Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಜಿಲ್ಲೆಯಲ್ಲಿ ಮಿತಿ ಮೀರಿ ಹೆಚ್ಚುತ್ತಿರುವ ಅಪಘಾತಗಳು, ಸಂತ್ರಸ್ತರಾಗುತ್ತಿರುವ ಕುಟುಂಬಗಳು

Advertisement
ಚಂದ್ರವಳ್ಳಿ ನ್ಯೂಸ್, ತುಮಕೂರು:
       ವಾಹನ ಸವಾರರು ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರಿಂದ ರಸ್ತೆ ಅಪಘಾತಗಳನ್ನು ತಪ್ಪಿಸಬಹುದು.  ಸಂಚಾರಿ ನಿಯಮಗಳನ್ನು ಪಾಲಿಸದಿರುವುದು ಅವಾಂತರಗಳಿಗೆ ಆಹ್ವಾನ ನೀಡಿದಂತೆ.  ಇತ್ತೀಚಿನ ದಿನಗಳಲ್ಲಿ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದಿರುವುದು,  ಮೊಬೈಲ್‌ನಲ್ಲಿ ಮಾತನಾಡುತ್ತಾ ವಾಹನ ಚಾಲನೆ ಮಾಡುವುದು ಒಂದು ಫ್ಯಾಷನ್ ಆಗಿದೆ.  ಇದರಿಂದ ರಸ್ತೆ ಅಪಘಾತಗಳ ಸಂಖ್ಯೆ ದಿನೇ ದಿನೇ ಮಿತಿ ಮೀರಿ ಹೆಚ್ಚಾಗುತ್ತಿದೆ. ಇದರಿಂದಾಗಿ ಸಂತ್ರಸ್ತ ಕುಟುಂಬಗಳು ತಮ್ಮ ಆಧಾರಸ್ತಂಭಗಳನ್ನು ಕಳೆದುಕೊಂಡು ಪರಿತಪಿಸುತ್ತಿರುವ ದೃಶ್ಯ ಮನ ಮಿಡಿಯುತ್ತಿದೆ.

ಜಿಲ್ಲೆಯಲ್ಲಿ ೨೦೨೪ರ ಜನವರಿಯಿಂದ ಡಿಸೆಂಬರ್‌ವರೆಗೆ ೧೮೩೬ ಅಪಘಾತಗಳು ಸಂಭವಿಸಿರುವ ಬಗ್ಗೆ ವರದಿಯಾಗಿರುವುದು ಆತಂಕದ ವಿಷಯ.  ವಾಹನ ಚಾಲನೆ ಮಾಡುವಾಗ ಎಚ್ಚರಿಕೆ ವಹಿಸುವುದರಿಂದ ಸಂಭವಿಸಬಹುದಾದ ರಸ್ತೆ ಅಪಘಾತಗಳನ್ನು ತಪ್ಪಿಸಬಹುದು.

ವಾಹನ ಚಲಾಯಿಸುವಾಗ ಎಚ್ಚರಿಕೆ ಅಗತ್ಯಃ
       ವಾಹನ ಚಾಲಕರು ಅಂಕು-ಡೊಂಕು ರಸ್ತೆ, ತಿರುವಿನಲ್ಲಿ ಓವರ್‌ಟೇಕ್ ಮಾಡಬಾರದು.  ಮುಂದಿರುವ  ವಾಹನಕ್ಕೆ ಅತಿ ಹತ್ತಿರವಾಗಿ ವಾಹನ ಚಲಾಯಿಸಬಾರದು.  ವಾಹನ ಚಾಲನೆಯಲ್ಲಿ ಅನಾವಶ್ಯಕ ಪೈಪೋಟಿ ಬೇಡ.  ನಿದ್ದೆಯ ಸಮಯವಾದ್ದರಿಂದ ಬೆಳಗಿನ ಜಾವ ೨ ರಿಂದ ೫ ಗಂಟೆಯ ನಡುವೆ ವಾಹನ ಚಲಾಯಿಸದಿದ್ದರೆ ಉತ್ತಮ. 

