ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್‌ಸಿ) ಎಂದರೆ ಒಂದು ಕಾಲದಲ್ಲಿ ಉದ್ಯೋಗಾಕಾಂಕ್ಷಿಗಳ ಪಾಲಿನ ಆಶಾಕಿರಣವಾಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಆಯೋಗವು ತನ್ನ ಘನತೆ ಕಳೆದುಕೊಂಡು, ಲಕ್ಷಾಂತರ ನಿರುದ್ಯೋಗಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುವ 'ಪಾಪಾಸುಕಳ್ಳಿ'ಯಾಗಿ ಬದಲಾಗಿದೆ ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಟೀಕಾಪ್ರಹಾರ ಮಾಡಿದ್ದಾರೆ.
ಭ್ರಷ್ಟಾಚಾರದ ಕೂಪವಾದ ಆಯೋಗ?
ಸರ್ಕಾರಿ ಯಂತ್ರ ಸುಗಮವಾಗಿ ನಡೆಸಲು ದಕ್ಷ ಅಧಿಕಾರಿಗಳನ್ನು ಆಯ್ಕೆ ಮಾಡಬೇಕಾದ ಸಂವಿಧಾನಿಕ ಸಂಸ್ಥೆ ಇಂದು ಬ್ರಹ್ಮಾಂಡ ಭ್ರಷ್ಟಾಚಾರ, ಅಕ್ರಮ ಮತ್ತು ದೋಷಪೂರಿತ ಆಯ್ಕೆ ಪ್ರಕ್ರಿಯೆಗಳಿಂದ ಕುಖ್ಯಾತಿ ಪಡೆದಿದೆ. ನ್ಯಾಯಾಲಯಗಳು ಹಲವು ಬಾರಿ ಚಾಟೀ ಬೀಸಿದ್ದರೂ, ತಪ್ಪಿತಸ್ಥರ ಮುಖವಾಡಗಳು ಕಳಚಿ ಬಿದ್ದಿದ್ದರೂ ವ್ಯವಸ್ಥೆಗೆ ಮಾತ್ರ ಇನ್ನೂ ಕಾಯಕಲ್ಪ ಸಿಕ್ಕಿಲ್ಲ.
ಘೋಷಣೆಯಾದ 56,432 ಹುದ್ದೆಗಳು ಎಲ್ಲಿವೆ?-
ನಿರುದ್ಯೋಗಿಗಳ ನಿರಂತರ ಹೋರಾಟಕ್ಕೆ ಮಣಿದ ಸರ್ಕಾರವು ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 56,432 ಹುದ್ದೆಗಳ ಭರ್ತಿಗೆ ಚಾಲನೆ ನೀಡುವುದಾಗಿ ಘೋಷಿಸಿತ್ತು. ಆದರೆ, ಘೋಷಣೆಯಾಗಿ ದಿನಗಳೇ ಕಳೆದರೂ ಈ ಸಂಬಂಧ ಇದುವರೆಗೆ ಯಾವುದೇ ಅಧಿಕೃತ ಅಧಿಸೂಚನೆ ಹೊರಬಿದ್ದಿಲ್ಲ. ಇದು ಆಕಾಂಕ್ಷಿಗಳಲ್ಲಿ ತೀವ್ರ ನಿರಾಶೆ ಮೂಡಿಸಿದೆ.
ಉದ್ಯೋಗಾಕಾಂಕ್ಷಿಗಳ ಪ್ರಮುಖ ಬೇಡಿಕೆಗಳು:
ಪಾರದರ್ಶಕತೆ: ನೇಮಕಾತಿ ಪ್ರಕ್ರಿಯೆಯಲ್ಲಿ ತಂತ್ರಜ್ಞಾನದ ಬಳಕೆ ಮಾಡಿ ದೋಷಮುಕ್ತ ಫಲಿತಾಂಶ ನೀಡಬೇಕು.
ಅಧಿಸೂಚನೆ ವಿಳಂಬ ಬೇಡ: ಘೋಷಿತ 56,432 ಹುದ್ದೆಗಳಿಗೆ ತಕ್ಷಣವೇ ಅಧಿಸೂಚನೆ ಹೊರಡಿಸಬೇಕು.
ಕಟ್ಟುನಿಟ್ಟಿನ ನಿಯಮ: ಭ್ರಷ್ಟಾಚಾರಕ್ಕೆ ಆಸ್ಪದವಿಲ್ಲದಂತೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಬೇಕು.
"ಆಯೋಗವು ಕೇವಲ ಸುಧಾರಣೆಗಳ ಮಾತು ಆಡುವುದನ್ನು ಬಿಟ್ಟು, ಕಾರ್ಯರೂಪದಲ್ಲಿ ಪಾರದರ್ಶಕತೆ ತೋರಿಸಲಿ. ಇಲ್ಲವಾದರೆ ಆಯೋಗದ ಅಸ್ತಿತ್ವವನ್ನೇ ಪ್ರಶ್ನಿಸುವ ಕಾಲ ದೂರವಿಲ್ಲ." - ಉದ್ಯೋಗಾಕಾಂಕ್ಷಿಗಳ ಆಕ್ರೋಶ.
ಸರ್ಕಾರದ ಬದ್ಧತೆಗೆ ಪರೀಕ್ಷೆ-
ಸರ್ಕಾರವು ಇನ್ನು ಮುಂದೆ 'ಮೀನಾಮೇಷ' ಎಣಿಸುವುದನ್ನು ಬಿಟ್ಟು, ನಿಗದಿತ ಕಾಲಮಿತಿಯೊಳಗೆ ನ್ಯಾಯೋಚಿತವಾಗಿ ನೇಮಕಾತಿ ಪ್ರಕ್ರಿಯೆ ಮುಗಿಸಬೇಕಿದೆ. ಈಗಾಗಲೇ ಹತಾಶೆಯ ಅಂಚಿನಲ್ಲಿರುವ ಲಕ್ಷಾಂತರ ಯುವಜನರ ಆಕ್ರೋಶ ಸ್ಪೋಟಗೊಳ್ಳುವ ಮೊದಲೇ ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ.


