ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಆಚರಿಸುತ್ತಿರುವ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 157ನೇ ಜಯಂತಿಯ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿ ಹಾಗೂ ಯುವಜನರಲ್ಲಿ ಮಹಾತ್ಮ ಗಾಂಧೀಜಿಯವರ ಬದುಕು, ಸ್ವಾತಂತ್ರ್ಯ ಚಳುವಳಿ, ಸರಳತೆ, ಅಹಿಂಸಾ ಮಾರ್ಗ, ಸಹಬಾಳ್ವೆ, ಅಸ್ಪೃಶ್ಯತೆ ನಿವಾರಣೆಗಾಗಿ ನಡೆಸಿದ ಪ್ರಯೋಗಗಳು ಇತ್ಯಾದಿ ವಿಚಾರಗಳ ಬಗ್ಗೆ ಪ್ರೌಢಶಾಲೆ, ಪದವಿ ಪೂರ್ವ ಹಾಗೂ ಪದವಿ-ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ “ಬಾಪೂಜಿ ಪ್ರಬಂಧ ಸ್ಪರ್ಧೆ” ಯನ್ನು ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಹಮ್ಮಿಕೊಳ್ಳಲಾಗಿದೆ.
ವಿವಿಧ ವಿಷಯಗಳ ಕುರಿತು ಪ್ರೌಢಶಾಲೆ, ಪದವಿ ಪೂರ್ವ ಶಿಕ್ಷಣ ಹಾಗೂ ಪದವಿ-ಸ್ನಾತಕೋತ್ತರ ಪದವಿಗಳ ಹಂತದ ವಿದ್ಯಾರ್ಥಿಗಳಿಗೆ ಒಟ್ಟು 3 ವಿಭಾಗಗಳಲ್ಲಿ ಬಾಪೂಜಿ ಪ್ರಬಂಧ ಸ್ಪರ್ಧೆಯನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಆಯೋಜಿಸಲಾಗಿದೆ. ವಿಜೇತರಿಗೆ ರಾಜ್ಯಮಟ್ಟದಲ್ಲಿ ಪ್ರಥಮ ಬಹುಮಾನ ನಗದು ಪ್ರಶಸ್ತಿ ರೂ.31 ಸಾವಿರ, ದ್ವಿತೀಯ ಬಹುಮಾನ ನಗದು ಪ್ರಶಸ್ತಿ ರೂ.21 ಸಾವಿರ ಮತ್ತು ತೃತೀಯ ಬಹುಮಾನ ನಗದು ಪ್ರಶಸ್ತಿ ರೂ.11 ಸಾವಿರ ಹಾಗೂ ಜಿಲ್ಲಾಮಟ್ಟದಲ್ಲಿ ಪ್ರಥಮ ಬಹುಮಾನ ನಗದು ಪ್ರಶಸ್ತಿ ರೂ.3 ಸಾವಿರ, ದ್ವಿತೀಯ ಬಹುಮಾನ ನಗದು ಪ್ರಶಸ್ತಿ ರೂ. 2 ಸಾವಿರ ಮತ್ತು ತೃತೀಯ ಬಹುಮಾನ ನಗದು ಪ್ರಶಸ್ತಿ ರೂ.1 ಸಾವಿರ ನೀಡಲಾಗುವುದು.
1. ಪ್ರೌಢ ಶಾಲಾ ವಿಭಾಗ :
1. ಗಾಂಧೀಜಿ ಕಲಿಸಿದ ಸರಳ ಜೀವನ – ಮಹಾನ್ ಸಂದೇಶ
2. ನಾನು ಗಾಂಧೀಜಿಯಂತೆ ಸತ್ಯ ಹೇಳುವೆನು
3. ಗಾಂಧೀಜಿಯ ಜೀವನ ಕಥೆಯಿಂದ ಕಲಿಯುವ ಐದು ಪಾಠಗಳು
ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ಈ ಮೂರು ವಿಷಯಗಳಲ್ಲಿ ಯಾವುದಾದರೂ ಒಂದು ವಿಷಯ ಕುರಿತು 700 ರಿಂದ 800 ಪದಗಳು ಮೀರದಂತೆ ಪ್ರಬಂಧ ಬರೆಯಬೇಕು.
2. ಪದವಿ ಪೂರ್ವ ಶಿಕ್ಷಣ ವಿಭಾಗ :
1. ಗಾಂಧೀಜಿಯ ದೃಷ್ಟಿಯಲ್ಲಿ ನಿಜವಾದ ಸ್ವಾತಂತ್ರ್ಯ
2. ಸತ್ಯ ಮತ್ತು ಅಹಿಂಸೆ – ನನ್ನ ಜೀವನದ ದಾರಿ
3. ಅಸಮಾನತೆ ನಿವಾರಣೆಗೆ ಗಾಂಧೀಜಿಯವರ ಕೊಡುಗೆ
ಪದವಿ ಪೂರ್ವ ಶಿಕ್ಷಣ ವಿಭಾಗದ ವಿದ್ಯಾರ್ಥಿಗಳು ಈ ಮೂರು ವಿಷಯಗಳಲ್ಲಿ ಯಾವುದಾದರೂ ಒಂದು ವಿಷಯ ಕುರಿತು 900 ರಿಂದ 1000 ಪದಗಳು ಮೀರದಂತೆ ಪ್ರಬಂಧ ಬರೆಯಬೇಕು.
3. ಪದವಿ ಹಾಗೂ ಸ್ನಾತಕೋತ್ತರ ಪದವಿ ವಿಭಾಗ :
1. ನೈತಿಕ ರಾಜಕಾರಣ – ಗಾಂಧೀಜಿಯ ತತ್ವಗಳ ಇಂದಿನ ಪ್ರಾಸಂಗಿಕತೆ
2. ಸತ್ಯಾಗ್ರಹ – ಇಂದಿನ ಕಾಲದ ಅವಶ್ಯಕತೆ
3. ಗಾಂಧೀಜಿಯ ಶಿಕ್ಷಣ ತತ್ವ – ನೈತಿಕತೆ, ಕೌಶಲ್ಯ, ಸೇವಾಭಾವ
ಪದವಿ ಹಾಗೂ ಸ್ನಾತಕೋತ್ತರ ಪದವಿ ವಿಭಾಗದ ವಿದ್ಯಾರ್ಥಿಗಳು ಈ ಮೂರು ವಿಷಯಗಳಲ್ಲಿ ಯಾವುದಾದರೂ ಒಂದು ವಿಷಯ ಕುರಿತು 1400 ರಿಂದ 1500 ಪದಗಳು ಮೀರದಂತೆ ಪ್ರಬಂಧ ಬರೆಯಬೇಕು.
ದಿನಾಂಕ: 03-09-2026 ರೊಳಗಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಜಿಲ್ಲಾಡಳಿತದ ಸಹಯೋಗದೊಂದಿಗೆ ಸ್ಪರ್ಧೆ ಏರ್ಪಡಿಸಿ ದಿನಾಂಕ: 08-09-2026 ರೊಳಗಾಗಿ ಮೌಲ್ಯಮಾಪನ ಮಾಡಿ, ವಿಜೇತರ ವಿವರಗಳು ಹಾಗೂ ಪ್ರಬಂಧಗಳನ್ನು ಕೇಂದ್ರ ಕಚೇರಿಗೆ ಕಳುಹಿಸಬೇಕು. ಜಿಲ್ಲಾಮಟ್ಟದ ಪ್ರಥಮ ಬಹುಮಾನ ವಿಜೇತ ಪ್ರಬಂಧಗಳನ್ನು ರಾಜ್ಯಮಟ್ಟದಲ್ಲಿ ಮರುಮೌಲ್ಯಮಾಪನ ಮಾಡಿ, ರಾಜ್ಯಮಟ್ಟದ ಫಲಿತಾಂಶ ಘೋಷಿಸಲಾಗುವುದು.
ಪ್ರತಿ ವಿಭಾಗದಲ್ಲಿನ ಅತ್ಯುತ್ತಮವಾದ ಮೂರು (3) ಪ್ರಬಂಧಗಳಿಗೆ ಅಕ್ಟೋಬರ್ 02 ರಂದು ಜಿಲ್ಲಾ ಮಟ್ಟದ ಗಾಂಧೀ ಜಯಂತಿ ದಿನಾಚರಣೆ ಸಂದರ್ಭದಲ್ಲಿ ಬಹುಮಾನ ನೀಡಿ ಪ್ರಬಂಧ ರಚನೆಕಾರರಿಗೆ ಗೌರವಿಸಲಾಗುವುದು.
ನಿಬಂಧನೆಗಳು : ಪ್ರಬಂಧವು ಸಂಪೂರ್ಣವಾಗಿ ಸ್ವ-ರಚಿತವಾಗಿರಬೇಕು. ಸ್ಪರ್ಧೆ ಏರ್ಪಡಿಸುವ ಸ್ಥಳದಲ್ಲಿಯೇ ಶುದ್ಧ ಕೈಬರಹದಲ್ಲಿ ಪ್ರಬಂಧ ಬರೆಯಬೇಕು. ಆಕರವಾಗಿ ಬಳಸಿದ ಪರಾಮರ್ಶನ / ಆಧಾರ ಗ್ರಂಥಗಳ ವಿವರಗಳನ್ನು ಪ್ರಬಂಧದ ಕೊನೆಯಲ್ಲಿ ನಮೂದಿಸಬೇಕು. ಆದರೆ, ಸ್ಪರ್ಧೆ ಏರ್ಪಡಿಸುವ ಸ್ಥಳದಲ್ಲಿ ಪರಾಮರ್ಶನ / ಆಧಾರ ಗ್ರಂಥಗಳು / ಮೊಬೈಲ್ ಗಳ ಬಳಕೆಗೆ ಅವಕಾಶವಿರುವುದಿಲ್ಲ. ಪ್ರಬಂಧಕಾರರ ಹೆಸರು, ವಿಳಾಸ ನಮೂದಿಸಿರಬೇಕು. ಪ್ರಬಂಧವು ಈ ಮೊದಲು ಎಲ್ಲಿಯೂ ಪ್ರಕಟವಾಗಿರಬಾರದು. ಆಯ್ದ ಪ್ರಬಂಧಗಳ ಪ್ರಕಟಣೆಯ ಹಕ್ಕನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಾಯ್ದಿರಿಸಿಕೊಂಡಿರುತ್ತದೆ ಎಂದು ಇಲಾಖೆಯ ಆಯುಕ್ತರಾದ ಎಂ.ಎನ್. ಅನುಚೇತ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




