ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಕರ್ನಾಟಕ ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ-2026 ಅಂಗವಾಗಿ ಹಿರಿಯೂರು ನಗರಸಭಾ ವ್ಯಾಪ್ತಿಯ ವಾರ್ಡ್ ನಂಬರ್ 8ರ ಮತಗಟ್ಟೆ ಸಂಖ್ಯೆ 165, 166, 167 ಮತ್ತು 168ರ ವ್ಯಾಪ್ತಿಯಲ್ಲಿ ‘ಪತ್ತೆಯಾಗದ ಮತದಾರರ’ ಪರಿಶೀಲನಾ ಸಭೆಯನ್ನು ಯಶಸ್ವಿಯಾಗಿ ನಡೆಸಲಾಯಿತು.
ನಗರಸಭೆ ಪೌರಾಯುಕ್ತರಾದ ಎ.ವಾಸೀಂ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ವಿಶೇಷ ಸಭೆಯಲ್ಲಿ ಮತಗಟ್ಟೆ ಮಟ್ಟದ ಮೇಲ್ವಿಚಾರಕರು, ಸಂಬಂಧಪಟ್ಟ ಬಿಎಲ್‌ಒಗಳು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ಸಭೆಯಲ್ಲಿ ಮತದಾರರ ಪಟ್ಟಿ ಹಾಗೂ ಎನ್ಯೂಮರೇಷನ್ ಫಾರ್ಮ್‌ಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಪತ್ತೆಯಾಗದ ಮತದಾರರನ್ನು ಗುರುತಿಸುವ ಪ್ರಕ್ರಿಯೆ ನಡೆಸಲಾಯಿತು.
ನಕಲಿ/ತಪ್ಪು ದಾಖಲಾತಿ ತಡೆಗೆ ಸಲಹೆ:
ಸಭೆಯಲ್ಲಿ ಮಾತನಾಡಿದ ಪೌರಾಯುಕ್ತರಾದ ಎ. ವಾಸಿಂ ಅವರು, "ವಿಶೇಷ ಸಮಗ್ರ ಪರಿಷ್ಕರಣೆಯ ಮುಖ್ಯ ಉದ್ದೇಶ ಪ್ರತಿಯೊಬ್ಬ ಅರ್ಹ ಮತದಾರರಿಗೂ ಹಕ್ಕು ಕಲ್ಪಿಸುವುದು ಮತ್ತು ಪಟ್ಟಿಯಲ್ಲಿರುವ ದೋಷಗಳನ್ನು ತಿದ್ದುಪಡಿ ಮಾಡುವುದಾಗಿದೆ" ಎಂದು ತಿಳಿಸಿ, ಪ್ರಕ್ರಿಯೆಯ ಕುರಿತು ಉಪಸ್ಥಿತರಿದ್ದ ಎಲ್ಲರಿಗೂ ಸಂಪೂರ್ಣ ಮಾಹಿತಿ ಹಾಗೂ ಅಗತ್ಯ ಸಲಹೆ-ಸೂಚನೆಗಳನ್ನು ನೀಡಿದರು.
ತದನಂತರ ಮತಗಟ್ಟೆ ಮಟ್ಟದ ಅಧಿಕಾರಿಗಳ ಮೇಲ್ವಿಚಾರಕರಾದ ಜುನೇದ್ ಸಿರಾಜ್ ಎಸ್. ಅವರು ಮಾತನಾಡಿ, ಎನ್ಯೂಮರೇಷನ್ ಫಾರ್ಮ್‌ಗಳನ್ನು ಭರ್ತಿ ಮಾಡುವಾಗ ಸಾಮಾನ್ಯವಾಗಿ ಆಗುವ ತಪ್ಪುಗಳನ್ನು ಹೇಗೆ ಸರಿಪಡಿಸಿಕೊಳ್ಳಬೇಕು ಎಂಬುದನ್ನು ವಿವರಿಸಿದರು.
ತಾರ್ಕಿಕ ವ್ಯತ್ಯಾಸಗಳಿಂದ ನೋಟಿಸ್ ಬಂದಲ್ಲಿ ಸಲ್ಲಿಸಬೇಕಾದ ಅಧಿಕೃತ ದಾಖಲಾತಿಗಳ ಕುರಿತು ಸಾರ್ವಜನಿಕರಿಗೆ ಸೂಕ್ತ ಮಾರ್ಗದರ್ಶನ ನೀಡಿದರು.
ಜನರಲ್ಲಿನ ಆತಂಕ ನಿವಾರಣೆ:
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡ ಪಿ.ಎಸ್. ಸಾದತ್ ಉಲ್ಲಾ ಅವರು, ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಸಾರ್ವಜನಿಕರಲ್ಲಿ ಇರುವ ಅನಗತ್ಯ ಗೊಂದಲ ಹಾಗೂ ಆತಂಕಗಳನ್ನು ಹೋಗಲಾಡಿಸಿ, ನಿಖರ ಮತ್ತು ಸರಿಯಾದ ಮಾಹಿತಿಯನ್ನು ಒದಗಿಸಿದರು.
ಶತಪ್ರತಿಶತ ಸಾಧನೆ ಮಾಡಿದ ಬಿಎಲ್‌ಒಗಳಿಗೆ ಅಭಿನಂದನೆ:
ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯದಲ್ಲಿ ಶೇಕಡಾ 100ಕ್ಕೂ ಹೆಚ್ಚು ಪ್ರಗತಿ ಸಾಧಿಸಿ, ಯಶಸ್ವಿಯಾಗಿ ಪರಿಷ್ಕರಣೆ ಮುಕ್ತಾಯಗೊಳಿಸಿದ ಇಬ್ಬರು ಬಿಎಲ್‌ಒ ಅಧಿಕಾರಿಗಳಾದ ಟಿ. ಚಂದ್ರಕಲಾ – ಮತಗಟ್ಟೆ ಸಂಖ್ಯೆ 165 ಮತ್ತು ಪಿ. ಕೆ. ನವೀನ್ – ಮತಗಟ್ಟೆ ಸಂಖ್ಯೆ 166 ಇವರನ್ನು ಈ ಸಂದರ್ಭದಲ್ಲಿ ಗೌರವಿಸಿ, ಹೃದಯಪೂರ್ವಕ ಅಭಿನಂದನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ವಾರ್ಡಿನ ಮುಖಂಡರುಗಳಾದ ಎಚ್. ಅಬ್ದುಲ್ ನಬಿ, ಎ. ಭಾಷಾ, ಸೂರ್ಯೋದಯ ಅಜೀಜ್, ಆಜಾದ್ ದಾದು, ಎಲ್. ಮೊಹಮ್ಮದ್ ಸ್ವಾಲೆಹ್, ಎ. ಪುಳಿ ದಸ್ತಗೀರ್, ಸೈಫುಲ್ಲಾ, ಡಿಶ್ ಸಮೀರ್, ತಿಪ್ಪೇಸ್ವಾಮಿ, ರಾಧಾ ಹಾಗೂ ಹಲವಾರು ನಾಗರಿಕರು ಹಾಜರಿದ್ದರು.



