Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನಿರ್ಭಯಾ ಒಡಲಾಳ....ದಯವಿಟ್ಟು ಕೇಳಿಸಿಕೊಳ್ಳಿ

Advertisement
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನಿರ್ಭಯಾ ಒಡಲಾಳ....ದಯವಿಟ್ಟು ಕೇಳಿಸಿಕೊಳ್ಳಿ, ಆ ದಿನ ನಾನು ಬೆಳಗಿನ ಕರ್ತವ್ಯದಲ್ಲಿದ್ದೆ, ಡ್ಯೂಟಿ ಡಾಕ್ಟರ್ ಒಬ್ಬ ಪೇಷೆಂಟ್ ಫೈಲ್ ನೋಡಿ ಆಕೆಯ ಗಾಯಕ್ಕೆ ಡ್ರೆಸಿಂಗ್ ಮಾಡಲು ಹೇಳಿದರು. ಹಚ್ಚಬೇಕಾದ ಮುಲಾಮಿನ ಹೆಸರನ್ನು ಅದರಲ್ಲಿ ಬರೆದಿದ್ದರು.

ನಾನು ಆ ಫೈಲ್ ನೊಂದಿಗೆ ಒಳ  ರೋಗಿಯಾಗಿ ದಾಖಲಾಗಿದ್ದ ಕೋಣೆಯೊಳಗೆ ಹೋದೆ. ಆ ಯುವತಿಯ ಮುಖವೆಲ್ಲ ಊದಿಕೊಂಡಿತ್ತು. ಎದೆ ಬೆನ್ನು ತೊಡೆಯ ಭಾಗದಲ್ಲೆಲ್ಲಾ ಗಾಯಗಳಾಗಿದ್ದವು. ಆಕೆಯನ್ನು ಡ್ರೆಸಿಂಗ್ ಕೋಣೆಗೆ ಕರೆದುಕೊಂಡು ಹೋಗಿ ಆಕೆಯ ಬಟ್ಟೆ ಬಿಚ್ಚಿಸಿ ಹತ್ತಿಯಿಂದ ಗಾಯವನ್ನು ಸ್ವಚ್ಚ ಮಾಡತೊಡಗಿದೆ. ನಾನು ಭಾವಿಸಿದ್ದಕ್ಕಿಂತ ಹೆಚ್ಚು ಗಂಭೀರವಾದ ಗಾಯಗಳಾಗಿದ್ದವು. ಇದು ಯಾರೋ ಬಲವಾಗಿ ಹೊಡೆದ ಗಾಯ ಎಂದು ಶುಶ್ರೂಷಕಿಯಾದ ನನಗೆ ಅರ್ಥವಾಯಿತು.

ಆಕೆಯ ಗಾಯಕ್ಕೆ ಮುಲಾಮು ಹಚ್ಚುತ್ತಾ ಯಾರು ಹೊಡೆದದ್ದು ಎಂದು ಕೇಳಿದೆ. ಅಲ್ಲಿಯವರೆಗೂ ಗಾಯದ ನೋವಿಗೆ ಕನಲುತ್ತಿದ್ದ ಆಕೆ ಒಮ್ಮೆಲೆ ದುಃಖ ಮತ್ತು ಕೋಪದಿಂದ ತನ್ನ ಗಂಡನನ್ನು ಶಪಿಸತೊಡಗಿದಳು. ಆತನ ದುರಭ್ಯಾಸ, ಹಣ ಮತ್ತು ಹೆಣ್ಣಿನ ಮೋಹ, ರಾಕ್ಷಸೀ ಪ್ರವೃತ್ತಿ ಎಲ್ಲವನ್ನೂ ಬಣ್ಣಿಸಿ ಇಡೀ ಗಂಡು ಸಂತಾನದ ಜನ್ಮ ಜಾಲಡಿದಳು. ಆಕೆಯ ಗಾಯ ತೀಕ್ಷ್ಣವಾಗಿದ್ದುದು ನಿಜ. ಆದರೆ ಆಕೆ ಎಲ್ಲಾ ಗಂಡಸರನ್ನು  ಕೆಟ್ಟ ಪದಗಳಲ್ಲಿ ನಿಂದಿಸಿದ್ದು ನನಗೆ ಸರಿ ಕಾಣಲಿಲ್ಲ. ಅದನ್ನೇ ಯೋಚಿಸುತ್ತಾ ಆಕೆಯ ಗಾಯಗಳಿಗೆ ಬ್ಯಾಂಡೇಜ್ ಮಾಡುತ್ತಿದ್ದೆ.

