ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
"ಕೈಯಲ್ಲಿ ಸಂವಿಧಾನದ ಪ್ರತಿಯನ್ನು ಹಿಡಿದುಕೊಂಡು ಪ್ರದರ್ಶಿಸುವ ಕಾಂಗ್ರೆಸ್ ಪಕ್ಷ, ತನ್ನ ನಡವಳಿಕೆಗಳ ಮೂಲಕ ಆಚರಣೆಯಲ್ಲಿ ಸಂವಿಧಾನದ ಮೌಲ್ಯಗಳನ್ನೇ ಕೊಲೆ ಮಾಡುತ್ತಿದೆ" ಎಂದು ಬಿಜೆಪಿ ನಾಯಕ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನ ಸಭಾಪತಿ ಮತ್ತು ಉಪಸಭಾಪತಿ ಹುದ್ದೆಗಳು ಅತ್ಯಂತ ವಿಶಿಷ್ಟ ಗೌರವ, ಘನತೆ ಹೊಂದಿರುವ ಸಾಂವಿಧಾನಿಕ ಹುದ್ದೆಗಳಾಗಿವೆ. ಈ ಹುದ್ದೆಗಳನ್ನು ಪಕ್ಷಾತೀತವಾಗಿ ಗೌರವಿಸುವುದು ಪ್ರಜಾಪ್ರಭುತ್ವದ ಮೂಲಭೂತ ತತ್ವ ಮತ್ತು ಆಶಯವಾಗಿದೆ. ಆದರೆ ಕಾಂಗ್ರೆಸ್ ಪಕ್ಷವು ಈ ತತ್ವವನ್ನು ಗಾಳಿಗೆ ತೂರಿದೆ ಎಂದು ಅವರು ಆರೋಪಿಸಿದರು.
ಪಕ್ಷದ ಲೆಟರ್‌ಹೆಡ್‌ನಲ್ಲಿ ಸಾಂವಿಧಾನಿಕ ಹುದ್ದೆಗಳ ಪ್ರದರ್ಶನ:
ಕಾಂಗ್ರೆಸ್ ಪಕ್ಷವು ತನ್ನ ಅಧಿಕೃತ ಲೆಟರ್‌ಹೆಡ್ ಮೇಲೆ ಸಾಂವಿಧಾನಿಕ ಹುದ್ದೆಗಳನ್ನು ಪ್ರದರ್ಶಿಸಿ ಪ್ರಕಟಿಸಿರುವುದನ್ನು ಕಟುವಾಗಿ ಟೀಕಿಸಿದ ಸಿ.ಟಿ. ರವಿ, "ಇಂತಹ ನಡೆ ಸಾಂವಿಧಾನಿಕ ಹುದ್ದೆಗಳ ಪಕ್ಷಾತೀತ ಸ್ವರೂಪಕ್ಕೆ ಧಕ್ಕೆ ತರುತ್ತದೆ. ಇದು ಕೇವಲ ಸಾಂಪ್ರದಾಯಿಕ ಉಲ್ಲಂಘನೆಯಷ್ಟೇ ಅಲ್ಲ, ಆ ಉನ್ನತ ಹುದ್ದೆಗಳ ಗೌರವಕ್ಕೆ ಬಗೆದ ಅಪಮಾನವಾಗಿದೆ" ಎಂದು ಹೇಳಿದರು.
ಸಂವಿಧಾನವನ್ನು ರಕ್ಷಿಸುವುದಾಗಿ ಭಾಷಣ ಮಾಡುವ ಕಾಂಗ್ರೆಸ್, ತನ್ನದೇ ದಿನನಿತ್ಯದ ನಡೆ-ನುಡಿಗಳ ಮೂಲಕ ಸಾಂವಿಧಾನಿಕ ಮೌಲ್ಯಗಳನ್ನು ಕಡೆಗಣಿಸುತ್ತಿದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ದೂರಿದ್ದಾರೆ.



