ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
"ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಮೊದಲು ಬಿಜೆಪಿ ಮೈತ್ರಿ ಬಿಟ್ಟು ಹೊರಗೆ ಬರಲಿ. ವಿಧಾನಸೌಧದ ಮುಂದೆ ನಿಂತು ಏಕಾಂಗಿಯಾಗಿ 120 ಸ್ಥಾನ ಗೆಲ್ಲುತ್ತೇನೆ ಎಂದು ಹೇಳಿ, ಅದನ್ನು ಗೆದ್ದು ತೋರಿಸಲಿ. ಆಗ ನಾವೇ ಅವರಿಗೆ ಸೆಲ್ಯೂಟ್ ಹೊಡೆದು ಸರೆಂಡರ್ ಆಗ್ತೀವಿ" ಎಂದು ಮಾಜಿ ಸಚಿವ ಚಲುವರಾಯಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಡದಿ ಟೌನ್‌ಶಿಪ್ ವಿಚಾರವಾಗಿ ಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಮುಗಿಬಿದ್ದಿರುವ ಕುಮಾರಸ್ವಾಮಿ ಅವರಿಗೆ ಬಹಿರಂಗ ಪಂಥಾಹ್ವಾನ ನೀಡಿದರು.
'ದೇವೇಗೌಡರ ಮಗನಾಗಿ ನಿಮ್ಮ ಸಾಧನೆ ಏನ್ರಿ?':
"ಇತಿಹಾಸದಲ್ಲಿ ಅದೂ ಒಂದು ಆಗಿ ಹೋಗಲಿ. ಮೈತ್ರಿ ಬಿಟ್ಟು ಏಕಾಂಗಿಯಾಗಿ ಬನ್ನಿ. ಬಿಜೆಪಿ ಜೊತೆ ಸೇರಿಕೊಂಡು 20 ಸೀಟು ಗೆಲ್ಲುವುದರಲ್ಲಿ ಯಾವ ದೊಡ್ಡ ಸಾಧನೆ ಇದೆ?" ಎಂದು ಚಲುವರಾಯಸ್ವಾಮಿ ಪ್ರಶ್ನಿಸಿದರು.
ಮುಂದುವರಿದು ತಮಿಳುನಾಡು ರಾಜಕಾರಣವನ್ನು ಉಲ್ಲೇಖಿಸಿದ ಅವರು, "ತಮಿಳುನಾಡಿನ ಮಾಜಿ ಸಿಎಂ ದಿವಂಗತ ಕರುಣಾನಿಧಿ ಅವರ ಮಗನನ್ನು (ಎಂ.ಕೆ. ಸ್ಟಾಲಿನ್) ನೋಡಿ ರಾಜಕಾರಣ ಕಲಿತುಕೊಳ್ಳಿ. ದೇವೇಗೌಡರ ಮಗನಾಗಿ ನಿಮ್ಮ ಸಾಧನೆ ಏನ್ರಿ? ನಮಗೆ ನಿಮ್ಮ ಅಭಿನಂದನೆಯೂ ಬೇಡ, ನಿಮ್ಮ ಸರ್ಟಿಫಿಕೇಟೂ ಬೇಕಾಗಿಲ್ಲ. ನಿಮ್ಮ ಅಣ್ಣ ಎಚ್.ಡಿ. ರೇವಣ್ಣ ಅವರಿಗೆ ಇರುವ ಒಳ್ಳೆಯ ಮನಸ್ಸು ಕೂಡ ನಿಮಗಿಲ್ಲ" ಎಂದು ಕಿಡಿಕಾರಿದರು.
