ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ತಾಲೂಕಿನಲ್ಲಿ ಕನ್ನಡ ರಾಜ್ಯೋತ್ಸವವನ್ನು ವಿನೂತನವಾಗಿ ಹಾಗೂ ಸಡಗರದಿಂದ ಆಚರಿಸುವ ಮೂಲಕ ಲೇಖಕಿ ಡಿ. ಶಬ್ರಿನಾ ಮಹಮದ್ ಅಲಿ ದಂಪತಿಗಳು ಮಾದರಿಯಾಗಿದ್ದಾರೆ.
ತಮ್ಮ 'ಕನ್ನಡ ಕೌಸ್ತುಭ' ನಿಲಯದಲ್ಲಿ ಈ ಬಾರಿಯ ೭೧ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ 'ಕನ್ನಡ ಕಲರವ-೪' ಕಾರ್ಯಕ್ರಮವನ್ನು ಅತ್ಯಂತ ಅರ್ಥಪೂರ್ಣವಾಗಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೆಸರಾಂತ ಲೇಖಕಿ ಗೀತಾ ನಾಗರಾಜ್ ವಹಿಸಿದ್ದರು. ಪ್ರಸಿದ್ಧ ಸಾಹಿತಿ ಕೊರ್ಲಕುಂಟೆ ತಿಪ್ಪೇಸ್ವಾಮಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಲೇಖಕಿ ಡಿ. ಶಬ್ರಿನಾ ಮಹಮದ್ ಅಲಿ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿ ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು. ಮಹಮದ್ ಅಲಿ ಹಾಗೂ ಯತೀಶ ಎಂ. ಸಿದ್ದಾಪುರ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಶುಭ ಹಾರೈಸಿದರು.
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದ ಕವಿತೆ ವಾಚನ ಮತ್ತು ಗೀತ ಗಾಯನ ಸ್ಪರ್ಧೆಯಲ್ಲಿ ಹಾಲೇಶ್ ಕೆ., ವಿಜಯಲಕ್ಷ್ಮೀ ಜಿ., ಶಿವಲೀಲಾ, ಪಗಡಲಬಂಡೆ ನಾಗೇಂದ್ರಪ್ಪ, ಮನುಶ್ರೀ ಸಿದ್ದಾಪುರ, ಕೆಂಚರಾಜ್, ಯೋಗೇಶ್ವರಿ, ತಿಪ್ಪೇರುದ್ರಪ್ಪ, ಶಿವುಕುಮಾರ್, ಲಕ್ಷ್ಮೀದೇವಿ ಮತ್ತು ಗೀತಾ ಪ್ರಕಾಶ್ ಸೇರಿದಂತೆ ಅನೇಕ ಸಾಹಿತ್ಯಾಸಕ್ತರು ಹಾಗೂ ಕಲಾವಿದರು ಉತ್ಸಾಹದಿಂದ ಭಾಗವಹಿಸಿ ಕನ್ನಡದ ಕಂಪನ್ನು ಪಸರಿಸಿದರು.