ಅದೇ ಸಮಯಕ್ಕೆ ಸರಿಯಾಗಿ ಖುದಿರಾಮನ ರಿಂಗ್ ಟೋನ್ ನನ್ನ ಮೊಬೈಲಿನಲ್ಲಿ ರಿಂಗಿಸಿತು. ಕೆಲಸ ಮುಂದುವರಿಸುತ್ತಲೇ ಖುಷಿಯಿಂದ ಕಾಲ್ ರಿಸೀವ್ ಮಾಡಿದೆ. ಎಂದಿನಂತೆ ಸಿಹಿ ಧ್ವನಿಯಲ್ಲಿ ಪ್ಯಾರಿ ಚಿನ್ನು ಎಂದು ತೊದಲುತ್ತಾ ತುಂಬಾ ಮುದ್ದಾಗಿ ಮಾತನಾಡಿದ. ತುಂಬಾ ಆಶ್ಚರ್ಯವೆಂದರೆ ನಾನೇ ಬಹಳ ಸಲ ಆತನನ್ನು ಸಿನಿಮಾಗೆ ಕರೆದಿದ್ದೆ. ಒಮ್ಮೆಯೂ ಒಪ್ಪಿರಲಿಲ್ಲ. ಇಂದು ಸ್ವತಃ ಆತನೇ ಆಹ್ವಾನ ನೀಡಿದ. ನನಗೆ ಖುಷಿಯೋ ಖುಷಿ. ಅಷ್ಟೇ ಅಲ್ಲ ಸಂಜೆ 5 ಗಂಟೆಗೆಲ್ಲಾ ಇಂಡಿಯಾ ಗೇಟ್ ಬಳಿ ಹೋಗಿ ಅಲ್ಲಿ ನನ್ನ ಪ್ರೀತಿಯ ಡೆಲ್ಲಿ ಕುಲ್ಫಿ ಮತ್ತು ಫಲೂಡ ತಿಂದು ನನ್ನ ಫೇವರೇಟ್ ಹೀರೋ ಸಲ್ಮಾನ್ ಖಾನ್ ಸಿನಿಮಾ ಮಲ್ಟಿಪ್ಲೆಕ್ಸ್ ನಲ್ಲಿ ನೋಡೋಣ ಎಂದ.

ನನ್ನ ಆನಂದಕ್ಕೆ ಪಾರವೇ ಇರಲಿಲ್ಲ. ಗಾಯಕ್ಕೆ ಔಷಧಿ ಹಚ್ಚುತ್ತಿದ್ದರು ಮನಸ್ಸು ಸ್ವರ್ಗದಲ್ಲಿ ತೇಲುತ್ತಿತ್ತು. ನಾನು ಉಳಿದುಕೊಂಡಿದ್ದ ಪಿ ಜಿ ಮಾಲೀಕರಿಗೆ ಕೆಲಸ ತಡವಾಗುತ್ತದೆ. ರಾತ್ರಿ ಲೇಟಾಗಿ ಬರುತ್ತೇನೆ ಎಂದು ಸುಳ್ಳು ಹೇಳಲು ಮನಸ್ಸಿನಲ್ಲಿ ತಯಾರಾದೆ. ಆ ಗುಂಗಿನಲ್ಲೇ ಖುದಿರಾಮನಿಗೆ ಸಂಜೆ ಸಿಗುವ ಸ್ಥಳ ಮತ್ತು ಸಮಯ ತಿಳಿಸಿ ಈಕೆಯ ಡ್ರೆಸಿಂಗ್ ಮುಗಿಸಿ ಆಕೆಯನ್ನು ಸಮಾಧಾನಿಸಿ ವಾರ್ಡಗೆ ನಾನೇ ಬಿಟ್ಟು ಬಂದೆ. ಮನಸ್ಸು ಆಹ್ಲಾದಕರವಾಗಿತ್ತು. ಕೆಲಸವನ್ನು ತುಂಬಾ ಶ್ರದ್ಧೆಯಿಂದ ಮಾಡುತ್ತಿದ್ದೆ.

