ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಕಳೆದ ಕೆಲವು ವರ್ಷಗಳಿಂದ ಲೋಕಾರ್ಪಣೆಯಾಗದೆ ನೆನೆಗುದಿಗೆ ಬಿದ್ದಿದ್ದ ಇ ಎಸ್ ಐ ಆಸ್ಪತ್ರೆ ಮೇ 3 ರಂದು ಉದ್ಘಾಟನೆಯಾಗಲಿದೆ ಎಂದು ಶಾಸಕ ಧೀರಜ್ ಮುನಿರಾಜ್ ಮಾಹಿತಿ ನೀಡಿದ್ದಾರೆ.
ಈ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಅವರು, ಕಳೆದ ಎರಡು ವರ್ಷಗಳಿಂದ ಆಸ್ಪತ್ರೆ ಉದ್ಘಾಟನೆ ಸಂಬಂಧ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಗ್ಗ ಜಗ್ಗಾಟ ನಡೆಯುತ್ತಿತ್ತು, ಆದರೀಗ ಅಂತಿಮ ಹಂತಕ್ಕೆ ತಲುಪಿದ್ದು ಮೇ.3 ರಂದು ಆಸ್ಪತ್ರೆ ಉದ್ಘಾಟನೆಯಾಗಲಿದೆ ಎಂದರು.
ದೊಡ್ಡಬಳ್ಳಾಪುರ ಕೈಗಾರಿಕಾ ಪ್ರದೇಶವಾಗಿದ್ದು ದಿನ ನಿತ್ಯ ಲಕ್ಷಾಂತರ ಜನ ಕಾರ್ಮಿಕರು ಕೆಲಸ ಮಾಡುತ್ತಿದ್ದು ಇವರ ಉಪಯೋಗಕ್ಕಾಗಿ ಹಾಗು ಬೆಂಗಳೂರಿನ ರಾಜಾಜಿ ನಗರದಲ್ಲಿರುವ ಇಎಸ್ಐ ಅಸ್ಪತ್ರೆಗೆ ಹೋಗಿ ಬರಲು ಒಂದು ದಿನ ಕಾಲ ಹರಣವಾಗುತ್ತಿತ್ತು. ಈ ವ್ಯವಸ್ಥೆಗಾಗಿ ದೊಡ್ಡಬಳ್ಳಾಪುರ ತಾಲ್ಲೂಕಿನ ಬಾಶೆಟ್ಟ ಹಳ್ಳಿ ಪಂಚಾಯಿತಿ ವ್ಯಾಪ್ತಿಯ ಅರಹಳ್ಳಿ ಗುಡದ್ದಹಳ್ಳಿಯಲ್ಲಿ ಕಾರ್ಮಿಕರ ಉಪಯೋಗಕ್ಕಾಗಿ ಇಎಸ್ಐ ಅಸ್ಪತ್ರೆ 2016ರಲ್ಲಿ ಶಂಕುಸ್ಥಾಪನೆ ಮಾಡಲಾಗಿತ್ತು ಅದರೆ ಮೇ. 3 ರಂದು ಉದ್ಘಾಟನೆ ಮಾಡಲಿದ್ದು ಈ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಮನ್ಸೂಕ್ ಮಾಂಡವೀಯ ಮತ್ತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ನೇತೃತ್ವದಲ್ಲಿ ಈ ಆಸ್ಪತ್ರೆ ಉದ್ಘಾಟನೆಯಾಗಲಿದೆ, ಈ ಕಾರ್ಯಕ್ರಮಕ್ಕೆ ರಾಜ್ಯದ ಸಚಿವರುಗಳು ಆಗಮಿಸುವ ಸಾಧ್ಯತೆ ಇದೆ ಎಂದರು.
ಕೇಂದ್ರ ಇ ಎಸ್ ಐ ಕಾರ್ಪೋರೇಷನ್ ವತಿಯಿಂದ ವೈದ್ಯಾಧಿಕಾರಿಗಳು ಆಸ್ಪತ್ರೆಯ ಉಸ್ತುವಾರಿ ವಹಿಸಿಕೊಂಡು ಕಾರ್ಯೋನ್ಮುಖರಾಗಿದ್ದಾರೆ. ಇನ್ನು ಈ ಆಸ್ಪತ್ರೆಗೆ ವೈದ್ಯರನ್ನು ಮತ್ತು ಸಿಬ್ಬಂದಿಗಳನ್ನು ಕಾಂಟ್ರಾಕ್ಟ್ ಆಧಾರದ ಮೇಲೆ ನೇಮಕ ಮಾಡಲಾಗುತ್ತದೆ.
ಮೇ. 3 ರ ನಂತರ ಮೊದಲಿಗೆ 40 ವರ್ಷ ಮೇಲ್ಪಟ್ಟ ಕಾರ್ಮಿಕರಿಗೆ ವಾರ್ಷಿಕ ಆರೋಗ್ಯ ತಪಾಸಣೆ ಕಾರ್ಯ ನಡೆಯಲಿದ್ದು ಮುಂದಿನ ಒಂದು ತಿಂಗಳಲ್ಲಿ ಸಂಪೂರ್ಣ ಓ ಪಿ ಡಿ ವಿಭಾಗದಲ್ಲಿ ಸರ್ಜನ್ ಗಳು ಕೆಲಸ ಮಾಡಲಿದ್ದಾರೆ ಎಂದು ಹೇಳಿದರು.


