ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ವಿವಿಧ ನೇಮಕಾತಿಗಳಲ್ಲಿ ನಡೆದಿದೆ ಎನ್ನಲಾದ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದ್ದು, ಇದರಿಂದ ಸಾಹುಕಾರ್ ಅವರಿಗೆ ಬಂಧನದ ಭೀತಿ ಎದುರಾಗಿದೆ.
‘ಇದು ವ್ಯವಸ್ಥಿತ ವಂಚನೆ, ಕೆಪಿಎಸ್‌ಸಿ ಮೇಲಿನ ವಿಶ್ವಾಸಕ್ಕೇ ಕಂಸ’
ವಿಚಾರಣೆ ವೇಳೆ ತೀವ್ರ ಕಳವಳ ವ್ಯಕ್ತಪಡಿಸಿದ ನ್ಯಾಯಪೀಠ, "ಇತ್ತೀಚಿನ ಬೆಳವಣಿಗೆಗಳು ಕೆಪಿಎಸ್‌ಸಿ ಸಂಸ್ಥೆಯ ಮೇಲಿದ್ದ ವಿಶ್ವಾಸವನ್ನೇ ಸಾರ್ವಜನಿಕರು ಕಳೆದುಕೊಳ್ಳುವಂತೆ ಮಾಡಿವೆ. ಹಗಲು-ರಾತ್ರಿ ಕಷ್ಟಪಟ್ಟು ಓದುವ ಅಭ್ಯರ್ಥಿಗಳ ಸ್ಥಿತಿ ಏನಾಗಬೇಕು?" ಎಂದು ಪ್ರಶ್ನಿಸಿತು. ಅಲ್ಲದೆ, "ಅರ್ಜಿದಾರರ ಕುಟುಂಬಸ್ಥರೇ ಈ ಅಕ್ರಮದಲ್ಲಿ ಭಾಗಿಯಾಗಿರುವ ಗಂಭೀರ ಆರೋಪವಿದೆ. ಇದು ಸ್ಪಷ್ಟವಾಗಿ ವ್ಯವಸ್ಥಿತವಾಗಿ ನಡೆದ ವಂಚನೆ" ಎಂದು ಅಭಿಪ್ರಾಯಪಟ್ಟು ಜಾಮೀನು ನೀಡಲು ನಿರಾಕರಿಸಿತು.
ಆರೋಗ್ಯದ ನೆಪ, ರಾಜಕೀಯ ಹಸ್ತಕ್ಷೇಪದ ಆರೋಪ:
ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, "ಅರ್ಜಿದಾರರ ವಿರುದ್ಧ ಮಗಳಿಗೆ ಅಕ್ರಮವಾಗಿ ಉದ್ಯೋಗ ಕೊಡಿಸಿದ ಆರೋಪ ಮಾತ್ರ ಇದೆ. ಮೂಲ ಪ್ರಶ್ನೆಪತ್ರಿಕೆ ಹಾಗೂ ಒಎಂಆರ್ ಶೀಟ್‌ಗಳು ಪರೀಕ್ಷಾ ನಿಯಂತ್ರಕರ ಬಳಿಯೇ ಇರುತ್ತವೆ. ಈಗಾಗಲೇ ಕಿಂಗ್‌ಪಿನ್ ಹಾಗೂ ಪರೀಕ್ಷಾ ನಿಯಂತ್ರಕರನ್ನು ಬಂಧಿಸಲಾಗಿದೆ. ಶಿವಶಂಕರಪ್ಪ ಅವರು ಥೈರಾಯ್ಡ್ ಹಾಗೂ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ವಯಸ್ಸು ಮತ್ತು ಆರೋಗ್ಯದ ಆಧಾರದ ಮೇಲೆ ಜಾಮೀನು ನೀಡಬೇಕು. ಅಲ್ಲದೆ, ಪ್ರಕರಣದಲ್ಲಿ ರಾಜಕೀಯ ಹಸ್ತಕ್ಷೇಪವಿದೆ" ಎಂದು ಕೋರಿದರು.
ಖಾಸಗಿ ಫೋನ್ ಸಂಭಾಷಣೆ ಸಾಕ್ಷಿ: ಸರ್ಕಾರಿ ವಕೀಲರ ಆಕ್ಷೇಪ:
ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸರ್ಕಾರಿ ವಕೀಲರು, "ಅರ್ಜಿದಾರರು ತಮ್ಮ ಮಗಳಿಗೆ ಮಾತ್ರವಲ್ಲದೆ, ಇತರೆ ಹಲವು ಅಭ್ಯರ್ಥಿಗಳ ಅಕ್ರಮ ನೇಮಕಾತಿಯಲ್ಲೂ ಭಾಗಿಯಾಗಿರುವ ಶಂಕೆಯಿದೆ. ಪರೀಕ್ಷೆಯ ದಿನವೇ ಅರ್ಜಿದಾರರು ಹಾಗೂ ಅವರ ಕುಟುಂಬದವರು ಖಾಸಗಿ ಫೋನ್ ಮೂಲಕ ಅಕ್ರಮದಲ್ಲಿ ಭಾಗಿಯಾದವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು ಎಂಬುದಕ್ಕೆ ಸೂಕ್ತ ಸಾಕ್ಷ್ಯಾಧಾರಗಳಿವೆ" ಎಂದು ಕೋರ್ಟ್‌ಗೆ ತಿಳಿಸಿದರು.
ಪ್ರಕರಣದ ಹಿನ್ನೆಲೆ: ಕೆಪಿಎಸ್‌ಸಿ ನಡೆಸಿದ 400 ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ಮಧ್ಯವರ್ತಿಗಳ ಮೂಲಕ ₹70 ರಿಂದ ₹80 ಲಕ್ಷ ಹಣ ಪಡೆದು ಒಎಂಆರ್ ಶೀಟ್ ತಿದ್ದುಪಡಿ, ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಅಧಿಕಾರಿಗಳ ಸಂಬಂಧಿಕರಿಗೆ ಹೆಚ್ಚಿನ ಅಂಕ ನೀಡಿದ ಆರೋಪ ಕೇಳಿಬಂದಿತ್ತು. ಈ ಸಂಬಂಧ ಸಾಹುಕಾರ್ ವಿರುದ್ಧ 'ಭಾರತೀಯ ನ್ಯಾಯ ಸಂಹಿತೆ'ಯ ಸೆಕ್ಷನ್ 318 (ವಂಚನೆ) ಹಾಗೂ 'ಕರ್ನಾಟಕ ಸಾರ್ವಜನಿಕ ಪರೀಕ್ಷೆಗಳ ಕಾಯ್ದೆ-2023'ರ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ವಿಚಾರಣಾ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ವಜಾಗೊಂಡಿದ್ದರಿಂದ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.