ಅಯ್ಯೋ ನಾನೊಬ್ಬ ಹುಚ್ಚಿ. ಈ ಖುಷಿಯಲ್ಲಿ ನಿಮಗೆ ಖುದಿರಾಂ ಯಾರೆಂದು ಹೇಳಲೇ ಇಲ್ಲ ನೋಡಿ. ಆತ ನನ್ನ ಬಾಯ್ ಪ್ರೇಂಡ್. ತುಂಬಾ ಒಳ್ಳೆಯ ಹುಡುಗ. ಮೆಡಿಕಲ್ ರೆಪ್ರೆಸೆಂಟೇಟಿವ್. ನಮ್ಮ ಊರಿನ ಬಳಿಯವನು ಈಗ ನನ್ನಂತೆ ದೆಹಲಿಯ ಒಂದು ಪಿ‌. ಜಿ. ಯಲ್ಲಿ ಇದ್ದಾನೆ. ಚಿಕ್ಕ ವಯಸ್ಸಿನಿಂದಲೂ ಬಲ್ಲೆ. ಸ್ವಲ್ಪ ವರ್ಷ ಸಂಪರ್ಕ ಇರಲಿಲ್ಲ.

 ಆದರೆ ಮೂರು ವರ್ಷದ ಹಿಂದೆ ಆಕಸ್ಮಿಕವಾಗಿ ಬಸ್ಸಿನಲ್ಲಿ ಸಿಕ್ಕ. ಈಗ ಇಬ್ಬರೂ ಪ್ರೇಮಿಗಳು. ಇಷ್ಟರಲ್ಲೇ ಮನೆಯವರಿಗೆ ಹೇಳಿ ಮದುವೆಯಾಗುತ್ತೇವೆ. ಅವನ ಮನೆಯಲ್ಲಿ ಯಾವುದೇ ತೊಂದರೆ ಇಲ್ಲ. ನಮ್ಮ ಮನೆಯಲ್ಲಿ ಅಮ್ಮನನ್ನು ಸ್ವಲ್ಪ ಒಪ್ಪಿಸಬೇಕಿದೆ.

ಖುದಿರಾಂ ನಾಚಿಕೆ ಸ್ವಭಾವದವನು. ಸ್ವಲ್ಪ ಭಯ ಜಾಸ್ತಿ. ಯಾವುದೇ ದುರಾಭ್ಯಾಸ ಇಲ್ಲ. ಬಹಳ ಶ್ರಮಜೀವಿ. ತನ್ನ ತಂದೆ ತಾಯಿ ಅಕ್ಕನನ್ನು ತುಂಬಾ ಪ್ರೀತಿಸುತ್ತಾನೆ. ಆತನ ಮೇಲೆ ನನಗೆ ಪ್ರೀತಿ ಮೂಡಲು ಇದೇ ಮುಖ್ಯ ಕಾರಣ. ಅದೇ ಪ್ರೀತಿ ನನಗೂ ಸಿಗಬಹುದು ಎಂಬ ಆಸೆ......

ಸಂಜೆ ಇಬ್ಬರೂ ಸೇರಿ ಇಂಡಿಯಾ ಗೇಟ್ ಬಳಿ‌ಸುತ್ತಾಡಿ ಪಾವ್ ಬಾಜಿ ತಿಂದು ಕರೋಲ್ ಬಾಗ್ ನ ಮಲ್ಟಿಪ್ಲೆಕ್ಸ್ ನಲ್ಲಿ ಸಿನಿಮಾ ನೋಡಿದೆವು. ಖುದಿರಾಮನ ಭುಜದ ಮೇಲೊರಗಿ ಪಾಪ್ ಕಾರ್‌ನ್ ತಿನ್ನುತ್ತಾ ಆ ಹಾಸ್ಯ ಬೆರೆತ ಪ್ರೀತಿಯ ಸಲ್ಮಾನ್ ಖಾನ್ ಸಿನಿಮಾವನ್ನು ಮೊದಲ ಬಾರಿಗೆ ನೋಡಿದ ಕ್ಷಣಗಳನ್ನು ಈ ಜೀವಮಾನದಲ್ಲಿ ಮರೆಯುವುದಿಲ್ಲ.

