ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಮಹತ್ವದ ರಾಜಕೀಯ ಬೆಳವಣಿಗೆಗೆ ವೇದಿಕೆ ಸಿದ್ಧವಾಗಿದೆ. ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಬೆನ್ನಲ್ಲೇ ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಹಳೆಯ ರಾಜಕೀಯ ಅಸ್ತ್ರವಾಗಿದ್ದ ‘ಅಹಿಂದ’ ಮೈತ್ರಿಗೆ ಇತಿಶ್ರೀ ಹಾಡಲು ಮುಂದಾಗಿದ್ದಾರೆ. ಅಲ್ಪಸಂಖ್ಯಾತರನ್ನು ಹೊರಗಿಟ್ಟು, ಕೇವಲ ಹಿಂದುಳಿದ ವರ್ಗ ಹಾಗೂ ದಲಿತರನ್ನು ಒಳಗೊಂಡ ‘ಹಿಂದಾ’ ಒಕ್ಕೂಟವನ್ನು ಪುನರುಜ್ಜೀವನಗೊಳಿಸಲು ಹೊಸ ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ.
ಇದರ ಮೊದಲ ಹೆಜ್ಜೆಯಾಗಿ, ಭಾನುವಾರ (ಸೆಪ್ಟೆಂಬರ್ 6) ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್ ‘ಹಿಂದುಳಿದ ವರ್ಗಗಳ ಮಹಾ ಒಕ್ಕೂಟದ ಸಮಾವೇಶ’ ಆಯೋಜಿಸಲಾಗಿತ್ತು. 2028ರ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾಂಗ್ರೆಸ್‌ನಲ್ಲಿ ಹಿಂದುಳಿದ ವರ್ಗಗಳು ಮತ್ತು ದಲಿತರ ಬೆಂಬಲವನ್ನು ಮತ್ತಷ್ಟು ಗಟ್ಟಿಗೊಳಿಸಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಜಂಟಿಯಾಗಿ ಈ ‘ಹಿಂದಾ’ ರಾಜಕೀಯಕ್ಕೆ ಹೊಸ ಮುನ್ನುಡಿ ಬರೆಯುತ್ತಿದ್ದಾರೆ.
ಡಿ.ಕೆ. ಶಿವಕುಮಾರ್‌ಗೆ ರವಾನೆಯಾಗಲಿದೆಯೇ ಸೂಕ್ಷ್ಮ ಸಂದೇಶ?:
2028ರ ಚುನಾವಣೆಯಲ್ಲಿ ಡಿ.ಕೆ. ಶಿವಕುಮಾರ್ ಅವರನ್ನು ಕಾಂಗ್ರೆಸ್‌ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ, ಭಾನುವಾರದ ಸಮಾವೇಶದಲ್ಲಿ ಸಿದ್ದರಾಮಯ್ಯ ಅವರಿಗೆ ಅದ್ಧೂರಿ ಸನ್ಮಾನ ಹಾಗೂ ಹೊಸ ಸಾಮಾಜಿಕ ಮೈತ್ರಿಕೂಟದ ಪ್ರದರ್ಶನ ನಡೆದಿದ್ದು ಶಿವಕುಮಾರ್ ಅವರಿಗೆ ಒಂದು ಸೂಕ್ಷ್ಮ ರಾಜಕೀಯ ಸಂದೇಶ ರವಾನಿಸುವ ವೇದಿಕೆಯಾಗಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಹಳೆಯ ಆಪ್ತರ ಜಾಗಕ್ಕೆ ಹೊಸ ನಾಯಕರ ಪಡೆ:
ಬದಲಾದ ರಾಜಕೀಯ ಸನ್ನಿವೇಶದಲ್ಲಿ ಸಿದ್ದರಾಮಯ್ಯ ಅವರ ನಿಕಟವರ್ತಿಗಳಾಗಿದ್ದ ಸಚಿವ ಸತೀಶ್ ಜಾರಕಿಹೊಳಿ, ವಸತಿ ಸಚಿವ ಬಿ.ಝಡ್. ಜಮೀರ್ ಅಹ್ಮದ್ ಖಾನ್ ಹಾಗೂ ಡಾ. ಎಚ್.ಸಿ. ಮಹದೇವಪ್ಪ ದೂರವಾಗುತ್ತಿರುವಂತೆ ಕಾಣಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹೊಸ ನಾಯಕರ ಪಡೆಯೊಂದಿಗೆ ಸಿದ್ದರಾಮಯ್ಯ 'ಹಿಂದಾ' ಒಕ್ಕೂಟವನ್ನು ಪುನರ್‌ನಿರ್ಮಿಸಲು ಮುಂದಾಗಿದ್ದಾರೆ.
ಇದಕ್ಕೆ ಪುಷ್ಟಿ ನೀಡುವಂತೆ ಈ ಸಮಾವೇಶದ ಆಹ್ವಾನಿತರ ಪಟ್ಟಿಯಿಂದ ಜಮೀರ್, ಸತೀಶ್ ಜಾರಕಿಹೊಳಿ ಹಾಗೂ ಮಹದೇವಪ್ಪ ಅವರನ್ನು ಹೊರಗಿಡಲಾಗಿದೆ. ಬದಲಾಗಿ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್, ಸಚಿವರಾದ ಸಂತೋಷ್ ಲಾಡ್, ಪುಟ್ಟರಂಗ ಶೆಟ್ಟಿ, ಮಧು ಬಂಗಾರಪ್ಪ, ಬೈರತಿ ಸುರೇಶ್, ಅಜಯ್ ಸಿಂಗ್ ಹಾಗೂ ಕೆ.ಎನ್. ರಾಜಣ್ಣ ಅವರಿಗೆ ಆಹ್ವಾನ ನೀಡಲಾಗಿದೆ.
