ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ನಗರದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ (ಪಿಎಲ್‌ಡಿ) ಬ್ಯಾಂಕಿನ ಸಭಾಂಗಣದಲ್ಲಿ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ತಿಪ್ಪೇಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಮಹತ್ವದ ಪ್ರಗತಿ ಪರಿಶೀಲನಾ ಸಭೆ ನಡೆಯಿತು.
ಸಭೆಯಲ್ಲಿ ಪಾಲ್ಗೊಂಡಿದ್ದ ಜಿಲ್ಲಾ ವ್ಯವಸ್ಥಾಪಕರಾದ ವೇಣುಗೋಪಾಲ್ ನಾಯಕ ಅವರು ಬ್ಯಾಂಕಿನ ಪ್ರಗತಿಯನ್ನು ಪರಿಶೀಲಿಸಿದರು. ಈ ವೇಳೆ ಬ್ಯಾಂಕು ಪ್ರಸಕ್ತ ಸಾಲಿನಲ್ಲಿ ಶೇಕಡಾ 95 ರಷ್ಟು ಸಾಲ ವಸೂಲಾತಿ ಮಾಡುವ ಮೂಲಕ ಅತ್ಯುತ್ತಮ ಸಾಧನೆ ಮಾಡಿರುವುದಕ್ಕೆ ತೀವ್ರ ಸಂತಸ ವ್ಯಕ್ತಪಡಿಸಿದರು. ಬ್ಯಾಂಕಿನ ಈ ಅಭಿವೃದ್ಧಿಗೆ ಕಾರಣರಾದ ಆಡಳಿತ ಮಂಡಳಿ, ಸಿಬ್ಬಂದಿ ವರ್ಗ ಹಾಗೂ ಪ್ರಮುಖವಾಗಿ ಸಕಾಲಕ್ಕೆ ಸಾಲ ಮರುಪಾವತಿಸಿ ಸಹಕರಿಸಿದ ರೈತ ಬಾಂಧವರನ್ನು ಅವರು ಮುಕ್ತಕಂಠದಿಂದ ಶ್ಲಾಘಿಸಿ, ಅಭಿನಂದನೆ ಸಲ್ಲಿಸಿದರು.
ಅಧ್ಯಕ್ಷತೆ ವಹಿಸಿದ್ದ ಬ್ಯಾಂಕಿನ ಅಧ್ಯಕ್ಷ ತಿಪ್ಪೇಸ್ವಾಮಿ ಅವರು ಮಾತನಾಡಿ, ರೈತರ ಆರ್ಥಿಕ ಸಬಲೀಕರಣಕ್ಕೆ ಬ್ಯಾಂಕು ಸದಾ ಬದ್ಧವಾಗಿದ್ದು, ಮುಂದಿನ ದಿನಗಳಲ್ಲೂ ಸಹ ಬ್ಯಾಂಕಿನ ಪ್ರಗತಿಗೆ ಎಲ್ಲರೂ ಇದೇ ರೀತಿ ಸಹಕರಿಸಬೇಕು ಎಂದು ಕೋರಿದರು.
ಈ ಸಂದರ್ಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷೆ ಕಮಲಮ್ಮ, ನಿರ್ದೇಶಕರುಗಳಾದ ಕೆ. ಕೃಷ್ಣಯ್ಯ, ಪಿ.ಎಸ್. ಸಾದತ್ ಉಲ್ಲಾ, ಎಸ್.ಜೆ. ಹನುಮಂತರಾಯ, ನಂದಿಹಳ್ಳಿ ಗಿರಿಜಪ್ಪ, ಮಲ್ಲನಾಯಕ್, ಶಿವಣ್ಣ, ಮಂಜ ನಾಯಕ್, ಮಲ್ಲಿಕಾರ್ಜುನ್, ಶಂಕರ್ ಮೂರ್ತಿ, ಅಂಬುಜಮ್ಮ, ಶ್ರೀಮತಿ ಲಕ್ಷ್ಮಿದೇವಿ ಹಾಗೂ ಬ್ಯಾಂಕಿನ ವ್ಯವಸ್ಥಾಪಕ ಶಿವಮೂರ್ತಿ ಮತ್ತು ಸಮಸ್ತ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.