ಸಿನಿಮಾ ಮುಗಿಯಲು ರಾತ್ರಿ ಹನ್ನೊಂದು ಗಂಟೆಯಾಯಿತು. ಎಲ್ಲಾದರೂ ಊಟ ಮಾಡೋಣ ಎಂದು ಒತ್ತಾಯಿಸಿದೆ. ಅವನು ತುಂಬಾ ಸಮಯವಾದ ಕಾರಣ ಅದನ್ನು ನಿರಾಕರಿಸಿ, ಅಲ್ಲಿಯೇ ರಸ್ತೆ ಬದಿಯಲ್ಲಿ ರೋಟಿ ಕರಿ ಪಾರ್ಸಲ್ ಮಾಡಿಸಿ ಬೇಗ ಬೇಗ ಗಾಂಧಿ ಮಾರ್ಗ್ ನ ಬಸ್ ನಿಲ್ದಾಣಕ್ಕೆ ಬಂದೆವು.

ಸ್ವಲ್ಪ ಸಮಯದಲ್ಲೇ ಒಂದು ಖಾಸಗಿ ಬಸ್ ಬಂತು. ನಮ್ಮ ಪಿ ಜಿ ಬಳಿ ಅದು‌ಹೋಗುವುದಾಗಿ ಹೇಳಿದ ಕಾರಣ ಇಬ್ಬರೂ ಹಿಂಬಾಗಿಲಿನಿಂದ ಹತ್ತಿದೆವು.

ಬಸ್ಸಿನಲ್ಲಿ ಐದಾರು ಗಂಡಸರು ಮತ್ತು ಇಬ್ಬರು ಹೆಂಗಸರು ಮಾತ್ರ ಇದ್ದರು. ಉಳಿದದ್ದು ಖಾಲಿ. ನಾವಿಬ್ಬರೂ ಒಂದೇ ಬದಿಯ ಸೀಟಿನಲ್ಲಿ ಕುಳಿತು ಸಿನಿಮಾ ದೃಶ್ಯಗಳನ್ನು ಮೆಲುಕು ಹಾಕುತ್ತಾ ನಮ್ಮದೇ ಲೋಕದಲ್ಲಿ ತೇಲಾಡುತ್ತಿದ್ದೆವು. ಮುಂದಿನ ನಿಲ್ದಾಣದಲ್ಲಿ ಆ ಇಬ್ಬರು ಹೆಂಗಸರು ಇಳಿದರು. ನಮ್ಮ ನಿಲ್ದಾಣ ಇನ್ನೂ ಮೂರು ಸ್ಟಾಪ್ ಇತ್ತು.

ಬಸ್ ಮುಂದಕ್ಕೆ ಚಲಿಸುತ್ತಿದ್ದಂತೆ ಆ ಐದೂ ಹುಡುಗರು ಒಟ್ಟಿಗೆ ಗುಸುಗುಸು ಮಾತನಾಡುತ್ತ ಡ್ರೈವರ್ ಬಳಿ ಹೋದರು. ಬಹುಶಃ ಅವರೆಲ್ಲರೂ ಪರಿಚಿತರು ಎನಿಸಿತು. ನಾವು ನಮ್ಮ ಪಾಡಿಗೆ ಮಾತನಾಡುತ್ತಾ ಇದ್ದೆವು.

ಕೆಲವೇ ಕ್ಷಣಗಳಲ್ಲಿ ಅವರಲ್ಲಿ ನಾಲ್ಕು ಜನ ನಮ್ಮ ಬಳಿ ಬಂದರು. ಸ್ವಲ್ಪ ಕುಡಿದಿದ್ದರು ಎನಿಸುತ್ತದೆ. ಗಡುಸು ಧ್ವನಿಯಲ್ಲಿ ಯಾರು ನೀವು ಎಲ್ಲಿಗೆ ಹೋಗಬೇಕು ಎಂದು ದಬಾಯಿಸಿದರು.

