Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಮಾನವರ ಚಿಂತನೆ ಶುದ್ಧ, ಬದುಕು ಬುದ್ಧ:

ಚಂದ್ರವಳ್ಳಿ ನ್ಯೂಸ್, ಮೈಸೂರು:
ಮನದಲಿ ಬೆಳಕು ಮೂಡಿದಾಗ
ಬಾಳ ದಾರಿ ಸುಂದರವಾಗುವುದು
ಒಳ್ಳೆಯ ಚಿಂತನೆಯೂ ಬೆಳೆದಾಗ
ಜೀವನವೇ ಹೂವಂತೆ ಅರಳುವುದು.

ಮನುಷ್ಯನ ಬದುಕಿನ ನಿಜವಾದ ಬೆಳವಣಿಗೆ ಅವನ ಚಿಂತನೆಯ ಶುದ್ಧತೆ ಯಿಂದ ಆರಂಭವಾಗುತ್ತದೆ. ಮನಸ್ಸಿನಲ್ಲಿ ಉತ್ತಮ ಆಲೋಚನೆಗಳು ಇದ್ದಾಗ ನಡೆನುಡಿಯಲ್ಲಿ ವಿವೇಕ ಮೂಡುತ್ತದೆ. ವಿವೇಕಯುತವಾದ ನಡೆ ಜೀವನಕ್ಕೆ ಯಶಸ್ಸಿನ ದಾರಿಯನ್ನು ತೋರಿಸುತ್ತದೆ. ಒಳ್ಳೆಯ ಭಾವನೆಗಳು ಸಂಬಂಧಗ ಳಲ್ಲಿ ಸೌಹಾರ್ದತೆ ಬೆಳೆಸಿ ಬದುಕಿಗೆ ಸಕಾರಾತ್ಮಕ ಪ್ರಭಾವವನ್ನು ನೀಡುತ್ತವೆ. ನಿರ್ಮಲವಾದ ಮನಸ್ಸು ಹೊಂದಿದ ವ್ಯಕ್ತಿಯ ಜೀವನದಲ್ಲಿ ಶಾಂತಿ, ಸಂತೋಷ ಮತ್ತು ಸಾರ್ಥಕತೆ ನೆಲೆಸುತ್ತವೆ. ಆದ್ದರಿಂದ ಉತ್ತಮ ಚಿಂತನೆ, ವಿವೇಕದ ನಡೆ ಮತ್ತು ಸದ್ಭಾವನೆಯೇ ಸುಂದರ ಬದುಕಿನ ನಿಜವಾದ ಆಧಾರಗಳಾಗಿವೆ.

Advertisement

ಶುದ್ಧ ಚಿಂತನೆ ಶ್ರೇಷ್ಠ ಜೀವನಕ್ಕೆ ದಾರಿ ತೋರಿಸುತ್ತದೆ, ವಿವೇಕದ ನಡೆ ಯಶಸ್ಸಿನ ಕಡೆಗೆ ಕರೆದೊಯ್ಯುತ್ತದೆ, ಒಳ್ಳೆಯ ಭಾವ ಬದುಕಿನಲ್ಲಿ ಉತ್ತಮ ಪ್ರಭಾವ ಮೂಡಿಸುತ್ತದೆ, ನಿರ್ಮಲ ಮನಸ್ಸು ಸುಂದರ ಜೀವನವನ್ನು ರೂಪಿಸುತ್ತದೆ.

ಮಾನವನ ಬದುಕಿನ ರೂಪವನ್ನು ನಿರ್ಧರಿಸುವುದು ಅವನ ಹೊರಗಿನ ಪರಿಸ್ಥಿತಿಗಳಿಗಿಂತ ಹೆಚ್ಚಾಗಿ ಅವನ ಒಳಗಿನ ಚಿಂತನೆಗಳು. ಮನಸ್ಸಿನಲ್ಲಿ ಮೂಡುವ ಆಲೋಚನೆಗಳೇ ಮಾತುಗಳಾಗಿ ಹೊರಬರುತ್ತವೆ, ಮಾತುಗಳು ಕಾರ್ಯಗಳಾಗಿ ರೂಪುಗೊಳ್ಳುತ್ತವೆ, ಕಾರ್ಯಗಳು ಜೀವನದ ದಿಕ್ಕನ್ನು ನಿರ್ಧರಿಸುತ್ತವೆ. ಆದ್ದರಿಂದ ಚಿಂತನೆಯ ಶುದ್ಧತೆ ಎಂಬುದು ಸಾರ್ಥಕ ಬದುಕಿನ ಮೊದಲ ಮೆಟ್ಟಿಲಾಗಿದೆ.