       ಎದುರಿನ ವಾಹನ ಚಾಲಕನ ಕಣ್ಣು ಕುಕ್ಕುವಂತೆ ತಮ್ಮ ವಾಹನದ ಹೆಡ್‌ಲೈಟ್ ಉರಿಸಬಾರದು.  ವಾಹನ ಚಲಾಯಿಸುವಾಗ ಏಕಾಗ್ರತೆ ಕಳೆದುಕೊಳ್ಳಬಾರದು.  ಶಾಲಾ-ಕಾಲೇಜುಗಳಿರುವಲ್ಲಿ  ಹಾರ್ನ್ ಮಾಡುವುದನ್ನು ತಪ್ಪಿಸಬೇಕು.  ವಾಹನಕ್ಕೆ ಕರ್ಕಶ ದನಿಯುಳ್ಳ ಹಾರ್ನ್ ಅಳವಡಿಸಬಾರದು.  ವಾಹನ ಚಾಲನೆ ಮಾಡುವಾಗ ಮೊಬೈಲ್‌ನಲ್ಲಿ ಮಾತನಾಡಬಾರದು.  ಧೂಮಪಾನ ಮಾಡಬಾರದು.

ವಾಹನ ಚಾಲಕರಿಗೆ ಸೂಚನೆಃ
       ಚಲಾಯಿಸುವ ಮುನ್ನ ವಾಹನ ಸುಸ್ಥಿತಿಯಲ್ಲಿರುವುದನ್ನು ಖಚಿತಪಡಿಸಿಕೊಳ್ಳಬೇಕು.  ವಾಹನ ಚಾಲಕರು ಮೂರು ತಿಂಗಳಿಗೊಮ್ಮೆಯಾದರೂ ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು.   ರಸ್ತೆ ದಾಟುವ ವೃದ್ಧರು, ಮಕ್ಕಳಿಗೆ ಅವಕಾಶ ಮಾಡಿಕೊಡುವುದರಿಂದ ರಸ್ತೆ ಅಪಘಾತಗಳನ್ನು ತಪ್ಪಿಸಬಹುದಾಗಿದೆ.

ರಸ್ತೆ ಅಪಘಾತ ತಪ್ಪಿಸಲು ಸಾರಿಗೆ ಇಲಾಖೆಯಿಂದ ಕ್ರಮಃ
ರಸ್ತೆ ಅಪಘಾತಗಳನ್ನು ತಪ್ಪಿಸಲು ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ಪ್ರತಿ ವರ್ಷ ಜನವರಿ ಮಾಹೆಯಲ್ಲಿ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು.  ಶಾಲಾ-ಕಾಲೇಜುಗಳಲ್ಲಿಯೂ ರಸ್ತೆ ಸುರಕ್ಷತೆ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಗುತ್ತಿದೆ.   ಕಳೆದ ಕ್ಯಾಲೆಂಡರ್ ವರ್ಷದಲ್ಲಿ ಮದ್ಯಪಾನ ಮಾಡಿ ವಾಹನ ಚಾಲನೆ ಸೇರಿದಂತೆ ರಸ್ತೆ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದ ೪೨೫ ಚಾಲನಾ ಪರವಾನಗಿಯನ್ನು ಅಮಾನತ್ತು ಮಾಡಲಾಗಿದೆ.

ಅಧಿಕ ಭಾರ ಹೊತ್ತು ಸಾಗುವಂತಹ ಸರಕು ಸಾಗಾಣಿಕೆ ವಾಹನಗಳಲ್ಲಿ ನಿಗಧಿತ ಭಾರಮಿತಿಗಿಂತ ಅಧಿಕವಾಗಿದ್ದಲ್ಲಿ ಪ್ರಕರಣ  ದಾಖಲಿಕೊಂಡು ಕ್ರಮ ಕೈಗೊಳ್ಳಲಾಗುತ್ತಿದೆ.  ಸರಕು ಸಾಗಾಣಿಕೆ ವಾಹನಗಳಲ್ಲಿ ಪ್ರಯಾಣಿಕರು/ಪ್ರಾಣಿಗಳನ್ನು ತುಂಬಿಕೊಂಡು ಸಂಚರಿಸುತ್ತಿದ್ದಲ್ಲಿ ಅಂತಹ ವಾಹನಗಳ ನೋಂದಣಿಯನ್ನು ರದ್ದುಪಡಿಸಲಾಗುವುದು.  ೧೮ ವರ್ಷದೊಳಗಿರುವವರು ವಾಹನ ಚಲಾಯಿಸಿದಲ್ಲಿ ಅವರ ಪೋಷಕರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು. ದ್ವಿಚಕ್ರ ವಾಹನ ಚಾಲಕರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸದಲ್ಲಿ ದಂಡ ವಿಧಿಸಿ ಚಾಲನಾ ಪರವಾನಗಿಯನ್ನು ಅಮಾನತ್ತುಗೊಳಿಸಲಾಗುವುದು.