ನಾನು ಧೈರ್ಯವಾಗಿ ನನ್ನ ನಿಲ್ದಾಣದ ಹೆಸರು ಹೇಳಿದೆ. ನೀವು ಊಹಿಸಲೂ‌ಸಾಧ್ಯವಿಲ್ಲ. ನಮ್ಮಿಂದ ಯಾವುದೇ ಪ್ರಚೋದನೆಯೂ ಇರಲಿಲ್ಲ.  ಅದರಲ್ಲಿ ಒಬ್ಬ ತಕ್ಷಣ ನನ್ನ ಕೆನ್ನೆಗೆ ಬಲವಾಗಿ ಹೊಡೆದು ತಲೆ ಕೂದಲು ಎಳೆದು ಕೆಳಗೆ ಬೀಳಿಸಿದ. ನನಗೆ ಏನಾಗುತ್ತಿದೆ ಎಂದು ಅರ್ಥವೇ ಆಗಲಿಲ್ಲ. ತಲೆ ಗಿರ್‌ಎಂದಿತು. ಕೆಳಗೆ ಬಿದ್ದ ನನ್ನ ಕೈ  ಮೇಲೆ ಇನ್ನೊಬ್ಬ ಕಾಲಿಟ್ಟು ತುಳಿದ. ಸಿಕ್ಕಾಪಟ್ಟೆ ನೋವಾಯಿತು. ಖುದಿರಾಂ ತುಂಬಾ ಭಯ ಪಟ್ಟು ಅದುರಿಹೋದ. ಆದರೂ ಅವನು ಎದ್ದು ನನ್ನನ್ನು ರಕ್ಷಿಸಲು ಮುನ್ನುಗ್ಗಿದ. ಆಗ ಉಳಿದಿಬ್ಬರು ಅವನನ್ನು ಇನ್ನೊಂದು ಸೀಟಿಗೆ ತಳ್ಳಿ ತಲೆ ಮತ್ತು ಹೊಟ್ಟೆಗೆ ಬಲವಾಗಿ ಗುದ್ದಿದರು.

ನನಗಿಂತ ಖುದಿರಾಮನಿಗೆ ಹೊಡೆದಿದ್ದು ನನ್ನಲ್ಲಿ ರೋಷ ಉಕ್ಕಿಬಂತು. ಹೇಗೋ ಕಷ್ಟಪಟ್ಟು ಒಬ್ಬನನ್ನು ಬಲವಾಗಿ ತಳ್ಳಿ ಎದ್ದು ಖುದಿರಾಮನನ್ನು ತಬ್ಬಿಕೊಂಡೆ ಜೊತೆಗೆ ಜೋರಾಗಿ ಕೂಗ ತೊಡಗಿದೆ. ರಾತ್ರಿಯ ಸಮಯ. ಜನ ಸಂಚಾರ ಕಡಿಮೆ ಇತ್ತು. ಬಸ್ಸಿನ ಒಳಗೆ  ಸಿಡಿಯ ಹಾಡುಗಳ ಧ್ವನಿ ಹೆಚ್ಚಾಗಿತ್ತು. ಬಸ್ಸು ಚಲಿಸುತ್ತಲೇ ಇತ್ತು. ದೂರದಲ್ಲಿ ಒಬ್ಬ ಪೋಲೀಸ್ ಕಾಣಿಸಿದ. ಜೋರಾಗಿ ಕೈ ಬೀಸಿದೆ. ಆತ ನನ್ನತ್ತ ನೋಡಿದ. ಪಾಪ ಆತನಿಗೆ ಎಷ್ಟು ಅರ್ಥವಾಯಿತೋ ತಿಳಿಯಲಿಲ್ಲ. ಬಸ್ಸು ಮುಂದೆ ಹೋಯಿತು.

