ಚಂದ್ರವಳ್ಳಿ ನ್ಯೂಸ್, ಹಿರಿಯೂರು
ಹಿರಿಯೂರು ತಾಲ್ಲೂಕು ೧,೭೦೩ ಚದರ ಕಿ.ಮೀ. ವಿಸ್ತೀರ್ಣ ಹೊಂದಿದ್ದು, ೪ ಹೋಬಳಿಗಳು (ಧರ್ಮಪುರ, ಐಮಂಗಲ, ಜವನಗೊಂಡನಹಳ್ಳಿ, ಕಸಬಾ), ೧೫೮ ಕಂದಾಯ ಗ್ರಾಮಗಳು ಹಾಗೂ ನೂರಕ್ಕೂ ಹೆಚ್ಚು ಹಟ್ಟಿ/ ತಾಂಡಾಗಳೊಂದಿಗೆ ಒಟ್ಟು ೨,೬೪,೬೬೭ ಜನಸಂಖ್ಯೆಯನ್ನು ಹೊಂದಿದೆ. ಆದರೆ, ತಾಲ್ಲೂಕಿನ ಜನರು ಮೂಲಭೂತ ಸೌಕರ್ಯಗಳಿಗಾಗಿ ಹೋರಾಟ ಮಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಸಾಹಿತಿ ಎಂ.ಜಿ ರಂಗಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.
೧. ಜವನಗೊಂಡನಹಳ್ಳಿ ಹೋಬಳಿ:
ಹೋಬಳಿಯಲ್ಲಿ ೧ ಟಿ.ಎಂ.ಸಿ.ಗಿಂತ ಕಡಿಮೆ ಸಾಮರ್ಥ್ಯದ ಗಾಯತ್ರಿ ಜಲಾಶಯವಿದ್ದರೂ, ಅಂತರ್ಜಲ ಪಾತಾಳಕ್ಕೆ ಕುಸಿದಿದೆ.
ವಾಣಿವಿಲಾಸ ಸಾಗರದಿಂದ ಕೇವಲ ೩೦ ಕಿ.ಮೀ. ಅಂತರದಲ್ಲಿರುವ ಗಾಯತ್ರಿ ಜಲಾಶಯಕ್ಕೆ ನೀರು ಹರಿಸಲು ರೈತರು ದಶಕಗಳಿಂದ ಹೋರಾಡುತ್ತಿದ್ದಾರೆ.
ಪ್ರಸ್ತುತ ಉಪಚುನಾವಣೆ ಹಿನ್ನೆಲೆಯಲ್ಲಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರ ಯೋಜನೆಗೆ ಹಸಿರು ನಿಶಾನೆ ತೋರಿಸಿದೆಯಾದರೂ, ಅನುಷ್ಠಾನಕ್ಕೆ ಎಷ್ಟು ವರ್ಷ ಬೇಕೋ ಎಂಬ ಪ್ರಶ್ನೆ ಉಳಿದಿದೆ.
ಧರ್ಮಪುರ ಹೋಬಳಿ: ಇದು ಸಂಪೂರ್ಣ ಮಳೆ ಆಶ್ರಿತ ಪ್ರದೇಶವಾಗಿದ್ದು, ಧರ್ಮಪುರಕೆರೆಯೊಂದೇ ಜಲಮೂಲವಾಗಿದೆ.
೨೦೨೪ ಮತ್ತು ೨೦೨೫ರಲ್ಲಿ ವೇದಾವತಿ ನದಿಯಿಂದ ಹೊಸಹಳ್ಳಿ ಜಾಕ್‌ವೆಲ್ ಮೂಲಕ ಕೆರೆಗೆ ತಲಾ ೩ ತಿಂಗಳು ನೀರು ಹರಿಸಲಾಗಿತ್ತು, ಆದರೆ ೨೦೨೬ರಲ್ಲಿ ಒಂದು ಹನಿ ನೀರೂ ಹರಿದಿಲ್ಲ.
