ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಲೋಕಸೇವಾ ಆಯೋಗವನ್ನು ಸುಧಾರಿಸಿ, ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಸರ್ಕಾರದ ವಿರುದ್ಧದ ಹೋರಾಟಕ್ಕೆ ಜಾತ್ಯತೀತ ಜನತಾದಳದ (ಜೆಡಿಎಸ್) ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಅವರು ಬಹಿರಂಗ ಬೆಂಬಲ ವ್ಯಕ್ತಪಡಿಸಿದ್ದಾರೆ.
ಲಕ್ಷಾಂತರ ನಿರುದ್ಯೋಗಿ ಯುವಜನತೆ ಮತ್ತು ಉದ್ಯೋಗಾಕಾಂಕ್ಷಿಗಳ ಭವಿಷ್ಯದ ದೃಷ್ಟಿಯಿಂದ ಕೆಪಿಎಸ್‌ಸಿ ಸಂಸ್ಥೆಯನ್ನು ರಕ್ಷಿಸುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಕೆಪಿಎಸ್‌ಸಿ ಉಳಿಸಿ – ಅಭ್ಯರ್ಥಿಗಳ ಭವಿಷ್ಯ ರಕ್ಷಿಸಿ:
"ಕೆಪಿಎಸ್‌ಸಿ ಲಕ್ಷಾಂತರ ವಿದ್ಯಾರ್ಥಿಗಳ ಕನಸಿನ ಆಶಾಕಿರಣವಾಗಿದೆ. ಈ ಸಂಸ್ಥೆಯಲ್ಲಿ ಸೂಕ್ತ ಸುಧಾರಣೆಗಳನ್ನು ತಂದು, ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ನಾವೆಲ್ಲರೂ ಒಂದಾಗಬೇಕಿದೆ. ಅಭ್ಯರ್ಥಿಗಳ ಹಿತರಕ್ಷಣೆ ಮತ್ತು ಅವರ ಭವಿಷ್ಯದ ಭದ್ರತೆಗಾಗಿ ನಡೆಸುವ ಪ್ರತಿಯೊಂದು ನ್ಯಾಯಯುತ ಹೋರಾಟದಲ್ಲಿಯೂ ನಾನು ಸದಾ ನಿಮ್ಮ ಜೊತೆಗಿರುತ್ತೇನೆ," ಎಂದು ನಿಖಿಲ್ ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಯುವಜನತೆಯ ಪರವಾಗಿ ಧ್ವನಿ ಎತ್ತಿರುವ ಅವರು, ಕೆಪಿಎಸ್‌ಸಿ ಸಂಸ್ಥೆಯ ಪಾವಿತ್ರ್ಯತೆಯನ್ನು ಕಾಯ್ದುಕೊಳ್ಳಲು ಹಾಗೂ ಅಭ್ಯರ್ಥಿಗಳಿಗೆ ನ್ಯಾಯ ದೊರಕಿಸಿಕೊಡಲು ಒಗ್ಗಟ್ಟಿನ ಹೋರಾಟಕ್ಕೆ ಕರೆ ನೀಡಿದ್ದಾರೆ.