ಇಲ್ಲಿಂದ ಮುಂದೆ ನಾನು ಹೇಳುವುದು ಅಶ್ಲೀಲವೆನಿಸಿದರೆ ದಯವಿಟ್ಟು ಕ್ಷಮಿಸಿ. ನನ್ನ ಜಾಗದಲ್ಲಿ ನಿಮ್ಮ ತಂಗಿ ತಾಯಿ ಅಮ್ಮ ಮಗಳು ಹೆಂಡತಿ ಯಾರನ್ನು ಬೇಕಾದರೂ ಊಹಿಸಿಕೊಳ್ಳಿ. ಆಗ ನಿಮಗೆ ನನ್ನ ನೋವು ಅರ್ಥವಾಗಬಹುದು. ಏಕೆಂದರೆ ನಾನು ಕೂಡ ನಿಮ್ಮೊಳಗೊಬ್ಬಳು.

ನಾನು ಖುದಿರಾಮನನ್ನು  ಅಕ್ಷರಶಃ ತಬ್ಬಿ ಹಿಡಿದಿದ್ದೆ. ನನ್ನ ಮುಂದೆ ಆತ ಏಟು ತಿನ್ನುವುದನ್ನು ನೋಡಲು ನನ್ನಿಂದ ಸಾಧ್ಯವಿರಲಿಲ್ಲ.

ನನ್ನ ದುಪ್ಪಟ ಆಗಲೇ ಕೆಳಗೆ ಬಿದ್ದಿತ್ತು. ಕೆಲವೇ ಕ್ಷಣದಲ್ಲಿ ಅದರಲ್ಲಿ ಒಬ್ಬ ನನ್ನ ಚೂಡಿದಾರ್ ಮೇಲಿನ ಹೊದಿಕೆಯನ್ನು ಕತ್ತಿನ ಭಾಗದಲ್ಲಿ ಹಿಡಿದು ಎಳೆದ. ಅದು ಸಂಪೂರ್ಣ ಹರಿದು ನನ್ನ ಬೆನ್ನು ಬೆತ್ತಲಾಯಿತು. ಅಲ್ಲಿಯವರೆಗೂ ಹಣ ದೋಚುವವರು ಇರಬೇಕೆಂದು ಭಾವಿಸಿದ್ದೆ. ಆ ಕ್ಷಣವೇ ಅವರ ಉದ್ದೇಶ ಅರ್ಥವಾಯಿತು. ಧೈರ್ಯ ಉಡುಗಿ ಹೋಯಿತು. ಯೋಚಿಸುವ ಮೊದಲೇ ಇನ್ನೊಬ್ಬ ನನ್ನ ಬ್ರಾ ಕಿತ್ತೆಸೆದ.

ಪ್ರತಿಕ್ರಿಯಿಸಲೂ ಬಿಡದೆ ಎರಡೂ ಕೈಗಳನ್ನು ಒಬ್ಬ, ಮತ್ತೊಬ್ಬ ಜುಟ್ಟು ಹಿಡಿದು ಬಸ್ಸಿನ ಮಧ್ಯಭಾಗದ ಕೆಳಗೆ ಬೀಳಿಸಿದರು. ತಲೆಗೆ ಪೆಟ್ಟಾಯಿತು. ಆಗ ನನ್ನ ಕಣ್ಣಿಗೆ ಸ್ಪಷ್ಟವಾಗಿ ಕಾಣಿಸಿತು. ಒಬ್ಬ ತನ್ನ ಬಟ್ಟೆ ಕಳಚಿ ಬೆತ್ತಲೆಯಾಗಿ ನಿಂತಿದ್ದ. ಆಕಾಶವೇ ಕಳಚಿ ತಲೆಯ ಮೇಲೆ ಬಿದ್ದಂತಾಯಿತು. ದುಃಖ ಉಮ್ಮಳಿಸಿಬಂತು. ನಾನು ಒಬ್ಬ ಶುಶ್ರೂಷಕಿ. ಆದರೆ ಆ ಕ್ಷಣದಲ್ಲಿ ಬಾಯಿ ತಪ್ಪಿ ಅಣ್ಣಾ ನಾನು ಡಾಕ್ಟರ್ ದಯವಿಟ್ಟು ಏನೂ ಮಾಡಬೇಡಿ ಎಂದು ಗೋಗರೆದೆ. ನಿಮಗೆ ಎಷ್ಟು ಬೇಕಾದರೂ ಹಣ ಕೊಡುತ್ತೇನೆ ಬಿಟ್ಟು ಬಿಡಿ ಎಂದು ಅಂಗಲಾಚಿದೆ. ಅದನ್ನು ಲೆಕ್ಕಿಸದೆ ಆತ ನನ್ನ ಒಳ ಉಡುಪಿನ ಸಮೇತ ಪೈಜಾಮ ಕಿತ್ತೆಸೆದು  ನೇರವಾಗಿ ರಾಕ್ಷಸನಂತೆ ನನ್ನೊಳಗೆ ಪ್ರವೇಶಿಸಿದ. ಕಣ್ಣಿಗೆ ಸೂಜಿ ಚುಚ್ಚಿದಂದಾಯಿತು.