ಮೊದಲ ಬಾರಿ ಆಪರೇಷನ್ ಕಮಲ ಮಾಡಿದ್ದೇ ಕುಮಾರಸ್ವಾಮಿ!:
"ನಾನು ಹಿಂದೆಯೂ ಯಾರ ಚಮಚಾಗಿರಿ ಮಾಡಿದವನಲ್ಲ. ಹಿಂದೆ ಇದೇ ಆರ್‌ಎಸ್‌ಎಸ್ ಅನ್ನು ಬೈದಿದ್ದ ನೀವು, ಈಗ ಅಧಿಕಾರಕ್ಕಾಗಿ ಆರ್‌ಎಸ್‌ಎಸ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳುತ್ತಿದ್ದೀರಿ. ಶಾಸಕ ಬಾಲಕೃಷ್ಣ ಅವರನ್ನು ಯಾರೋ ಒಬ್ಬ ಶಾಸಕ ಅಂತ ಏಕವಚನದಲ್ಲಿ ಮಾತನಾಡಿದ್ದೀರಿ, ಇದೇನಾ ನಿಮ್ಮ ಗೌರವ?" ಎಂದು ಆಕ್ರೋಶ ಹೊರಹಾಕಿದರು.
ಕುಮಾರಸ್ವಾಮಿ ಅವರ ಸಿಎಂ ಅವಧಿಯನ್ನು ನೆನಪಿಸಿದ ಅವರು, "ರಾಜ್ಯದಲ್ಲಿ ಮೊದಲ ಬಾರಿ ಆಪರೇಷನ್ ಕಮಲ ಮಾಡಿದ್ದೇ ಕುಮಾರಸ್ವಾಮಿ. ನೀವು ಒಮ್ಮೆ ನೆನಪಿಸಿಕೊಳ್ಳಿ, ನೀವು ಸಂವಿಧಾನಾತ್ಮಕವಾಗಿ ಬಹುಮತ ಪಡೆದು ಸಿಎಂ ಆಗಿದ್ದಾ? ನಿಮ್ಮ ನಾಯಕತ್ವದಲ್ಲಿ ಜೆಡಿಎಸ್ ಎಂದಿಗೂ 37 ಸೀಟಿಗಿಂತ ಮೇಲೆ ಹೋಗಿಲ್ಲ" ಎಂದು ಕುಟುಕಿದರು.
ಡಿಕೆಶಿ ಮೇಲಿನ ಹೊಟ್ಟೆಕಿಚ್ಚು ಯಾಕೆ?:
ಡಿ.ಕೆ. ಶಿವಕುಮಾರ್ ಪರ ಬ್ಯಾಟ್ ಬೀಸಿದ ಚಲುವರಾಯಸ್ವಾಮಿ, "ಸಂವಿಧಾನದ ಪ್ರಕಾರ ಬಹುಮತದೊಂದಿಗೆ ಆಯ್ಕೆಯಾದ ಸಿಎಂ ಡಿ.ಕೆ. ಶಿವಕುಮಾರ್ ಆಗಿದ್ದಾರೆ. ಅವರು ಮುಖ್ಯಮಂತ್ರಿಯಾಗಿ ಕೇವಲ ಒಂದು ತಿಂಗಳಾಗಿದೆ. ಆದರೆ ಅವರ ಮೇಲೆ ಒಂದಲ್ಲ ಒಂದು ವಿಚಾರದಲ್ಲಿ ನಿಮಗೆ ಹೊಟ್ಟೆಕಿಚ್ಚು. ಲೋಕಸಭಾ ಸದಸ್ಯರಾಗಿ, ಕೇಂದ್ರ ಸಚಿವರಾಗಿ ನೀವೇನು ಮಾಡಿದ್ದೀರಾ ಎನ್ನುವುದು ನಮಗೆ ಗೊತ್ತಿದೆ. ಅಂದು ಎಸ್.ಎಂ. ಕೃಷ್ಣ ಅವರು ಮತ್ತೊಮ್ಮೆ ಸಿಎಂ ಆಗುವುದನ್ನು ಒಪ್ಪದವರು ನೀವು, ಇನ್ನು ಮತ್ತೊಬ್ಬ ಒಕ್ಕಲಿಗ ನಾಯಕ ಡಿ.ಕೆ. ಶಿವಕುಮಾರ್ ಸಿಎಂ ಆಗಿರುವುದನ್ನು ಒಪ್ಪಲು ನಿಮ್ಮಿಂದ ಸಾಧ್ಯವೇ?" ಎಂದು ನೇರವಾಗಿ ಪ್ರಶ್ನಿಸಿದರು.



