ಚಂದ್ರವಳ್ಳಿ ನ್ಯೂಸ್, ರಾಮನಗರ:
"ನಮ್ಮ ಭೂಮಿ - ನಮ್ಮ ಹಕ್ಕು" ಎಂಬ ಘೋಷಣೆಯೊಂದಿಗೆ ಪ್ರಸ್ತಾವಿತ ಬಿಡದಿ ಟೌನ್‌ಶಿಪ್ ಯೋಜನೆಯನ್ನು ವಿರೋಧಿಸಿ ಆಗಸ್ಟ್ 9, 10 ಮತ್ತು 11 ರಂದು ಬೈರಮಂಗಲದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ವರೆಗೆ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಜಾತ್ಯತೀತ ಜನತಾದಳ (ಜಡ್‌ಎಸ್) ಯುವ ಘಟಕದ ರಾಜ್ಯ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.
ಪಾದಯಾತ್ರೆಯ ಯಶಸ್ಸಿಗಾಗಿ ರಾಮನಗರದ ಶ್ರೀ ಮಂಜುನಾಥ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಪಕ್ಷದ ಪ್ರಮುಖ ಮುಖಂಡರು ಹಾಗೂ ಕಾರ್ಯಕರ್ತರ ಬೃಹತ್ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಭೆಯಲ್ಲಿ ಪಾದಯಾತ್ರೆಯ ಮಾರ್ಗ, ಜನಸಂಗ್ರಹಣೆ ಹಾಗೂ ಸಂಘಟನಾತ್ಮಕ ಸಿದ್ಧತೆಗಳ ಕುರಿತು ವಿಸ್ತೃತವಾಗಿ ಚರ್ಚಿಸಿ, ಅಗತ್ಯ ಸಲಹೆ-ಸೂಚನೆಗಳನ್ನು ನೀಡಿದರು.
ರೈತರ ಭೂಮಿ ಹಕ್ಕಿನ ಹೋರಾಟಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕೆಂದು ಕರೆ ನೀಡಿದ ಈ ಸಭೆಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಜಯಮುತ್ತು, ತಾಲೂಕು ಅಧ್ಯಕ್ಷ ಸಬ್ಬಕೆರೆ ಶಿವಲಿಂಗಪ್ಪ ಸೇರಿದಂತೆ ಪಕ್ಷದ ಹಿರಿಯ ಮುಖಂಡರು, ಪ್ರಮುಖ ರೈತ ನಾಯಕರು ಹಾಗೂ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.