ಇದನ್ನು ನೋಡಿದ ಖುದಿರಾಮ್ ಜೋರಾಗಿ ಕಿರುಚುತ್ತಾ ನಿಂತಿದ್ದ ಒಬ್ಬನಿಗೆ ಹೊಡೆದು ಮುನ್ನುಗ್ಗಿದ. ತಕ್ಷಣ ಇನ್ನೊಬ್ಬ ಕಬ್ಬಿಣದ ರಾಡಿನಿಂದ ಅವನ ತಲೆಗೆ ಹೊಡೆದು ಸೀಟಿನ ಕೆಳಗೆ ತಳ್ಳಿ ಅವನ ಕತ್ತು ಒತ್ತಿ ಹಿಡಿದ.

ನೀವೆಲ್ಲಾ ಭಾವಿಸಿದಂತೆ ಆ ಕ್ಷಣದಲ್ಲಿ ನನಗೆ ಹೆಚ್ಚಿನ ದೈಹಿಕ ನೋವು ಆಗಲಿಲ್ಲ. ಆ ಪರಿಸ್ಥಿತಿಯ ಭೀಕರತೆ ಮತ್ತು ಖುದಿರಾಮನ ತಲೆಯಿಂದ ಚಿಮ್ಮಿದ ರಕ್ತ ನನ್ನ ಮೆದುಳಿನ ಗ್ರಹಿಕೆಯ ಶಕ್ತಿಯನ್ನೇ ಕುಂದಿಸಿತು. ಖುದಿರಾಮ ಆ ನೋವಿನಲ್ಲೂ ಕಿರುಚುತ್ತಿದ್ದ " ನನ್ನನ್ನು ಬೇಕಾದರೆ ಕೊಂದು ಬಿಡಿ. ಅವಳನ್ನು ಮಾತ್ರ ಬಿಟ್ಟು ಬಿಡಿ ಬಿಟ್ಟು ಬಿಡಿ " ಎಂದು ಗೋಗರೆದ. ಅವನ ಧ್ವನಿಯಲ್ಲಿನ ಆಕ್ರಂದನ, ನೋವು, ಕರುಣೆ, ನನ್ನ ಬಗೆಗಿನ ಪ್ರೀತಿ  ಕಂಡು ಆ ಒಂದು ಕ್ಷಣ ನನ್ನ ಬದುಕು ಸಾರ್ಥಕವಾಯಿತು ಎಂದೆನಿಸಿತು.

ಉಳಿದ ಮೂವರೂ ಸರದಿಯ ಮೇಲೆ ಅನುಭವಿಸಿದರು. ಕಬ್ಬಿಣದ. ಕೆಳಗೆ ಸಿಲುಕಿದ ನನ್ನ ಬೆನ್ನಿನಲ್ಲಿ ತೀವ್ರ ಗಾಯವಾಯಿತು. ಓಡುತ್ತಿದ್ದ ಬಸ್ಸು ನಿಂತಿತು. ಬಹುಶಃ ತೀಟೆ ತೀರಿದ ಮೇಲೆ ಬಿಟ್ಟು ಬಿಡಬಹುದೆಂದು ಭಾವಿಸಿದೆ. ಇಲ್ಲ ನನ್ನ ದುರಾದೃಷ್ಟ ಅಲ್ಲಿಗೆ ಮುಗಿಯಲಿಲ್ಲ. ಡ್ರೈವರ್ ನೇರವಾಗಿ ಬಂದವನೇ ನನ್ನ ರಕ್ತಸಿಕ್ತ ದೇಹವನ್ನು ಮತ್ತೆ ಪ್ರವೇಶಿಸಿದ...

