ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ ಸೆಮಿಕಂಡಕ್ಟರ್ ಮತ್ತು ಎಲೆಕ್ಟ್ರಾನಿಕ್ಸ್ ವಲಯವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟಿಲ್ ನೇತೃತ್ವದ ಕರ್ನಾಟಕ ನಿಯೋಗವು ನೆದರ್‌ಲ್ಯಾಂಡ್ಸ್‌ನಲ್ಲಿ ಉನ್ನತ ಮಟ್ಟದ ಬಂಡವಾಳ ಪ್ರಚಾರ ಸಭೆಗಳನ್ನು ಆರಂಭಿಸಿದೆ.
ಪ್ರವಾಸದ ಭಾಗವಾಗಿ ಸಚಿವರು ನೆದರ್‌ಲ್ಯಾಂಡ್ಸ್ ಮೂಲದ ಜಾಗತಿಕ ಪ್ರಸಿದ್ಧ ಸೆಮಿಕಂಡಕ್ಟರ್ ಸಂಸ್ಥೆ 'ನೆಕ್ಸ್‌ಪೀರಿಯಾ'ದ ಜಾಗತಿಕ ಅಡ್ವೊಕೇಸಿ ಮತ್ತು ಅಲೈಯನ್ಸಸ್ ವಿಭಾಗದ ಹಿರಿಯ ನಿರ್ದೇಶಕ ಹ್ಯಾನ್ಸ್ ವಾನ್ ರೇಮ್‌ಡಾಂಕ್ ಅವರೊಂದಿಗೆ ಪ್ರಮುಖ ಮಾತುಕತೆ ನಡೆಸಿದರು.
ಎಟಿಎಂಪಿ ಘಟಕಕ್ಕೆ ಆಹ್ವಾನ: ಕರ್ನಾಟಕದಲ್ಲಿ ಬೆಳೆಯುತ್ತಿರುವ ಸೆಮಿಕಂಡಕ್ಟರ್ ವ್ಯವಸ್ಥೆಯನ್ನು ಸಚಿವ ಎಂ.ಬಿ. ಪಾಟಿಲ್ ಸಭೆಯಲ್ಲಿ ವಿವರವಾಗಿ ಪ್ರಸ್ತುತಪಡಿಸಿದರು. ರಾಜ್ಯದಲ್ಲಿ 'ಎಟಿಎಂಪಿ' (ಅಸೆಂಬ್ಲಿ, ಟೆಸ್ಟಿಂಗ್, ಮಾರ್ಕಿಂಗ್ ಮತ್ತು ಪ್ಯಾಕಿಂಗ್) ಘಟಕವನ್ನು ಸ್ಥಾಪಿಸುವಂತೆ ನೆಕ್ಸ್‌ಪೀರಿಯಾ ಸಂಸ್ಥೆಗೆ ಅಧಿಕೃತವಾಗಿ ಆಹ್ವಾನ ನೀಡಲಾಯಿತು.
ರಾಜ್ಯದ ಪೂರಕ ವಾತಾವರಣ: ನುರಿತ ಮಾನವ ಸಂಪನ್ಮೂಲ, ಬಲವಾದ ಎಲೆಕ್ಟ್ರಾನಿಕ್ಸ್ ತಂತ್ರಜ್ಞಾನ ಪರಿಸರ ಮತ್ತು ವಿಸ್ತರಿಸುತ್ತಿರುವ ತಾಂತ್ರಿಕ ಸಾಮರ್ಥ್ಯಗಳು ನೆಕ್ಸ್‌ಪೀರಿಯಾ ಸಂಸ್ಥೆಯ ಭಾರತದ ಬೆಳವಣಿಗೆಗೆ ಕರ್ನಾಟಕ ಅತ್ಯಂತ ಸೂಕ್ತವಾದ ವೇದಿಕೆಯಾಗಿದೆ ಎಂದು ನಿಯೋಗ ಮನವರಿಕೆ ಮಾಡಿಕೊಟ್ಟಿತು.
ವಿವಿಧ ವಲಯಗಳ ಮೇಲೆ ಕಣ್ಣು: ನೆದರ್‌ಲ್ಯಾಂಡ್ಸ್ ಪ್ರವಾಸದ ವೇಳೆ ಕೇವಲ ಸೆಮಿಕಂಡಕ್ಟರ್ ಮಾತ್ರವಲ್ಲದೆ ಆಹಾರ ಮತ್ತು ಪೋಷಕಾಂಶ, ಪಾನೀಯ, ಆರೋಗ್ಯ ತಂತ್ರಜ್ಞಾನ, ಜೀವ ವಿಜ್ಞಾನ, ಕೃಷಿ, ಎಫ್‌ಎಮ್‌ಸಿಜಿ (FMCG) ಹಾಗೂ ಮೂಲಸೌಕರ್ಯ ವಲಯದ ಪ್ರಮುಖ ಡಚ್ ಕಂಪನಿಗಳೊಂದಿಗೂ ಸರಣಿ ಸಭೆಗಳನ್ನು ಆಯೋಜಿಸಲಾಗಿದೆ.
ಆಟೋಮೊಬೈಲ್, ಕೈಗಾರಿಕಾ, ಕಂಪ್ಯೂಟಿಂಗ್ ಮತ್ತು ಮೊಬೈಲ್ ವಲಯಗಳಿಗೆ ಸೆಮಿಕಂಡಕ್ಟರ್ ಪೂರೈಸುವ ಜಾಗತಿಕ ಸಂಸ್ಥೆಯಾದ ನೆಕ್ಸ್‌ಪೀರಿಯಾ ಕರ್ನಾಟಕದಲ್ಲಿ ಹೂಡಿಕೆ ಮಾಡಿದರೆ, ರಾಜ್ಯದ ಎಲೆಕ್ಟ್ರಾನಿಕ್ಸ್ ಮತ್ತು ಎಟಿಎಂಪಿ ರಂಗಕ್ಕೆ ಹೊಸ ಶಕ್ತಿ ಸಿಗಲಿದೆ.




