ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಷ್ಟ್ರೀಯ ಸ್ವಯಂಸೇವಕ ಸಂಘ ಶತಮಾನೋತ್ಸವದ ಸಂಭ್ರಮದಲ್ಲಿರುವ ಬೆನ್ನಲ್ಲೇ, ಕರ್ನಾಟಕದ ಐಟಿ-ಬಿಟಿ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಅವರಿಗೆ ಬಹಿರಂಗ ಪತ್ರ ಬರೆಯುವ ಮೂಲಕ ಹೊಸ ರಾಜಕೀಯ ಚರ್ಚೆಗೆ ನಾಂದಿ ಹಾಡಿದ್ದಾರೆ. ಸಂಘಟನೆಗೆ 100 ವರ್ಷ ತುಂಬಿದ್ದಕ್ಕಾಗಿ ಅಭಿನಂದನೆ ಸಲ್ಲಿಸುತ್ತಲೇ, ಆರ್‌ಎಸ್‌ಎಸ್‌ನ ಕಾನೂನುಬದ್ಧ ಸ್ಥಾನಮಾನ, ಆರ್ಥಿಕ ಪಾರದರ್ಶಕತೆ ಮತ್ತು ಸಾಂವಿಧಾನಿಕ ಹೊಣೆಗಾರಿಕೆಯನ್ನು ಪ್ರಶ್ನಿಸಿ ಸಚಿವರು ಸಾಲು ಸಾಲು ಖಡಕ್ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.
"60 ಸಾವಿರ ಶಾಖೆಗಳಿರುವ ಸಂಸ್ಥೆ 'ಅನೌಪಚಾರಿಕ'ವಾಗಿರಲು ಹೇಗೆ ಸಾಧ್ಯ?":
ಭಾರತ ಮತ್ತು ವಿದೇಶಗಳಲ್ಲಿ 60,000 ಕ್ಕೂ ಹೆಚ್ಚು ಶಾಖೆಗಳು ಹಾಗೂ ಕೋಟ್ಯಂತರ ಸ್ವಯಂಸೇವಕರನ್ನು ಹೊಂದಿರುವ ಆರ್‌ಎಸ್‌ಎಸ್, ಸಾರ್ವಜನಿಕ ಜೀವನದಲ್ಲಿ ಭಾರಿ ಪ್ರಭಾವ ಹೊಂದಿದೆ ಎಂಬುದನ್ನು ಒಪ್ಪಿಕೊಂಡಿರುವ ಪ್ರಿಯಾಂಕ್ ಖರ್ಗೆ, "ಇಷ್ಟೊಂದು ಬೃಹತ್ ಗಾತ್ರ ಮತ್ತು ವ್ಯಾಪ್ತಿಯನ್ನು ಹೊಂದಿರುವ ಸಂಘಟನೆಯು ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಸಾಂವಿಧಾನಿಕ ನಿಯಮಗಳ ಉನ್ನತ ಮಾನದಂಡಗಳನ್ನು ಕಾಯ್ದುಕೊಳ್ಳುವುದು ಅತ್ಯಗತ್ಯ" ಎಂದು ಪತ್ರದಲ್ಲಿ ಪ್ರತಿಪಾದಿಸಿದ್ದಾರೆ.
ಆರ್‌ಎಸ್‌ಎಸ್‌ನ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ ಅಖಿಲ ಭಾರತೀಯ ಪ್ರತಿನಿಧಿ ಸಭಾ ಬಿಡುಗಡೆ ಮಾಡಿದ 2025-26 ರ ವಾರ್ಷಿಕ ವರದಿಯ ಅಂಕಿ-ಅಂಶಗಳನ್ನೇ ಪತ್ರದಲ್ಲಿ ಉಲ್ಲೇಖಿಸಿರುವ ಸಚಿವರು, ಕರ್ನಾಟಕದಲ್ಲಿ ಆರ್‌ಎಸ್‌ಎಸ್ ಹೊಂದಿರುವ ಬೃಹತ್ ನೆಟ್‌ವರ್ಕ್ ಅನ್ನು ಹೀಗೆ ಪಟ್ಟಿ ಮಾಡಿದ್ದಾರೆ.
ಕರ್ನಾಟಕದಲ್ಲಿನ ಶಾಖೆಗಳು: 4,127 ದೈನಂದಿನ ಶಾಖೆಗಳು, 1,389 ಸಾಪ್ತಾಹಿಕ ಮಿಲನ್‌ಗಳು ಹಾಗೂ 60 ಮಾಸಿಕ ಮಂಡಳಿಗಳು ಕಾರ್ಯನಿರ್ವಹಿಸುತ್ತಿವೆ.