ಇದರಿಂದಾಗಿ ನೀರಾವರಿ ಹಾಗೂ ತೋಟಗಾರಿಕೆ ಬೆಳೆಗಳು ಒಣಗಿ ಹೋಗಿವೆ. ಆದರೆ ಪಕ್ಕದ ಚಳ್ಳಕೆರೆಯ ರಾಣಿಕೆರೆಗೆ ನೀರು ಸುಲಭವಾಗಿ ಹರಿದಿದೆ ಎಂದು ರೈತರು ಆರೋಪಿಸುತ್ತಿದ್ದಾರೆ.
ಐಮಂಗಲ ಹೋಬಳಿ: ಕಪ್ಪು ಮಣ್ಣಿನ (ಎರೆ) ಈ ಪ್ರದೇಶದಲ್ಲಿ ಕುಡಿಯುವ ನೀರಿನಲ್ಲಿ ಅಪಾಯಕಾರಿ ಮಟ್ಟದ ಫ್ಲೋರೈಡ್ ಅಂಶವಿರುವುದಾಗಿ ವಿಜ್ಞಾನಿಗಳು ದಶಕದ ಹಿಂದೆಯೇ ವರದಿ ನೀಡಿದ್ದಾರೆ.
ವೇದಾವತಿ ನದಿಯಿಂದ ನೀರು ಪೂರೈಸುವ ಯೋಜನೆ ಮುಗಿದು ವರ್ಷ ಕಳೆದರೂ, ಮಲ್ಲಪ್ಪನಹಳ್ಳಿ ಮುಂತಾದ ಗ್ರಾಮಗಳಿಗೆ ನೀರು ತಲುಪಿಸದೆ ಆಡಳಿತ ಯಂತ್ರ ವಿಳಂಬ ಮಾಡುತ್ತಿದೆ.
ವಾಣಿವಿಲಾಸ ಸಾಗರದಿಂದ ೨೦-೩೦ ಕಿ.ಮೀ. ದೂರದಲ್ಲಿರುವ ಈ ಪ್ರದೇಶಕ್ಕೆ ನೀರಿಲ್ಲ, ಆದರೆ ೬೦-೭೦ ಕಿ.ಮೀ. ದೂರದ ಚಳ್ಳಕೆರೆ ಹಾಗೂ ಡಿಆರ್‌ಡಿಒಗೆ ನೀರು ತಲುಪಿಸಲಾಗಿದೆ ('ಮನೆಗೆ ಮಾರಿ ಊರಿಗೆ ಉಪಕಾರಿ').
೨. ಸಾರಿಗೆ ವ್ಯವಸ್ಥೆ ಮತ್ತು ರಸ್ತೆಗಳು:
ನಗರದಲ್ಲಿ ರಾಜ್ಯ ರಸ್ತೆ ಸಾರಿಗೆ ಡಿಪೋ ಆರಂಭವಾಗಿ ೬ ತಿಂಗಳಾದರೂ ಬೆರಳೆಣಿಕೆಯಷ್ಟು ಬಸ್‌ಗಳಷ್ಟೇ ಮಂಜೂರಾಗಿವೆ. ಹಳ್ಳಿಗಳಿಗೆ ಸಾರಿಗೆ ಸೌಲಭ್ಯ ಸಿಕ್ಕಿಲ್ಲ.
ನಗರದ ಮುಖ್ಯರಸ್ತೆ ಹಾಗೂ ಹುಳಿಯಾರು ರಸ್ತೆಯಲ್ಲಿ ನಿತ್ಯ ವಾಹನ ದಟ್ಟಣೆ ಉಂಟಾಗುತ್ತಿದ್ದರೂ ರಸ್ತೆ ಅಗಲೀಕರಣಕ್ಕೆ ಕ್ರಮ ಕೈಗೊಂಡಿಲ್ಲ.
ರಂಗೇನಹಳ್ಳಿ, ಶಿಡ್ಲಯ್ಯನಕೋಟೆ, ಗೂಳ್ಯ, ಸೂಗೂರು ಹಾಗೂ ಜವನಗೊಂಡನಹಳ್ಳಿ ಭಾಗದ ರಸ್ತೆಗಳು ತೀವ್ರವಾಗಿ ಹಾಳಾಗಿವೆ.