ಮದ್ಯಪಾನ ಮಾಡಿ ವಾಹನ ಚಲಾಯಿಸಿದರೆ ಜೈಲು ಶಿಕ್ಷೆಃ
ಮದ್ಯ ಸೇವನೆ ಮಾಡಿ ವಾಹನ ಚಾಲನೆ ಮಾಡಿದರೆ ೬ ತಿಂಗಳು ಜೈಲು ಶಿಕ್ಷೆ ಅಥವಾ ೨೦೦೦ ರೂ.ಗಳ ದಂಡ ಅಥವಾ ಶಿಕ್ಷೆ ಮತ್ತು ದಂಡ ಎರಡನ್ನೂ ವಿಧಿಸಲು ಅವಕಾಶವಿದೆ.  ಚಾಲನಾ ಸಂದರ್ಭದಲ್ಲಿ ಮೊಬೈಲ್ ಬಳಕೆ ಮಾಡಿದವರಿಗೆ ಸ್ಥಳದಲ್ಲೇ ಚಾಲನಾ ಪರವಾನಗಿ ಅಮಾನತ್ತು ಮಾಡಲಾಗುವುದು.

ಮಾಲೀಕರು ಮತ್ತು ಚಾಲಕರು ತಮ್ಮ ವಾಹನ ದಾಖಲಾತಿಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕು. ವಾಹನ ಸಂಚಾರಕ್ಕೂ ಮುನ್ನ ವಾಹನದ ದಾಖಲಾತಿಗಳನ್ನು ಪರಿಶೀಲಿಸಿಕೊಳ್ಳಬೇಕು. ಇಲ್ಲವಾದಲ್ಲಿ ಮೋಟಾರ್ ವಾಹನ ಕಾಯ್ದೆ ಪ್ರಕಾರ ದಂಡ ವಿಧಿಸಲಾಗುವುದು.

ಮಾಲೀಕರು ತಮ್ಮ ವಾಹನ ಬಣ್ಣ ಬದಲಾವಣೆ ಹಾಗೂ ಇನ್ನಾವುದೇ ರೀತಿಯಲ್ಲಿ ಸಾರಿಗೆ ಇಲಾಖೆ ಅನುಮತಿಯಿಲ್ಲದೆ ಮಾರ್ಪಾಡು ಮಾಡಿಕೊಳ್ಳಬಾರದು. ವಾಹನದ ಮಾರ್ಪಾಡು ಮಾಡುವ ಅವಶ್ಯಕತೆಯಿದ್ದಲ್ಲಿ ಕಡ್ಡಾಯವಾಗಿ ಸಾರಿಗೆ ಇಲಾಖೆಯ ಅನುಮತಿ ಪಡೆದುಕೊಳ್ಳಬೇಕು. ಇಲ್ಲವಾದಲ್ಲಿ ಮೋಟಾರ್ ವಾಹನ ಕಾಯ್ದೆ ಪ್ರಕಾರ ದಂಡ ವಿಧಿಸಲಾಗುವುದು.

       ರಾಷ್ಟ್ರೀಯ ಹೆದ್ದಾರಿ ಹಾಗೂ ರಸ್ತೆಗಳಲ್ಲಿ ವಾಹನಗಳನ್ನು ಅನಾವಶ್ಯಕವಾಗಿ ನಿಲುಗಡೆ ಮಾಡಬಾರದು. ವಾಹನ ತೊಂದರೆಗೊಳಗಾದಲ್ಲಿ ನಿಲುಗಡೆ ಮಾಡುವ ಅವಶ್ಯಕತೆ ಬಂದಾಗ ಎಮರ್ಜೆನ್ಸಿ ಪಾರ್ಕಿಂಗ್ ರಿಫ್ಲೆಕ್ಟರ್ ಸ್ಟಾಂಡ್ ಅನ್ನು ಕಾಣುವಂತೆ ನಿಲುಗಡೆ ಮಾಡಬೇಕು.

