ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದೆಹಲಿಯ ಕಾಶಿಯಾನ ಸಂಸ್ಥೆಯ ವತಿಯಿಂದ ದೆಹಲಿಯಲ್ಲಿ ನಡೆದ ನಶಾಮುಕ್ತ ಭಾರತ 2026 ಹಾಗೂ ವಿಕಸಿತ ಭಾರತ 2047 ರಲ್ಲಿ ಯುವಕರ ಪಾತ್ರ ವಿಶೇಷ ಕಾರ್ಯಕ್ರಮದಲ್ಲಿ ಕರ್ನಾಟಕದ ಏಕೈಕ ಕನ್ನಡಿಗ ದೊಡ್ಡಬಳ್ಳಾಪುರ ತಾಲೂಕಿನ ಯುವ ನಾಯಕ ಎಂ.ಹೇಮಂತ್ ರಾಜ್ ಸಾಮಾಜಿಕ ಕಳಕಳಿಯನ್ನು ಗುರ್ತಿಸಿ ಆಹ್ವಾನಿಸಿದ್ದು, ಅವರನ್ನುಕಾಶಿಯಾನ ಸಂಸ್ಥೆಯ ವತಿಯಿಂದ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಹಿಮಾಚಲ ಪ್ರದೇಶದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಕವಿಂದರ್ ಗುಪ್ತಾ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದು, ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಹಲವಾರು ಸಾಧಕರನ್ನು ಸನ್ಮಾನಿಸಿ ಗೌರವಿಸಿದರು. ಹೇಮಂತ್ ರಾಜ್ ಅವರ ಸಮಾಜ ಸೇವೆ ಹಾಗೂ ಯುವ ನಾಯಕತ್ವವನ್ನು ಪರಿಗಣಿಸಿ ಈ ಪ್ರಮಾಣಪತ್ರ ನೀಡಿ ಗೌರವಿಸಲಾಗಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕರೆ ಕೊಟ್ಟಂತೆ, ಭಾರತವನ್ನು ನಶೆ ಮುಕ್ತಗೊಳಿಸುವ ನಿಟ್ಟಿನಲ್ಲಿ ಕಾಶಿಯಾನ ಸಂಸ್ಥೆಯ ವತಿಯಿಂದ ಈಗಾಗಲೇ ದೇಶ ಹಾಗೂ ವಿದೇಶಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ನಡೆದಿದ್ದು, ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲೂ ಕಾರ್ಯಕ್ರಮ ನಡೆಸುತ್ತೇವೆ ಎಂದು ಸಂಸ್ಥೆಯ ಮುಖ್ಯಸ್ಥ ಅಮಿತ್ ಸಿಂಗ್ ಘೋಷಣೆ ಮಾಡಿದ್ದಾರೆ.
ಕಾರ್ಯಕ್ರಮದಲ್ಲಿ ಬಿಜೆಪಿಯ ಮಾಜಿ ರಾಷ್ಟ್ರೀಯ ಉಪಾಧ್ಯಕ್ಷ ಶ್ಯಾಮ್ ಜಾಜು, ಸಂಸದ್ ಟಿವಿ ನಿರೂಪಕರಾದ ಪ್ರೀತಿ ಸಿಂಗ್, ಸ್ವದೇಶ್ ಸಿಂಗ್, ದೆಹಲಿ ಮೆಟ್ರೋ ನಿರ್ದೇಶಕರಾದ ಡಾ. ಪ್ರಮೀತ್ ಕೆಆರ್ ಗರ್ಗ್ ಸೇರಿದಂತೆ ಅನೇಕ ಪ್ರಮುಖರು ಉಪಸ್ಥಿತರಿದ್ದರು.