ಬೃಹತ್ ಒಗ್ಗೂಡುವಿಕೆ: ರಾಜ್ಯಾದ್ಯಂತ ನಡೆದಿರುವ 2,194 ಸಮಾಜೋತ್ಸವಗಳಲ್ಲಿ 19,61,158 ಮಂದಿ ಭಾಗವಹಿಸಿದ್ದಾರೆ.
ಸಮವಸ್ತ್ರಧಾರಿ ಪಥಸಂಚಲನ: 562 ಪಥಸಂಚಲನಗಳು ನಡೆದಿದ್ದು, ಇದರಲ್ಲಿ 2,21,963 ಸಮವಸ್ತ್ರಧಾರಿ ಸ್ವಯಂಸೇವಕರು ಪಾಲ್ಗೊಂಡಿದ್ದಾರೆ.
"ಇಷ್ಟು ದೊಡ್ಡ ಮಟ್ಟದ ಸಾರ್ವಜನಿಕ ಚಟುವಟಿಕೆ, ಶಿಸ್ತುಬದ್ಧ ನೆಟ್‌ವರ್ಕ್ ಹಾಗೂ ಸಮವಸ್ತ್ರಧಾರಿ ಪಥಸಂಚಲನಗಳನ್ನು ನಡೆಸುವ ವ್ಯವಸ್ಥೆಯನ್ನು ಕೇವಲ ಒಂದು ಖಾಸಗಿ ಅಥವಾ ಅನೌಪಚಾರಿಕ ಸಂಸ್ಥೆ ಎಂದು ಪರಿಗಣಿಸಲು ಸಾಧ್ಯವಿಲ್ಲ" ಎಂದು ಖರ್ಗೆ ವಾದಿಸಿದ್ದಾರೆ.
"ಸಫಾಯಿ ಕರ್ಮಚಾರಿಗೂ ನೋಂದಣಿ ಕಡ್ಡಾಯ, ಆರ್‌ಎಸ್‌ಎಸ್‌ಗೆ ಯಾಕಿಲ್ಲ?":
ದೇಶದ ಸಾಂವಿಧಾನಿಕ ಪ್ರಜಾಪ್ರಭುತ್ವದಲ್ಲಿ ಯಾರೂ ಪರಿಶೀಲನೆಯಿಂದ ಹೊರತಾಗಿರಲು ಸಾಧ್ಯವಿಲ್ಲ ಎಂದಿರುವ ಸಚಿವರು, "ಭಾರತದಲ್ಲಿ ಓರ್ವ ಸಫಾಯಿ ಕರ್ಮಚಾರಿ ಕೂಡ ಸರ್ಕಾರಿ ಸೌಲಭ್ಯ ಪಡೆಯಲು ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಪ್ರತಿಯೊಂದು ಧಾರ್ಮಿಕ ಟ್ರಸ್ಟ್, ಎನ್‌ಜಿಒ, ದತ್ತಿ ಸಂಸ್ಥೆಗಳು ಆಡಿಟಿಂಗ್‌ಗೆ ಒಳಪಡುತ್ತವೆ ಮತ್ತು ತಮ್ಮ ಆದಾಯದ ಮೂಲವನ್ನು ಬಹಿರಂಗಪಡಿಸುತ್ತವೆ. ಹೀಗಿರುವಾಗ ಆರ್‌ಎಸ್‌ಎಸ್ ಅಧಿಕೃತವಾಗಿ ನೋಂದಾಯಿಸಿಕೊಳ್ಳದೆ, ಅನಾಮಧೇಯವಾಗಿ ಕಾರ್ಯನಿರ್ವಹಿಸುತ್ತಿರುವ ಹಿಂದಿನ 'ಕಾನೂನು ಆಧಾರ'ವನ್ನು ವಿವರಿಸಲು ನಿಮ್ಮ ಪದಾಧಿಕಾರಿಗಳನ್ನು ನಿಯೋಜಿಸಿ" ಎಂದು ಆರ್‌ಎಸ್‌ಎಸ್‌ಗೆ ಸವಾಲು ಹಾಕಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ ಕೋರಿರುವ 6 ಪ್ರಮುಖ ವಿವರಗಳು:
ಸಂಘಟನೆಯು ಮುಂದೆ ಬಂದು ಈ ಕೆಳಗಿನ ಮಾಹಿತಿಗಳನ್ನು ಸಾರ್ವಜನಿಕ ವಲಯದಲ್ಲಿ ಇಡಬೇಕು ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.