ಡಾ. ಯತೀಂದ್ರಗೆ ಸೈದ್ಧಾಂತಿಕ ಉತ್ತರಾಧಿಕಾರಿ ಪಟ್ಟ?:
ಇದೇ ವೇಳೆ ಸಿದ್ದರಾಮಯ್ಯ ಅವರ ಪುತ್ರ, ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರನ್ನು ರಾಜಕೀಯ ಹಾಗೂ ಸೈದ್ಧಾಂತಿಕ ಉತ್ತರಾಧಿಕಾರಿಯಾಗಿ ಬಿಂಬಿಸುವ ಪ್ರಯತ್ನಗಳೂ ನಡೆಯುತ್ತಿವೆ. ಇತ್ತೀಚೆಗೆ ವರುಣಾ ಕ್ಷೇತ್ರಕ್ಕೆ ಭೇಟಿ ನೀಡಿದ್ದ ಡಾ. ಜಿ. ಪರಮೇಶ್ವರ್, ದಲಿತರು ಯತೀಂದ್ರ ಅವರನ್ನು ಭವಿಷ್ಯದ ನಾಯಕನಾಗಿ ಬೆಳೆಸಬೇಕೆಂದು ಕರೆ ನೀಡಿದ್ದರು. ಇದು ಪರಮೇಶ್ವರ್ ಮತ್ತು ಸಿದ್ದರಾಮಯ್ಯ ನಡುವಿನ ಪರಸ್ಪರ ರಾಜಕೀಯ ಬೆಂಬಲದ ಸಂಕೇತವೆಂದೇ ವ್ಯಾಖ್ಯಾನಿಸಲಾಗಿದೆ.
2028ರ ಸಿಎಂ ರೇಸ್‌ನಲ್ಲಿ ಪರಮೇಶ್ವರ್?:
ತಮ್ಮ ಆಡಳಿತಾವಧಿಯಲ್ಲಿ ಸರ್ಕಾರದಲ್ಲಿ ಒಂದೇ ಉಪಮುಖ್ಯಮಂತ್ರಿ ಹುದ್ದೆ ಇರಬೇಕು ಹಾಗೂ ಆ ಹುದ್ದೆ ಡಾ. ಪರಮೇಶ್ವರ್ ಅವರಿಗೆ ಸಿಗಬೇಕು ಎಂದು ತಾವು ಹೈಕಮಾಂಡ್ ಮಟ್ಟದಲ್ಲಿ ಲಾಬಿ ಮಾಡಿದ್ದಾಗಿ ಸಿದ್ದರಾಮಯ್ಯ ಬಹಿರಂಗವಾಗಿ ಹೇಳಿಕೊಂಡಿದ್ದರು. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಸಿದ್ದರಾಮಯ್ಯ ಬಣದ ಪ್ರಮುಖ ದಲಿತ ಮುಖವಾಗಿ ಮೂಡಿಬರುತ್ತಿರುವ ಡಾ. ಜಿ. ಪರಮೇಶ್ವರ್ ಅವರು 2028ರ ಸಿಎಂ ರೇಸ್‌ನಲ್ಲಿ ಪ್ರಮುಖ ಆಕಾಂಕ್ಷಿಯಾಗುವ ಸಾಧ್ಯತೆ ದಟ್ಟವಾಗಿದೆ.
ಆಯೋಜಕರ ಸ್ಪಷ್ಟನೆ:
ಇನ್ನು ಈ ಎಲ್ಲಾ ರಾಜಕೀಯ ಲೆಕ್ಕಾಚಾರಗಳ ನಡುವೆ, ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಕೆ.ಎಂ. ರಾಮಚಂದ್ರಪ್ಪ ಪ್ರತಿಕ್ರಿಯಿಸಿ, "ಒಕ್ಕೂಟದ ಬೆಳ್ಳಿ ಹಬ್ಬದ ಅಂಗವಾಗಿ ಈ ಸಮಾವೇಶ ಆಯೋಜಿಸಲಾಗಿದ್ದು, ಹಿಂದುಳಿದ ವರ್ಗಗಳ ನಾಯಕರನ್ನು ಮಾತ್ರ ಆಹ್ವಾನಿಸಲಾಗಿದೆ. ಸರ್ಕಾರದ ಪ್ರತಿನಿಧಿಯಾಗಿ ಡಾ. ಪರಮೇಶ್ವರ್ ಬಂದಿದ್ದಾರೆ. ಇದರಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ, ಹಿಂದುಳಿದ ವರ್ಗಗಳ ಸಮೀಕ್ಷಾ ವರದಿ ಜಾರಿಗೆ ಒತ್ತಾಯಿಸುವುದೇ ನಮ್ಮ ಮೂಲ ಉದ್ದೇಶ" ಎಂದು ಸ್ಪಷ್ಟಪಡಿಸಿದ್ದಾರೆ.