ರೈತರ ಹರಸಾಹಸ ಹಾಗೂ ತಾರತಮ್ಯ:
ಭರಮಗಿರಿ-ಕಕ್ಕಯ್ಯನಹಳ್ಳಿ ಕೆರೆ ಒಣಗಿ ದಶಕಗಳೇ ಕಳೆದರೂ ನೀರು ಹರಿಸಿಲ್ಲ. ರೈತರು ಅಡಕೆ ಮರಗಳನ್ನು ಉಳಿಸಿಕೊಳ್ಳಲು ಲಕ್ಷಾಂತರ ರೂಪಾಯಿ ವೆಚ್ಚ ಮಾಡುತ್ತಿದ್ದಾರೆ.
ಅದೇ ವಾಣಿವಿಲಾಸ ಸಾಗರದಿಂದ ಪಕ್ಕದ ಹೊಳಲ್ಕೆರೆ ತಾಲ್ಲೂಕಿನ ೪೦೦ ಜನವಸತಿಗಳಿಗೆ ೩೬೭ ಕೋಟಿ ವೆಚ್ಚದಲ್ಲಿ ೩೬೫ ದಿನವೂ ನೀರು ಕೊಡುವ ಯೋಜನೆ ಸಿದ್ಧವಾಗಿದೆ.
ಕ್ಷೇತ್ರದಲ್ಲಿ ಶಾಸಕರು ಮತ್ತು ಸಚಿವರಿದ್ದರೂ ತಾಲ್ಲೂಕಿನ ಸಮಸ್ಯೆಗಳು ಬಗೆಹರಿದಿಲ್ಲ.
೩. ಚಾರಿತ್ರಿಕ ಹಿನ್ನೆಲೆ ಹಾಗೂ ಭವಿಷ್ಯದ ಕರೆ
೧೮೯೮ರ ಜಲಾಶಯದ ಮೂಲನಕ್ಷೆಯಲ್ಲಿ ಮೈಸೂರು ಮಹಾರಾಜರು ದಾಖಲಿಸಿರುವಂತೆ, "ಹಿರಿಯೂರು ತಾಲ್ಲೂಕು ೧೦ ವರ್ಷಗಳಲ್ಲಿ ೭ ವರ್ಷ ಬರದ ದವಡೆಗೆ ಸಿಲುಕುತ್ತದೆ. ಇಲ್ಲಿ ಪರಿಶಿಷ್ಟರು, ಬುಡಕಟ್ಟು ಜನರು ಹೆಚ್ಚಿದ್ದು, ಪಶುಸಂಪತ್ತನ್ನೇ ನೆಚ್ಚಿಕೊಂಡಿದ್ದಾರೆ. ಬರಗಾಲದಲ್ಲಿ ಗುಳೇ ಹೋಗುವುದನ್ನು ತಪ್ಪಿಸಲು ಜಲಾಶಯ ನಿರ್ಮಾಣ ಅಗತ್ಯ" ಎಂದು ಉಲ್ಲೇಖಿಸಿದ್ದರು.
ಪ್ರಸ್ತುತ ಹಿರಿಯೂರು ಕ್ಷೇತ್ರಕ್ಕೆ ಉಪಚುನಾವಣೆ ಎದುರಾಗಿದೆ. ಭದ್ರಾ ಮೇಲ್ದಂಡೆ ಯೋಜನೆಗಾಗಿ ೫೦೦ಕ್ಕೂ ಹೆಚ್ಚು ದಿನಗಳು, ಗಾಯತ್ರಿ ಜಲಾಶಯ ಹಾಗೂ ಧರ್ಮಪುರ ಕೆರೆ ನೀರಿಗಾಗಿ ನೂರಾರು ದಿನಗಳ ಹೋರಾಟವನ್ನು ಜನರು ನಡೆಸಬೇಕಾಯಿತು. ಇಂದಾದರೂ ಜನರು ಜಾತಿ ಮತ್ತು ವೈಷಮ್ಯಗಳನ್ನು ಬದಿಗೊತ್ತಿ ತಾಲ್ಲೂಕಿನ ಭವಿಷ್ಯದ ದೃಷ್ಟಿಯಿಂದ ಜಾಗೃತರಾಗದಿದ್ದರೆ ಮುಂದಿನ ಪೀಳಿಗೆ ಶಾಪ ಹಾಕುವುದು ಖಚಿತ.