ಕಾನೂನಾತ್ಮಕ ಸ್ಥಾನಮಾನ: ಆರ್‌ಎಸ್‌ಎಸ್ ಸಂಘಟನೆಯ ಅಧಿಕೃತ ಕಾನೂನಾತ್ಮಕ ಸ್ಥಾನಮಾನ ಮತ್ತು ಸಾಂಸ್ಥಿಕ ರಚನೆಯ ವಿವರಗಳು.
ಪದಾಧಿಕಾರಿಗಳ ವಿವರ: ಸಂಘಟನೆಯ ಅಧಿಕೃತ ಪ್ರತಿನಿಧಿಗಳು ಯಾರು ಹಾಗೂ ದೇಣಿಗೆ, ವಂತಿಗೆ ಮತ್ತು ಆದಾಯದ ಮೂಲಗಳೇನು?
ಆಸ್ತಿ ಮತ್ತು ತೆರಿಗೆ: ಸಂಘಟನೆಯ ಒಟ್ಟು ವೆಚ್ಚ ಮತ್ತು ಆಸ್ತಿಪಾಸ್ತಿಗಳ ವಿವರಗಳೇನು? ಕಾನೂನಿನ ಪ್ರಕಾರ ಅನ್ವಯವಾಗುವ ತೆರಿಗೆಗಳನ್ನು ಸಕ್ರಮವಾಗಿ ಪಾವತಿಸಲಾಗುತ್ತಿದೆಯೇ?
ನೋಂದಣಿ ರಹಿತ ಕಾರ್ಯಚಟುವಟಿಕೆ: ಯಾವುದೇ ಔಪಚಾರಿಕ ನೋಂದಣಿ ಇಲ್ಲದೆಯೇ ಇಷ್ಟು ವರ್ಷಗಳಿಂದ ಚಟುವಟಿಕೆ ನಡೆಸಲು ಬಳಸುತ್ತಿರುವ ಕಾನೂನಾತ್ಮಕ ಆಧಾರ ಯಾವುದು?
ಶಾಸನಾತ್ಮಕ ಚೌಕಟ್ಟು: ಯಾವುದೇ ಸಾರ್ವಜನಿಕ ಜವಾಬ್ದಾರಿಯಿಲ್ಲದೆ (Accountability) ಇಷ್ಟು ದೊಡ್ಡ ಪ್ರಮಾಣದಲ್ಲಿ ಕಾರ್ಯನಿರ್ವಹಿಸುವ ಹಕ್ಕನ್ನು ಯಾವ ಸಾಂವಿಧಾನಿಕ ಚೌಕಟ್ಟಿನ ಅಡಿಯಲ್ಲಿ ಪಡೆಯಲಾಗಿದೆ?
ಅನುಮತಿಗಳ ವಿವರ: ಬೃಹತ್ ಸಭೆಗಳು, ಪಥಸಂಚಲನಗಳು ಮತ್ತು ಸಾರ್ವಜನಿಕ ಕಾರ್ಯಕ್ರಮಗಳಿಗಾಗಿ ಇಲಾಖೆಗಳಿಂದ ಪಡೆದ ಅಧಿಕೃತ ಒಪ್ಪಿಗೆ ಹಾಗೂ ನಿಯಮಾವಳಿಗಳ ಪಾಲನೆಯ ಸಂಪೂರ್ಣ ವಿವರಗಳು.
ಸಚಿವ ಪ್ರಿಯಾಂಕ್ ಖರ್ಗೆ ಅವರ ಈ ಬಹಿರಂಗ ಪತ್ರವು ಆರ್‌ಎಸ್‌ಎಸ್‌ನ ಆಂತರಿಕ ರಚನೆ ಮತ್ತು ಕಾರ್ಯವೈಖರಿಯನ್ನು ಸಾಂವಿಧಾನಿಕ ಚೌಕಟ್ಟಿನ ಅಡಿಗೆ ತರಬೇಕೆಂಬ ಕಾಂಗ್ರೆಸ್‌ನ ನಿಲುವನ್ನು ಸ್ಪಷ್ಟಪಡಿಸಿದ್ದು, ಇದಕ್ಕೆ ಆರ್‌ಎಸ್‌ಎಸ್ ನಾಯಕರು ಅಥವಾ ಬಿಜೆಪಿ ವಲಯದಿಂದ ಯಾವ ರೀತಿಯ ಕೌಂಟರ್ ಬರಲಿದೆ ಎಂಬುದು ಈಗ ತೀವ್ರ ಕುತೂಹಲ ಮೂಡಿಸಿದೆ.



