ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರಿನ ನಾಗರಿಕರಿಗೆ ಸರಳ, ಸುಗಮ ಹಾಗೂ ಪಾರದರ್ಶಕ ಆಡಳಿತ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆಯಿಟ್ಟಿದ್ದು, ಬಹುನಿರೀಕ್ಷಿತ ‘ನನ್ನ ಇ-ಖಾತಾ ನನ್ನ ಹಕ್ಕು’ ವಿಶೇಷ ಅಭಿಯಾನಕ್ಕೆ ಇಂದಿನಿಂದ (ಶನಿವಾರ) ಅಧಿಕೃತ ಚಾಲನೆ ಸಿಕ್ಕಿದೆ.
ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರು ಅಭಿಯಾನಕ್ಕೆ ಚಾಲನೆ ನೀಡಿದ್ದು, ಆರಂಭದ ದಿನವೇ ಖುದ್ದಾಗಿ ಕರಡು ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹೊರಮಾವು ಕೇಂದ್ರಕ್ಕೆ ಭೇಟಿ:
ಅಭಿಯಾನದ ಅಂಗವಾಗಿ ಡಿ.ಕೆ. ಶಿವಕುಮಾರ್ ಅವರು ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯ ಹೊರಮಾವಿನ ನ್ಯಾಷನಲ್ ಪಬ್ಲಿಕ್ ಸ್ಕೂಲ್, ಕಲ್ಕೆರೆ ಅಗರ ಮುಖ್ಯ ರಸ್ತೆಯಲ್ಲಿರುವ ಕೇಂದ್ರಕ್ಕೆ ಇಂದು ಭೇಟಿ ನೀಡಿದರು. ಅಲ್ಲಿ ಸಾರ್ವಜನಿಕರಿಗೆ ಸಿಗುತ್ತಿರುವ ಸೌಲಭ್ಯಗಳು, ಇ-ಖಾತಾ ವಿತರಣಾ ಪ್ರಕ್ರಿಯೆ ಹಾಗೂ ವ್ಯವಸ್ಥೆಗಳನ್ನು ಖುದ್ದಾಗಿ ಪರಿಶೀಲಿಸಿದ ಅವರು, ಅಧಿಕಾರಿಗಳಿಗೆ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಕೆಲಸ ನಿರ್ವಹಿಸಲು ಸೂಚಿಸಿದರು.
ಜಿಬಿಎ ವ್ಯಾಪ್ತಿಯ 5 ಪಾಲಿಕೆಗಳಲ್ಲಿ ಆರಂಭ:
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಪ್ರಮುಖ ವಲಯಗಳನ್ನು ಒಳಗೊಂಡಂತೆ, ಜಿಬಿಎ ವ್ಯಾಪ್ತಿಯ 5 ಪಾಲಿಕೆಗಳಲ್ಲಿ ಇಂದಿನಿಂದಲೇ ಈ ವಿಶೇಷ ಅಭಿಯಾನ ಏಕಕಾಲದಲ್ಲಿ ಆರಂಭಗೊಂಡಿದೆ. ನಾಗರಿಕರು ಮಧ್ಯವರ್ತಿಗಳ ಕಾಟವಿಲ್ಲದೆ, ಸುಲಭವಾಗಿ ತಮ್ಮ ಆಸ್ತಿಗಳ ಇ-ಖಾತಾ ಪಡೆದುಕೊಳ್ಳಲು ಈ ಅಭಿಯಾನ ಸಹಕಾರಿಯಾಗಲಿದೆ.
"ನಾಗರಿಕರು ಯಾವುದೇ ವಿಳಂಬವಿಲ್ಲದೆ ಈ ಸೌಲಭ್ಯದ ಪ್ರಯೋಜನ ಪಡೆದು, ತಮ್ಮ ಆಸ್ತಿಗಳನ್ನು ಸುರಕ್ಷಿತಗೊಳಿಸಿಕೊಳ್ಳಬೇಕು."
ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ.
ಸರಳ ಆಡಳಿತ: ನಾಗರಿಕರು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಿ ಸ್ಥಳದಲ್ಲೇ ಇ-ಖಾತಾ ಪ್ರಕ್ರಿಯೆ ಸುಗಮಗೊಳಿಸುವುದು.
ಆಸ್ತಿ ಸುರಕ್ಷತೆ: ನಕಲಿ ದಾಖಲಾತಿಗಳಿಗೆ ಬ್ರೇಕ್ ಹಾಕಿ, ಪ್ರತಿಯೊಬ್ಬ ನಾಗರಿಕನ ಆಸ್ತಿಗೂ ಕಾನೂನುಬದ್ಧ ಸುರಕ್ಷತೆ ಒದಗಿಸುವುದು.
ತ್ವರಿತ ಸೇವೆ: ಯಾವುದೇ ವಿಳಂಬವಿಲ್ಲದೆ ಕಾಲಮಿತಿಯೊಳಗೆ ಡಿಜಿಟಲ್ ಖಾತಾ ಸಾರ್ವಜನಿಕರ ಕೈಸೇರುವಂತೆ ಮಾಡುವುದು.
ಬೆಂಗಳೂರಿನ ನಾಗರಿಕರು ಈ ವಿಶೇಷ ಅಭಿಯಾನದ ಸದುಪಯೋಗ ಪಡಿಸಿಕೊಂಡು ತಮ್ಮ ಆಸ್ತಿಗಳ ಇ-ಖಾತಾವನ್ನು ಸುರಕ್ಷಿತವಾಗಿ ಪಡೆದುಕೊಳ್ಳಬೇಕಾಗಿ ಸರ್ಕಾರ ಮನವಿ ಮಾಡಿದೆ.


