ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಬಂಧಿಸಿದ ಸ್ಟಿಂಗ್ ಆಪರೇಷನ್ ಪ್ರಕರಣದ ಗೌಪ್ಯ ಮಾಹಿತಿ ಸೋರಿಕೆ ಮಾಡಿದ್ದಾರೆ ಎಂದು ಆರೋಪಿಸಿ, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಾಲಹಳ್ಳಿಯ ಎಚ್ಎಂಟಿ ಮೈದಾನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, "ಪೋಲಿಸ್ ಆಯುಕ್ತರು ತಮ್ಮ ಹುದ್ದೆಗೆ ಶೋಭೆ ತಾರದಂತೆ, ಮುಖ್ಯ ಗುಮಾಸ್ತರಿಗಿಂತಲೂ ಕೀಳಾಗಿ ಹೇಳಿಕೆ ನೀಡುತ್ತಿದ್ದಾರೆ" ಎಂದು ಟೀಕಿಸಿದರು. ಕಾಂಗ್ರೆಸ್ ಸರ್ಕಾರವು ತಮ್ಮ ವಿರುದ್ಧ ರಾಜಕೀಯ ದ್ವೇಷದ ಕ್ರಮಗಳನ್ನು ಅನುಸರಿಸುತ್ತಿದ್ದು, ಅಧಿಕಾರಿಗಳಾಗಲಿ ಅಥವಾ ಸರ್ಕಾರವಾಗಲಿ ತಮ್ಮನ್ನು ಬೆದರಿಸಲು ಸಾಧ್ಯವಿಲ್ಲ ಎಂದು ಸವಾಲು ಹಾಕಿದರು.
ಪ್ರಕರಣದಲ್ಲಿ ಸಿದ್ದರಾಮಯ್ಯ ಅವರು ನ್ಯಾಯಾಲಯದಿಂದ ತಡೆಯಾಜ್ಞೆ ಪಡೆದಿರುವುದನ್ನು ಪ್ರಶ್ನಿಸಿದ ಕುಮಾರಸ್ವಾಮಿ, ಸಚಿವ ಪ್ರಿಯಾಂಕ್ ಖರ್ಗೆ ಅವರ "ಟ್ರೇಲರ್" ಹೇಳಿಕೆಗೆ, "ನಾನು ಸಿನಿಮಾಗಳನ್ನೇ ನಿರ್ಮಿಸಿದವನು, ಅವರ ಸಿನಿಮಾದ ಸಂಪೂರ್ಣ ವಿವರಗಳನ್ನು ಬಿಚ್ಚಿಡುತ್ತೇನೆ" ಎಂದು ತಿರುಗೇಟು ನೀಡಿದರು.