ಅಪಘಾತಕ್ಕೀಡಾದವರಿಗೆ ಪ್ರಥಮ ಚಿಕಿತ್ಸೆ ಅಗತ್ಯಃ
       ರಸ್ತೆ ಅಪಘಾತವಾದಾಗ ಅಪಘಾತಕ್ಕೀಡಾದವರಿಗೆ ಪ್ರಥಮ ಚಿಕಿತ್ಸೆ ನೀಡಬೇಕು.  ಆದಷ್ಟು ಬೇಗ ಹತ್ತಿರದ ಆಸ್ಪತ್ರೆಗೆ ದಾಖಲಿಸಬೇಕು.  ಅಪಘಾತವುಂಟು ಮಾಡಿ ಗಾಯಾಳುಗೆ ಪ್ರಥಮ ಚಿಕಿತ್ಸೆ ನೀಡದೆ ತಪ್ಪಿಸಿಕೊಂಡು ಹೋದರೆ ಹಿಟ್ ಅಂಡ್ ರನ್  ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಪಡಿಸಲಾಗುವುದು.   ಅಪಘಾತವುಂಟು ಮಾಡಿ ನಿಲ್ಲಿಸದೆ ಹೋಗುವ ವಾಹನದ ನೋಂದಣಿ ಸಂಖ್ಯೆಯನ್ನು  ಸಹಾಯವಾಣಿ ಸಂಖ್ಯೆ ೧೦೦ಕ್ಕೆ ತಿಳಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ ರಸ್ತೆ ಸುರಕ್ಷತಾ ಸಮಿತಿ ಅಧ್ಯಕ್ಷ ಶುಭ ಕಲ್ಯಾಣ್ ಮನವಿ ಮಾಡಿದ್ದಾರೆ.



೪೧ ನಿರಂತರ ಅಪಘಾತ ತಾಣಗಳು(ಬ್ಲಾಕ್ ಸ್ಪಾಟ್ಸ್)ಃ
ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗಳಲ್ಲಿ  ನಿರಂತರವಾಗಿ ಅಪಘಾತ ಸಂಭವಿಸುವ ೪೧ ಸ್ಥಳಗಳನ್ನು ಗುರುತಿಸಲಾಗಿದ್ದು,   ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಪ್ರತೀ ತಿಂಗಳು ಸಭೆ ನಡೆಸಲಾಗುತ್ತಿದೆ.

