ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಪ್ರತಿಭೆಗೆ ಜಗತ್ತಿನ ಎಲ್ಲಡೆ ಮನ್ನಣೆ ಇದೆ. ಜ್ಞಾನವೇ ಪ್ರಬಲಶಕ್ತಿ ಎಂಬುದನ್ನು ವಿದ್ಯಾರ್ಥಿಗಳು ಅರ್ಥ ಮಾಡಿಕೊಳ್ಳಬೇಕು ಎಂದು ಆಮ್ಟೇಕ್ ಕಂಪನಿಯ ಹಿರಿಯ ವ್ಯವಸ್ಥಾಪಕಿ ಪಂಕಜ ರಾವ್‌ತಿಳಿಸಿದರು.
ನಗರದ ಶ್ರೀ ಕೊಂಗಾಡಿಯಪ್ಪ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿ ಪ್ರತಿಭೆಯುಳ್ಳ ವಿದ್ಯಾರ್ಥಿಗಳಿಂದ ಸಮಾಜ ಮತ್ತು ರಾಷ್ಟ್ರದ ಅಭಿವೃದ್ಧಿಗೆ ಸಹಕಾರಿ ಆಗಲಿದೆ. ವಿದ್ಯಾರ್ಥಿಗಳು ಸದಾ ಉತ್ಸಾಹಶೀಲರಾಗಿ ಇರಬೇಕು. ಪ್ರತಿಯೊಂದು ಕ್ಷಣವನ್ನು ಸಂತಸದ ಕಲಿಕೆಗಾಗಿ ಮೀಸಲಿಡಬೇಕು ಎಂದರು.
ಆಮ್ಟೇಕ್ ಕಂಪನಿಯ ಹಿರಿಯ ವ್ಯವಸ್ಥಾಪಕ ವೆಂಕಟೇಶ್ ಅನ್ಬರಸು ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಕನಸು ಕಾಣಬೇಕು, ಅದನ್ನು ಸಾಧಿಸಲು ನಿರಂತರವಾಗಿ ಶ್ರಮಿಸಬೇಕು. ಜ್ಞಾನದ ಪ್ರತಿಫಲವನ್ನು ಸಮಾಜಕ್ಕೆ ನೀಡಬೇಕು. ಪೋಷಕರು, ಶಿಕ್ಷಕರು ಹಾಗೂ ಸಮಾಜ ನೀಡುವ ಪ್ರೋತ್ಸಾಹ ವಿದ್ಯಾರ್ಥಿಗಳ ಪ್ರತಿಭೆಯನ್ನು ಹೊರತರಲು ಸಹಾಯಕ ಎಂದರು.
ಇದೇ ಸಂದರ್ಭದಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅಗ್ರ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಅಭಿನಂದನೆ ನಡೆಯಿತು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಈ ಸಮಾರಂಭದಲ್ಲಿ ಶ್ರೀ ಕೊಂಗಾಡಿಯಪ್ಪ ವಿದ್ಯಾಸಂಸ್ಥೆಯ ಅಧ್ಯಕ್ಷ ಎ.ರಾಮಶೆಟ್ಟಿ, ಉಪಾಧ್ಯಕ್ಷ ಪಿ.ವಿ.ಶ್ರೀನಿವಾಸಮೂರ್ತಿ, ಗೌರವ ಕಾರ್ಯದರ್ಶಿ ಎಸ್.ಪ್ರಕಾಶ್, ಖಜಾಂಚಿ ಜಗೀಶ್ ಬಾಬು, ನಿರ್ದೇಶಕರುಗಳಾದ ಜೆ.ಬಿ.ಮಹೇಶ್, ರಮೇಶ್ ಕುಮಾರ್, ಲಲಿತಮ್ಮ, ಪಾರ್ವತಮ್ಮ , ವಾಣಿಜ್ಯೋದ್ಯಮಿಗಳಾದ ಲಲಿತಕುಮಾರ್ ಜೈನ್, ಸುಜಿತ್ ಕುಮಾರ್ ಜೈನ್, ವಿಷನ್ ಟ್ರಸ್ಟ್‌ಅಧ್ಯಕ್ಷ ಸುನೀಲ್ ಕುಮಾರ್, ಪ್ರಾಂಶುಪಾಲ ಎನ್.ಶ್ರೀನಿವಾಸ್ ಮುಂತಾದವರು ಭಾಗವಹಿಸಿದ್ದರು.