ಶುದ್ಧವಾದ ಚಿಂತನೆ ಎಂದರೆ ಕೇವಲ ಒಳ್ಳೆಯ ವಿಚಾರಗಳನ್ನು ಯೋಚಿಸುವುದಲ್ಲ. ಅದು ಸತ್ಯವನ್ನು ಅರಿಯುವ ಮನಸ್ಸು, ಸರಿಯಾದುದನ್ನು ಆಯ್ಕೆ ಮಾಡುವ ವಿವೇಕ, ಮತ್ತೊಬ್ಬರ ಒಳಿತನ್ನು ಬಯಸುವ ಹೃದಯ ಮತ್ತು ತನ್ನ ತಪ್ಪುಗಳನ್ನು ಅರಿತು ತಿದ್ದಿಕೊಳ್ಳುವ ಪ್ರಾಮಾಣಿಕತೆ. ಮನಸ್ಸಿನೊಳಗೆ ಬೆಳಕು ಮೂಡಿದಾಗ ಬದುಕಿನ ದಾರಿಯೂ ಸ್ಪಷ್ಟವಾಗುತ್ತದೆ.

ಮನುಷ್ಯನ ಮನಸ್ಸು ಒಂದು ಭೂಮಿಯಂತಿದೆ. ಅದರಲ್ಲಿ ಯಾವ ಬೀಜವನ್ನು ಬಿತ್ತುತ್ತೇವೆಯೋ ಅದೇ ಬೆಳೆ ಬೆಳೆಯುತ್ತದೆ. ದ್ವೇಷದ ಬೀಜ ಬಿತ್ತಿದರೆ ಅಶಾಂತಿಯ ಮುಳ್ಳುಗಳು ಬೆಳೆಯುತ್ತವೆ. ಪ್ರೀತಿ, ಕರುಣೆ ಮತ್ತು ಸದ್ಭಾವದ ಬೀಜ ಬಿತ್ತಿದರೆ ಸಂತೋಷದ ಹೂವುಗಳು ಅರಳುತ್ತವೆ. ಆದ್ದರಿಂದ ಮನಸ್ಸಿನ ಕೃಷಿ ಅತ್ಯಂತ ಮುಖ್ಯವಾದುದು.

ಇಂದಿನ ವೇಗದ ಜೀವನದಲ್ಲಿ ಮನುಷ್ಯನು ಹೊರಗಿನ ಪ್ರಗತಿಗೆ ಹೆಚ್ಚು ಗಮನ ನೀಡುತ್ತಿದ್ದಾನೆ. ಆದರೆ ಅಂತರಂಗದ ಬೆಳವಣಿಗೆಯನ್ನು ಮರೆಯುತ್ತಿದ್ದಾನೆ. ಮನೆ, ಹಣ, ಸ್ಥಾನಮಾನ ಮತ್ತು ಸೌಲಭ್ಯಗಳು ಜೀವನಕ್ಕೆ ಅನುಕೂಲ ನೀಡಬಹುದು. ಆದರೆ ನೆಮ್ಮದಿ ಮತ್ತು ಸಂತೋಷವನ್ನು ನೀಡುವುದು ಶುದ್ಧ ಮನಸ್ಸು ಮಾತ್ರ. ಮನಸ್ಸು ಅಶಾಂತವಾಗಿದ್ದರೆ ಹೊರಗಿನ ವೈಭವವೂ ವ್ಯರ್ಥವಾಗುತ್ತದೆ.

ಚಿಂತನೆಯ ಶಕ್ತಿ ಅಪಾರವಾದುದು. ಒಂದು ಉತ್ತಮ ಆಲೋಚನೆ ವ್ಯಕ್ತಿಯ ಜೀವನವನ್ನೇ ಬದಲಾಯಿಸಬಹುದು. ನಿರಾಶೆಯಲ್ಲಿರುವವನಿಗೆ ಆಶೆಯ ಕಿರಣ ನೀಡುವ ಚಿಂತನೆ, ಸೋಲಿನಲ್ಲಿರುವವನಿಗೆ ಧೈರ್ಯ ತುಂಬುವ ಚಿಂತನೆ, ತಪ್ಪಿನಲ್ಲಿರುವವನಿಗೆ ಸರಿಯಾದ ದಾರಿ ತೋರಿಸುವ ಚಿಂತನೆಗಳು ಸಮಾಜದ ಉನ್ನತಿಗೆ ಕಾರಣವಾಗುತ್ತವೆ.

