ಚಂದ್ರವಳ್ಳಿ ನ್ಯೂಸ್, ಹೊಸದೆಹಲಿ:
ಕೇಂದ್ರ ಭಾರಿ ಕೈಗಾರಿಕೆ ಸಚಿವಾಲಯದ ಅಡಿಯಲ್ಲಿ ಬರುವ ಸಿಪಿಎಸ್ಇ ಸಂಸ್ಥೆಗಳಾದ 'ರಾಜಸ್ಥಾನ್ ಎಲೆಕ್ಟ್ರಾನಿಕ್ಸ್ & ಇನ್ಸ್ಟ್ರುಮೆಂಟ್ಸ್ ಲಿಮಿಟೆಡ್' ಮತ್ತು 'ಹಿಂದೂಸ್ತಾನ್ ಸಾಲ್ಟ್ಸ್ ಲಿಮಿಟೆಡ್' ಸಂಸ್ಥೆಗಳ ಕಾರ್ಯಕ್ಷಮತೆಯನ್ನು ಕೇಂದ್ರ ಭಾರಿ ಕೈಗಾರಿಕೆ ಹಾಗೂ ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಸುದೀರ್ಘ ಸಮೀಕ್ಷಾ ಸಭೆ ನಡೆಸಿ ಪರಿಶೀಲಿಸಿದರು.
ಸಭೆಯಲ್ಲಿ ಪ್ರಸ್ತುತ ಜಾರಿಯಲ್ಲಿರುವ ವಿವಿಧ ಯೋಜನೆಗಳು, ಕೈಗೊಂಡಿರುವ ಕ್ರಮಗಳು ಹಾಗೂ ಮುಂದಿನ ಪ್ರಮುಖ ಆದ್ಯತೆಗಳ ಕುರಿತು ವಿಸ್ತೃತವಾಗಿ ಚರ್ಚಿಸಲಾಯಿತು.
ಈ ವೇಳೆ ಮಾತನಾಡಿದ ಕುಮಾರಸ್ವಾಮಿ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 'ಆತ್ಮನಿರ್ಭರ ಭಾರತ' ಹಾಗೂ 2047ರ ವೇಳೆಗೆ 'ವಿಕಸಿತ ಭಾರತ' ನಿರ್ಮಾಣದ ದೂರದೃಷ್ಟಿಯ ಕಲ್ಪನೆಗೆ ಅನುಗುಣವಾಗಿ ಸಂಸ್ಥೆಗಳು ಕಾರ್ಯನಿರ್ವಹಿಸಬೇಕು ಎಂದು ಪ್ರತಿಪಾದಿಸಿದರು.
ಕಾರ್ಯಾಚರಣೆಯ ದಕ್ಷತೆ ಹೆಚ್ಚಿಸುವುದು, ಹೊಣೆಗಾರಿಕೆಯನ್ನು ಖಾತ್ರಿಪಡಿಸುವುದು ಮತ್ತು ಕಾರ್ಯತಂತ್ರದ ಸೂಕ್ತ ಯೋಜನೆಯೊಂದಿಗೆ ಮುನ್ನಡೆಯುವುದು ಪ್ರತಿಯೊಂದು ಹಂತದಲ್ಲೂ ಅತ್ಯಗತ್ಯ ಎಂದು ಅವರು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.



