ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಕೆಎಸ್ಆರ್‌ಟಿಸಿ ಅಧಿಕಾರಿಗಳು ಅಗತ್ಯವಿರುವ ಮಾರ್ಗಗಳನ್ನು ಬಿಟ್ಟು, ದಶಕಗಳಿಂದ ಖಾಸಗಿ ಬಸ್‌ಗಳು ಸಂಚರಿಸುತ್ತಿರುವ ಮಾರ್ಗಗಳಲ್ಲೇ ನಿಯಮಬಾಹಿರವಾಗಿ ಸರ್ಕಾರಿ ಬಸ್‌ಗಳನ್ನು ಓಡಿಸುತ್ತಿದ್ದಾರೆ ಎಂದು ತಾಲ್ಲೂಕು ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಜಬೀವುಲ್ಲಾ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳ ಈ ನಡೆ ಸರ್ಕಾರಿ ಹಾಗೂ ಖಾಸಗಿ ಬಸ್ ಯಜಮಾನರಿಬ್ಬರಿಗೂ ನಷ್ಟ ಉಂಟುಮಾಡುತ್ತಿದೆ ಎಂದು ದೂರಿದರು.
ಪೈಪೋಟಿ ಮತ್ತು ನಷ್ಟ: ಹೊಸದುರ್ಗ-ಹಿರಿಯೂರು ನಡುವೆ ಈಗಾಗಲೇ 15 ಖಾಸಗಿ ಬಸ್‌ಗಳು 35 ರಿಂದ 40 ಟ್ರಿಪ್‌ಗಳನ್ನು ನಡೆಸುತ್ತಿದ್ದು, ಪ್ರಯಾಣಿಕರ ಕೊರತೆ ಇದೆ. ಹೀಗಿದ್ದರೂ ಕೆಎಸ್ಆರ್‌ಟಿಸಿ ಅಧಿಕಾರಿಗಳು 14 ಸಿಂಗಲ್ ಟ್ರಿಪ್ ಬಸ್‌ಗಳನ್ನು ಇಳಿಸಿ ಅನಗತ್ಯ ಪೈಪೋಟಿ ಸೃಷ್ಟಿಸುತ್ತಿದ್ದಾರೆ.
ನಿಯಮಗಳ ಉಲ್ಲಂಘನೆ: ಮಾರ್ಗಾವಧಿ ಮತ್ತು ಸಮಯ ನಿಗದಿಗೆ ಜಿಲ್ಲಾಧಿಕಾರಿ, ಸಾರಿಗೆ ಅಧಿಕಾರಿ ಹಾಗೂ ಎಸ್‌ಪಿ ಅವರ ಅನುಮತಿ ಪಡೆಯುವುದು ಕಡ್ಡಾಯ. ಆದರೆ, ಜಾತ್ರೆ ಹಾಗೂ ಹಬ್ಬಗಳ ನೆಪದಲ್ಲಿ ಯಾವುದೇ ಪರವಾನಗಿ ಇಲ್ಲದೆ ಬಸ್‌ಗಳನ್ನು ಓಡಿಸಲಾಗುತ್ತಿದೆ.
ಸಮಜಾಯಿಷಿಗೆ ಕಿಡಿ: ಈ ಬಗ್ಗೆ ಪ್ರಶ್ನಿಸಿದರೆ 'ಶಾಸಕರು ಹೇಳಿದ್ದಾರೆ' ಎಂದು ಅಧಿಕಾರಿಗಳು ಸಮರ್ಥಿಸಿಕೊಳ್ಳುತ್ತಿದ್ದಾರೆ. ಆದರೆ ಶಾಸಕರು ನಿಧನರಾಗಿ 4 ತಿಂಗಳು ಕಳೆಯುತ್ತ ಬಂದರೂ ಅವರ ಹೆಸರು ಹೇಳುತ್ತಿರುವುದು ಸರಿಯಲ್ಲ ಎಂದು ಜಬೀವುಲ್ಲಾ ಕಿಡಿಕಾರಿದರು.
ಬಸ್ ಅಗತ್ಯವಿರುವ ಮಾರ್ಗಗಳು: ಯಲ್ಲದಕೆರೆ-ಜೆಜಿ ಹಳ್ಳಿ, ಗನ್ನಾಯಕನಹಳ್ಳಿ-ಐಮಂಗಲ, ಪಟ್ರೆಹಳ್ಳಿ-ಹುಳಿಯಾರು ಹಾಗೂ ಆದಿವಾಲ-ಶಿರಾ ಮಾರ್ಗಗಳಲ್ಲಿ ಬಸ್‌ಗಳ ಕೊರತೆಯಿದ್ದು, ಸಾರ್ವಜನಿಕರ ಒತ್ತಡವಿದೆ. ಅಧಿಕಾರಿಗಳು ಅಲ್ಲಿಗೆ ಬಸ್ ಬಿಡದೆ ಖಾಸಗಿ ಮಾಲೀಕರ ಮೇಲೆ ಸವಾರಿ ಮಾಡುತ್ತಿದ್ದಾರೆ.
ತಮಿಳುನಾಡು ಮಾದರಿಗೆ ಆಗ್ರಹ: ತಮಿಳುನಾಡು ಮಾದರಿಯಲ್ಲಿ ಶೇ. 60:40 ಅನುಪಾತದ ನೀತಿಯನ್ನು ಜಾರಿಗೆ ತಂದು, ಶೇಕಡಾ 40 ರಷ್ಟು ಅವಕಾಶವನ್ನು ಖಾಸಗಿ ಬಸ್ ಮಾಲೀಕರಿಗೆ ನೀಡಬೇಕೆಂದು ಒತ್ತಾಯಿಸಿದರು.