ವಿವೇಕವು ಶುದ್ಧ ಚಿಂತನೆಯ ಮಾರ್ಗದರ್ಶಕವಾಗಿದೆ. ಜ್ಞಾನವು ವಿಷಯಗಳನ್ನು ತಿಳಿಸುತ್ತದೆ, ಆದರೆ ವಿವೇಕವು ಯಾವುದು ಸರಿಯೆಂದು ತಿಳಿಸುತ್ತದೆ. ಜ್ಞಾನವಿದ್ದರೂ ವಿವೇಕವಿಲ್ಲದಿದ್ದರೆ ಅದು ಕೆಲವೊಮ್ಮೆ ಅಹಂಕಾರಕ್ಕೆ ಕಾರಣವಾಗಬಹುದು. ಆದರೆ ವಿವೇಕದೊಂದಿಗೆ ಸೇರಿದ ಜ್ಞಾನವು ಮಾನವೀಯತೆಯ ಬೆಳಕಾಗುತ್ತದೆ.

ಮನಸ್ಸನ್ನು ಶುದ್ಧಗೊಳಿಸಲು ಆತ್ಮಾವಲೋಕನ ಅಗತ್ಯ. ಪ್ರತಿದಿನ ನಮ್ಮ ನಡೆ, ನುಡಿ ಮತ್ತು ಚಿಂತನೆಗಳನ್ನು ಪರಿಶೀಲಿಸಬೇಕು. ಯಾರಿಗಾದರೂ ನೋವುಂಟುಮಾಡಿದ್ದೇವೆಯೇ, ನಮ್ಮಿಂದ ಯಾರಿಗಾದರೂ ಸಹಾಯವಾಗಿದೆಯೇ, ನಮ್ಮಲ್ಲಿ ಯಾವ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂಬುದನ್ನು ಯೋಚಿಸುವ ಗುಣ ಜೀವನವನ್ನು ಉನ್ನತಿಗೇರಿಸುತ್ತದೆ.

ಕ್ಷಮೆ, ಸಹನೆ ಮತ್ತು ವಿನಯ ಇವು ಶುದ್ಧ ಚಿಂತನೆಯ ಲಕ್ಷಣಗಳು. ಕೋಪವು ಕ್ಷಣಿಕವಾಗಿ ಗೆಲುವಿನ ಭಾವನೆ ನೀಡಬಹುದು, ಆದರೆ ಕ್ಷಮೆಯು ಶಾಶ್ವತವಾದ ಗೌರವವನ್ನು ತರುತ್ತದೆ. ಅಹಂಕಾರವು ಸಂಬಂಧಗಳನ್ನು ದೂರ ಮಾಡುತ್ತದೆ, ವಿನಯವು ಹೃದಯಗಳನ್ನು ಹತ್ತಿರ ಮಾಡುತ್ತದೆ. ಆದ್ದರಿಂದ ಉತ್ತಮ ಚಿಂತನೆಯು ಉತ್ತಮ ಸಂಬಂಧಗಳ ಮೂಲವಾಗಿದೆ.ಮಕ್ಕಳ ಮನಸ್ಸಿನಲ್ಲಿ ಬಾಲ್ಯದಿಂದಲೇ ಉತ್ತಮ ಚಿಂತನೆಗಳ ಬೀಜ ಬಿತ್ತಬೇಕು. ಅವರಿಗೆ ಕೇವಲ ಸ್ಪರ್ಧೆಯ ಪಾಠವಲ್ಲ, ಸಹಕಾರದ ಪಾಠವೂ ಅಗತ್ಯ. ಗೆಲ್ಲುವುದಕ್ಕಿಂತ ಮೊದಲು ಉತ್ತಮ ವ್ಯಕ್ತಿಯಾಗುವುದು ಮುಖ್ಯ ಎಂಬ ಅರಿವು ಮೂಡಿಸಬೇಕು. ಉತ್ತಮ ಸಂಸ್ಕಾರ ಹೊಂದಿದ ಮಕ್ಕಳು ಭವಿಷ್ಯದ ಉತ್ತಮ ಸಮಾಜವನ್ನು ನಿರ್ಮಿಸುತ್ತಾರೆ.

ಸಮಾಜದ ಬದಲಾವಣೆ ವ್ಯಕ್ತಿಯ ಚಿಂತನೆಯಿಂದ ಆರಂಭವಾಗುತ್ತದೆ. ಪ್ರತಿಯೊಬ್ಬರೂ ತಮ್ಮ ಮನಸ್ಸಿನಲ್ಲಿ ಸಕಾರಾತ್ಮಕತೆಯನ್ನು ಬೆಳೆಸಿಕೊಂಡರೆ ಕುಟುಂಬದಲ್ಲಿ ಶಾಂತಿ, ಸಮಾಜದಲ್ಲಿ ಸೌಹಾರ್ದತೆ ಮತ್ತು ಜಗತ್ತಿನಲ್ಲಿ ಸಹಬಾಳ್ವೆ ಸಾಧ್ಯವಾಗುತ್ತದೆ. ಹೊರಗಿನ ಜಗತ್ತನ್ನು ಬದಲಾಯಿಸುವ ಮೊದಲು ನಮ್ಮೊಳಗಿನ ಜಗತ್ತನ್ನು ಬದಲಾಯಿಸಿಕೊಳ್ಳಬೇಕು.

