವ ಮೂಲಕ ಗ್ರಾಮದ ಸಕಲರಿಗೂ ಸುಖ-ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದೇವೆ," ಎಂದು ಈ ಸಂದರ್ಭದಲ್ಲಿ ಭಕ್ತರು ಹರ್ಷ ವ್ಯಕ್ತಪಡಿಸಿದರು.
ಜಾತ್ರೆಯ ಅಂಗವಾಗಿ ದೇವಸ್ಥಾನಗಳಿಗೆ ವಿಶೇಷ ಪುಷ್ಪಾಲಂಕಾರ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಏರ್ಪಾಡಾಗಿದ್ದು, ಸುತ್ತಮುತ್ತಲಿನ ಹಳ್ಳಿಗಳಿಂದ ಜನಸಾಗರವೇ ಹರಿದು ಬರುತ್ತಿದೆ.


