ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಶ್ರೀ ಮುರುಘಾಮಠದ ಆವರಣದಲ್ಲಿ ಶ್ರಾವಣ ಮಾಸದ ನಿಮಿತ್ತ ಆಯೋಜಿಸಲಾಗಿರುವ 'ಅನುಭಾವ ಶ್ರಾವಣ - ಶರಣ ಚಿಂತನ' ಮಾಲಿಕೆಯ 22ನೇ ದಿನದ ಕಾರ್ಯಕ್ರಮದಲ್ಲಿ ಮಂಟೇಸ್ವಾಮಿಯವರ ಜೀವನ ಹಾಗೂ ಸಾಧನೆ ಕುರಿತು ವಿಚಾರ ಸಂಕಿರಣ ನಡೆಯಿತು.
ಶರಣರ ತತ್ತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಅಗತ್ಯ: ಡಾ. ಪಿ. ಎಸ್. ಶಂಕರ್
ಕಾರ್ಯಕ್ರಮದಲ್ಲಿ ಎಸ್‌ಜೆಎಂ ವಿದ್ಯಾನಿಕೇತನ ಹಾಗೂ ಶ್ರೀ ಮುರುಘಾಮಠದ ಆಡಳಿತ ಮಂಡಳಿ ಸದಸ್ಯರಾದ ಡಾ. ಪಿ. ಎಸ್. ಶಂಕರ್ ಮಾತನಾಡಿ, "ನಾವು ಶರಣರ ವಿಚಾರಗಳನ್ನು ಸಿದ್ಧಾಂತ ರೂಪದಲ್ಲಿ ಹೇಳುತ್ತೇವೆ, ಆದರೆ ಪ್ರಾಯೋಗಿಕವಾಗಿ ಅನುಸರಿಸುವಲ್ಲಿ ಹಿಂದುಳಿದಿದ್ದೇವೆ. ಕಳಬೇಡ, ಕೊಲಬೇಡ ಎಂಬ ಶರಣರ ಮಾತುಗಳನ್ನು ಕೇವಲ ಹೇಳಿಕೆಗೆ ಸೀಮಿತಗೊಳಿಸಬಾರದು. ಅಂತರಂಗ ಮತ್ತು ಬಹಿರಂಗ ಒಂದಾಗಿರಬೇಕು" ಎಂದು ಅಭಿಪ್ರಾಯಪಟ್ಟರು.
ಮಂಟೇಸ್ವಾಮಿಯವರ ಕೊಡುಗೆ ಮತ್ತು ಸಾಧನೆ:
ಅರಿವಿನ ಬೆಳಕು ಚೆಲ್ಲಿದ ಜನಪದ ಕಾವ್ಯ: ಎಸ್.ಜೆ.ಎಮ್. ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿಯವರು ಮಾತನಾಡಿ, "ಮಂಟೇಸ್ವಾಮಿಯವರು ಮಧ್ಯ ಕರ್ನಾಟಕ, ಮಂಡ್ಯ, ಮೈಸೂರು ಹಾಗೂ ಚಾಮರಾಜನಗರ ಭಾಗಗಳಲ್ಲಿ ಸಂಚರಿಸಿ ಜನರಲ್ಲಿ ಅರಿವು ಮೂಡಿಸಿದರು. ಅವರ ಅಂತರಂಗ ಶುದ್ಧಿಯಿಂದ ಮೌಖಿಕವಾಗಿ ಹೊರಹೊಮ್ಮಿದ ಸಾಲುಗಳು ಇಂದು ಮಹಾಕಾವ್ಯಗಳಾಗಿವೆ" ಎಂದರು.
ಶ್ರಮ ಸಂಸ್ಕೃತಿ ಮತ್ತು ಸಾಮಾಜಿಕ ಸಮಾನತೆ: ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಚಿತ್ರದುರ್ಗ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಶ್ರೀಮತಿ ಜಿ. ಎಮ್. ಲಕ್ಷ್ಮಿ ಮಾತನಾಡಿ, "ಮಂಟೇಸ್ವಾಮಿ ಪರಂಪರೆಯು ಕೇವಲ ಪವಾಡ ಕಥೆಯಲ್ಲ; ಅದು ಶ್ರಮ ಸಂಸ್ಕೃತಿ, ಜಾತಿ ವಿರೋಧಿ ನಿಲುವು ಹಾಗೂ ಆಧ್ಯಾತ್ಮಿಕತೆಯ ಸಂಕೇತ. ಅವರು ದಲಿತರನ್ನು ಶಿಷ್ಯರನ್ನಾಗಿ ಸ್ವೀಕರಿಸಿ ಜಾತಿ ವಿನಾಶ ಹಾಗೂ ಸ್ತ್ರೀ ಸಮಾನತೆಗಾಗಿ ಹೋರಾಡಿದರು" ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಬಸವ ಮುರುಘೇಂದ್ರ ಶ್ರೀಗಳು ವಿಷಯ ಕುರಿತು ಮಾತನಾಡಿದರು. ವಿವಿಧ ಸಮಾಜದ ಮುಖಂಡರು, ಬಸವರಾಜ ಕಟ್ಟಿ, ನಾಗರಾಜ್ ಸಂಗಂ, ಶಿವಣ್ಣ ಕಸವನಹಳ್ಳಿ ಮತ್ತಿತರರು ಉಪಸ್ಥಿತರಿದ್ದರು. ಉಮೇಶ್ ಪತ್ತಾರ್ ಅವರು ಮಂಟೇಸ್ವಾಮಿಯವರ ಗೀತೆಗಳನ್ನು ಗಾಯನ ಮಾಡಿದರು. ಮಧುಸೂಧನ್ ಸ್ವಾಗತಿಸಿ, ಗೀತಾ ನಿರೂಪಣೆ ನಡೆಸಿ ಶರಣು ಸಮರ್ಪಿಸಿದರು.
ಸೆಪ್ಟೆಂಬರ್ 5ರ ಕಾರ್ಯಕ್ರಮ:
ಸೆಪ್ಟೆಂಬರ್ 5ರ ಶನಿವಾರ ಸಂಜೆ 6.30ಕ್ಕೆ ಶ್ರೀ ಮುರುಘಾಮಠದ ಬಸವೇಶ್ವರ ಸಭಾಂಗಣದಲ್ಲಿ ನಡೆಯಲಿರುವ 'ಅನುಭಾವ ಶ್ರಾವಣ' ಕಾರ್ಯಕ್ರಮದಲ್ಲಿ 'ಸುತ್ತೂರಿನ ಆದಿ ಜಗದ್ಗುರುಗಳ ಕುರಿತು' ಪ್ರಧಾನ ಅಂಚೆ ಕಚೇರಿಯ ಅಂಚೆ ಸಹಾಯಕರಾದ ಆರ್. ತಿಪ್ಪೇಸ್ವಾಮಿ ವಿಷಯಾವಲೋಕನ ಮಾಡಲಿದ್ದಾರೆ. ಡಾ. ಬಸವಕುಮಾರ ಸ್ವಾಮೀಜಿಯವರು ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ.