ಚಿಂತನೆಯ ಶುದ್ಧತೆ ವ್ಯಕ್ತಿತ್ವದ ಕನ್ನಡಿ. ಒಳ್ಳೆಯ ಚಿಂತನೆ ಹೊಂದಿದವನ ಮಾತಿನಲ್ಲಿ ಸೌಮ್ಯತೆ, ನಡೆಯಲ್ಲಿ ಪ್ರಾಮಾಣಿಕತೆ ಮತ್ತು ಕಾರ್ಯದಲ್ಲಿ ನಿಸ್ವಾರ್ಥತೆ ಕಾಣುತ್ತದೆ. ಅಂತಹ ವ್ಯಕ್ತಿಯ ಸಾನ್ನಿಧ್ಯವೇ ಇತರರಿಗೆ ಪ್ರೇರಣೆಯಾಗುತ್ತದೆ.

ಬದುಕಿನಲ್ಲಿ ಸಮಸ್ಯೆಗಳು ಬರುವುದು ಸಹಜ. ಆದರೆ ಅವುಗಳನ್ನು ನೋಡುವ ದೃಷ್ಟಿಕೋನವೇ ಮುಖ್ಯ. ನಕಾರಾತ್ಮಕ ಚಿಂತನೆ ಸಮಸ್ಯೆಯನ್ನು ದೊಡ್ಡದಾಗಿ ತೋರಿಸುತ್ತದೆ. ಸಕಾರಾತ್ಮಕ ಚಿಂತನೆ ಅದಕ್ಕೆ ಪರಿಹಾರದ ದಾರಿಯನ್ನು ಹುಡುಕುತ್ತದೆ. ಕಷ್ಟಗಳನ್ನು ಅವಕಾಶಗಳಾಗಿ ಪರಿವರ್ತಿಸುವ ಶಕ್ತಿ ಶುದ್ಧ ಚಿಂತನೆಯಲ್ಲಿದೆ.

ಆದ್ದರಿಂದ ಮನಸ್ಸಿನಲ್ಲಿ ಉತ್ತಮ ವಿಚಾರಗಳಿಗೆ ಸ್ಥಾನ ನೀಡಬೇಕು. ಅಸೂಯೆ, ದ್ವೇಷ, ಅಹಂಕಾರಗಳನ್ನು ದೂರ ಮಾಡಿ ಪ್ರೀತಿ, ಕರುಣೆ, ಸಹನೆ ಮತ್ತು ವಿವೇಕವನ್ನು ಬೆಳೆಸಬೇಕು. ಏಕೆಂದರೆ ಶುದ್ಧವಾದ ಚಿಂತನೆಯೇ ಶ್ರೇಷ್ಠವಾದ ಜೀವನದ ಅಡಿಪಾಯ.

ಪ್ರಮುಖವಾಗಿ ಮನುಷ್ಯನ ನಿಜವಾದ ಬುದ್ಧಿವಂತಿಕೆ ಅವನು ಎಷ್ಟು ತಿಳಿದಿದ್ದಾನೆ ಎಂಬುದರಲ್ಲಿ ಇಲ್ಲ, ಅವನು ತಿಳಿದಿರುವುದನ್ನು ಎಷ್ಟು ಉತ್ತಮವಾಗಿ ಬಳಸುತ್ತಾನೆ ಎಂಬುದರಲ್ಲಿ ಇದೆ. ಚಿಂತನೆ ಶುದ್ಧವಾದಾಗ ಬದುಕು ಸುಂದರವಾಗುತ್ತದೆ, ಬದುಕು ಸುಂದರವಾದಾಗ ವ್ಯಕ್ತಿತ್ವ ಬೆಳಗುತ್ತದೆ. ಶುದ್ಧ ಚಿಂತನೆಯೇ ಸಾರ್ಥಕ ಬದುಕಿನ ದೀಪ, ವಿವೇಕಯುತ ಬದುಕೇ ಮಾನವ ಜೀವನದ ಮಹಾ ಸಂಪತ್ತು. ಲೇಖನ:ಕಾಶಿಗೌ, ಸಾಹಿತಿ, ನಿವೃತ್ತ ಪ್ರಾಂಶುಪಾಲರು, ಮೈಸೂರು.

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು