ಚಂದ್ರವಳ್ಳಿ ನ್ಯೂಸ್, ದಾವಣಗೆರೆ/ಬೆಂಗಳೂರು:
ಶಾಸಕ ಬಿ.ಪಿ. ಹರೀಶ್ ವಿರುದ್ಧ ಸಾರ್ವಜನಿಕವಾಗಿ ಅವಾಚ್ಯ ಶಬ್ದಗಳನ್ನು ಬಳಸಿ ನಿಂದಿಸಿರುವ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ವರ್ತನೆಗೆ ಬಿಜೆಪಿ ಮುಖಂಡ ಸಿ.ಟಿ. ರವಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸಚಿವರು ತಕ್ಷಣವೇ ಕ್ಷಮೆಯಾಚಿಸಬೇಕೆಂದು ಪಟ್ಟು ಹಿಡಿದಿದ್ದಾರೆ.
ಭದ್ರಾ ನೀರಿಗಾಗಿ ಮನವಿ ಸಲ್ಲಿಸಲು ಬಂದಿದ್ದ ರೈತರ ಎದುರು, ಹರಿಹರ ಶಾಸಕ ಬಿ.ಪಿ. ಹರೀಶ್ ಅವರ ಹೆಸರನ್ನು ಉಲ್ಲೇಖಿಸಿದ್ದಕ್ಕೆ ಸಚಿವ ಮಲ್ಲಿಕಾರ್ಜುನ್ ಅವರು ಅಸಂಸದೀಯ ಮತ್ತು ಕೆಟ್ಟ ಪದಗಳನ್ನು ಬಳಸಿ ನಿಂದಿಸಿದ್ದಾರೆ ಎನ್ನಲಾದ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ.
ಸಿ.ಟಿ. ರವಿ ಹೇಳಿದ್ದೇನು?:
"ರಾಜ್ಯದ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರ ಬಾಯಿಂದ ಇಂತಹ 'ಬೀಪ್ ಬೀಪ್' ಪದಗಳನ್ನು ಕೇಳುವ ದೌರ್ಭಾಗ್ಯ ಕನ್ನಡಿಗರಿಗೆ ಬಂದಿದೆ. ರೈತರು ಹಾಗೂ ಜನಪ್ರತಿನಿಧಿಯಾದ ಶಾಸಕ ಬಿ.ಪಿ. ಹರೀಶ್ ಅವರ ಸಮಸ್ಯೆ ಕೇಳಿ ಪರಿಹಾರ ನೀಡಬೇಕಿದ್ದ ಸಚಿವರು, ಈ ರೀತಿ ನಿಂದಿಸಿರುವುದು ಅಕ್ಷಮ್ಯ ಅಪರಾಧ," ಎಂದು ತೀವ್ರವಾಗಿ ತೊಳಲಿದ್ದಾರೆ.
ಮುಂದುವರಿದು ಮಾತನಾಡಿದ ಅವರು, "ಪ್ರಜಾಪ್ರಭುತ್ವದಲ್ಲಿ ಜನರಿಗೆ ಪ್ರಶ್ನಿಸುವ ಹಕ್ಕಿದೆ ಎಂಬುದನ್ನು ಮಲ್ಲಿಕಾರ್ಜುನ್ ಮರೆತಂತಿದೆ. ತಾವು ಸಚಿವ, ಪುತ್ರ ಶಾಸಕ ಹಾಗೂ ಪತ್ನಿ ಸಂಸದೆಯಾಗಿರುವುದರಿಂದ ತಾವೇ ರಾಜರು ಎಂಬ ಭಾವನೆ ಅವರಲ್ಲಿ ಮೂಡಿದೆಯೇ? ಶಾಸಕರನ್ನೇ ಹೀನಾಯವಾಗಿ ನಿಂದಿಸುವ ಇಂತಹ ಫ್ಯೂಡಲ್ ಮನಸ್ಥಿತಿ ಮತ್ತು ಗೂಂಡಾವರ್ತನೆಗೆ ಪ್ರಜಾಪ್ರಭುತ್ವದಲ್ಲಿ ಅವಕಾಶವಿಲ್ಲ. ಕೋಟೆ ಕಟ್ಟಿ ಮೆರೆದವರೆಲ್ಲ ಏನಾದರು ಎಂಬುದನ್ನು ಕನ್ನಡಿಗರು ನೋಡಿದ್ದಾರೆ. ದುರಹಂಕಾರ ಮುಂದುವರಿಸಿದರೆ ಜನರು ನಿಮ್ಮ ಅಧಿಕಾರದ ಕೋಟೆಯನ್ನೂ ಕೆಡವುತ್ತಾರೆ" ಎಂದು ಸಚಿವರಿಗೆ ನೇರ ಎಚ್ಚರಿಕೆ ನೀಡಿದ್ದಾರೆ.
ಈ ಕೂಡಲೇ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ತಮ್ಮ ಈ ನಡೆ ಹಾಗೂ ಮಾತಿಗೆ ಬಹಿರಂಗ ಕ್ಷಮೆಯಾಚಿಸಬೇಕು ಎಂದು ಸಿ.ಟಿ. ರವಿ ಒತ್ತಾಯಿಸಿದ್ದಾರೆ.