ಪೊಲೀಸ್ ಇಲಾಖೆಯಿಂದ ಜಿಲ್ಲೆಯಲ್ಲಿ ತುಮಕೂರು ಗ್ರಾಮಾಂತರ ವ್ಯಾಪ್ತಿಯ ಜೈನ್ ಪಬ್ಲಿಕ್ ಶಾಲೆ- ಊರುಕೆರೆ ಹಾಗೂ ಹೆಗ್ಗೆರೆ ಆರ್ಚ್-ಡೆಂಟಲ್ ಕಾಲೇಜು; ಕೋರಾ ವ್ಯಾಪ್ತಿ ನೆಲಹಾಳ್ ವೃತ್ತ ಹಾಗೂ ಅಜ್ಜಗೊಂಡನಹಳ್ಳಿ ವೃತ್ತ; ಕ್ಯಾತ್ಸಂದ್ರ ವ್ಯಾಪ್ತಿ ಚಿಕ್ಕಹಳ್ಳಿ, ಹಿರೇಹಳ್ಳಿ, ಪಂಡಿತನಹಳ್ಳಿಗೇಟ್, ಮಂಚಲಕುಪ್ಪೆ ಸರ್ಕಲ್; ಕುಣಿಗಲ್ ವ್ಯಾಪ್ತಿ ಅಂಚೆಪಾಳ್ಯ, ಬೇಗೂರು ಸೇತುವೆ, ಹೇರೂರು ಸೇತುವೆ, ಉರ್ಕೇನಹಳ್ಳಿ, ಕುರುಡಿಹಳ್ಳಿ; ಅಮೃತೂರು ವ್ಯಾಪ್ತಿ ನಾಗೇಗೌಡನಪಾಳ್ಯ ಗೇಟ್, ತಿಪ್ಪೂರು ಗೇಟ್, ಮಾಗಡಿಪಾಳ್ಯ ಗೇಟ್, ಹೇಮಾವತಿ ಕ್ರಾಸ್, ಚಾಕೇನಹಳ್ಳಿಗೇಟ್; ತುರುವೇಕೆರೆ ವ್ಯಾಪ್ತಿ ಜೋಡುಗಟ್ಟೆ; ಶಿರಾ ವ್ಯಾಪ್ತಿ ಶಿವಾಜಿ ನಗರ ಹಾಗೂ ಮಾನಂಗಿತಾಂಡ ಗೇಟ್; ಕಳ್ಳಂಬೆಳ್ಳ ವ್ಯಾಪ್ತಿ ಜೋಗಿಹಳ್ಳಿ, ದೊಡ್ಡಾಲದಮರ, ಬಾಳೇನಹಳ್ಳಿ ಗೇಟ್; ತಾವರೆಕೆರೆ ವ್ಯಾಪ್ತಿ ದ್ವಾರಾಳು ಸೇತುವೆ ಹಾಗೂ ತಾವರೆಕೆರೆ; ತಿಪಟೂರು ಪಟ್ಟಣ ವ್ಯಾಪ್ತಿ ಬಂಡಿಹಳ್ಳಿಗೇಟ್-ರೇಣುಕಾ ಡಾಬ; ಹುಲಿಯೂರು ದುರ್ಗ ವ್ಯಾಪ್ತಿ ಡಿ.ಹೊಸಹಳ್ಳಿ-ಡಿ.ಹೊಸಹಳ್ಳಿ ಗೊಲ್ಲರಹಟ್ಟಿ, ಕೊಡವತ್ತಿ ಜಂಕ್ಷನ್, ಹಳೇವೂರು ಜಂಕ್ಷನ್, ಐಬಿ ಸರ್ಕಲ್; ಮಿಡಿಗೇಶಿ ವ್ಯಾಪ್ತಿ ಕೆರೆಗಳ ಪಾಳ್ಯ ಬಸ್ ನಿಲ್ದಾಣ ಸುತ್ತಮುತ್ತ ಹಾಗೂ ಹೊಸಕೆರೆ; ಪಾವಗಡ ವ್ಯಾಪ್ತಿ ರಾಜವಂತಿ ಕೆರೆ, ನಾಗಲಮಡಿಕೆ ಕ್ರಾಸ್, ಪಳವಳ್ಳಿ ಕೆರೆ; ಕೊರಟಗೆರೆ ವ್ಯಾಪ್ತಿ ತುಂಬಾಡಿ, ಜಿ.ನಾಗೇನಹಳ್ಳಿ, ಜಂಪೇನಹಳ್ಳಿ ಕ್ರಾಸ್, ಜಟ್ಟಿ ಅಗ್ರಹಾರ, ಥರಟಿ ಸೇರಿದಂತೆ ೪೧ ಬ್ಲಾಕ್ ಸ್ಪಾಟ್‌ಗಳನ್ನು ಗುರುತಿಸಲಾಗಿದೆ.



ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ೫೪ ಕೋಟಿ ರೂ. ಶುಲ್ಕ ಸಂಗ್ರಹಃ
 ಸಾರಿಗೆ ಇಲಾಖೆಯಲ್ಲಿ ೨೦೨೪ರ ಜನವರಿ ಮಾಹೆಯಿಂದ ಡಿಸೆಂಬರ್‌ವರೆಗೆ ವಾಹನಗಳ ನೋಂದಣಿಗಾಗಿ  ೪,೮೬,೫೯,೦೨೮ ರೂ., ಅರ್ಹತಾ ಪತ್ರಕ್ಕಾಗಿ ೮೪,೫೭,೧೦೧ ರೂ., ರಹದಾರಿ ಶುಲ್ಕ ೪೮,೮೩,೩೦೬ ರೂ., ದಂಡ ಶುಲ್ಕವಾಗಿ ೧,೭೧,೪೫,೭೩೩ ರೂ., ೫೬೬೩ ಇಲಾಖಾ ಪ್ರಕರಣಗಳಿಂದ ೨,೩೮,೦೭,೮೯೩ ರೂ. ಸೇರಿ ೫೪,೦೯,೫೩,೦೬೧ ರೂ.ಗಳನ್ನು ಸಂಗ್ರಹಿಸಲಾಗಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಎ.ವಿ. ಪ್ರಸಾದ್ ತಿಳಿಸಿದ್ದಾರೆ.
ಲೇಖನ-ಆರ್. ರೂಪಕಲಾ, ವಾರ್ತಾ ಸಹಾಯಕರು, ವಾರ್ತಾ ಇಲಾಖೆ, ತುಮಕೂರು.

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