ಖುದಿರಾಮ ಸೀಟಿನ ಕೆಳಗೆ ಅರೆ ಪ್ರಜ್ಞಾವಸ್ಥೆಯಲ್ಲಿ ಇದನ್ನೆಲ್ಲಾ ನೋಡುತ್ತಾ ಅಸಹಾಯಕತೆಯಿಂದ ದುಃಖಿಸುತ್ತಿದ್ದ. ಕ್ಷಮಿಸಿ ಕಣ್ಣು ಮಂಜಾಗುತ್ತಿದೆ. ಆಯಾಸವಾಗಿದೆ. ಹೆಚ್ಚಿಗೆ ಹೇಳಲು ಸಾಧ್ಯವಾಗುತ್ತಿಲ್ಲ. ಸ್ವಲ್ಪ ವಿಶ್ರಾಂತಿ ಪಡೆದು ಮುಂದುವರಿಸುತ್ತೇನೆ.

ಆ ಡ್ರೈವರ್ ಅನುಭವಿಸಿ ಮತ್ತೆ ಚಾಲಕನ ಸೀಟಿನತ್ತ ತೆರಳಿದ. ಆಗ ಇದನ್ನೆಲ್ಲಾ ನೋಡುತ್ತಾ ಯಾರಾದರೂ ಬಂದರೆ ಎಚ್ಚರಿಸಲು ಒಬ್ಬ ಹುಡುಗ ಕಾವಲಿನಂತೆ ಕೆಲಸ ಮಾಡುತ್ತಿದ್ದ. ನನ್ನ ತಮ್ಮನಂತೆ ಕಾಣಿಸುತ್ತಿದ್ದ. ಡ್ರೈವರ್ ಹೋಗುವಾಗ ಆ ಹುಡುಗ ಕಣ್ಸನ್ನೆಯಲ್ಲಿ‌ಏನೋ ಕೇಳಿದ. ಆತ ನಗುತ್ತಾ ತಲೆ ಅಲ್ಲಾಡಿಸಿದ. ಆ ಹುಡುಗ ಅತ್ಯುತ್ಸಾಹದಿಂದ ನನ್ನ ಮೇಲೆರಗಿದ. ಯಾಕೋ ಈ ಬಾರಿ ತುಂಬಾ ನೋವಾಯಿತು. ಮೊದಲ ಬಾರಿಗೆ ಸಾವಿನ ಅನುಭವವಾಗತೊಡಗಿತು. ನಾನು ಎಲ್ಲಿದ್ದೇನೆ ಎಂದು ಮರೆತಂತಾಯಿತು.

ಆ ಸಮಯದಲ್ಲಿ ಉಳಿದ ನಾಲ್ವರು ಖುದಿರಾಮನನ್ನು ಕೆಳಕ್ಕೆ ಒತ್ತಿ ಹಿಡಿದು ತಾವು ಕಟ್ಟಿಸಿಕೊಂಡು ಬಂದಿದ್ದ ‌ಬಿರ್ಯಾನಿ ತಿನ್ನುತ್ತಾ ಬಿಯರ್ ಕುಡಿಯುತ್ತಿದ್ದರು.
ಕೆಲವೇ ನಿಮಿಷಗಳು ಮಾತ್ರ. ಆ ರಾಕ್ಷಸರು ಮತ್ತೆ ನನ್ನ ಮೇಲೆ ದಾಳಿ ಪ್ರಾರಂಭಿಸಿದರು. ಈ ಬಾರಿ ಅವರು ಮತ್ತಿನಲ್ಲಿದ್ದರು. ಘನಘೋರ‌ವರ್ತನೆ ತೋರಿದರು. ಹಸಿ ಜೇಡಿ ಮಣ್ಣಿನ ಬೊಂಬೆಯಂತೆ ನನ್ನನ್ನು ಎಳೆದಾಡುತ್ತಾ ತಮಗೆ ಅನುಕೂಲಕರ ರೀತಿಯಲ್ಲಿ ಉಪಯೋಗಿಸಿದರು. ಸಾವು‌ಖಚಿತವಾಯಿತು. ಅದು ಶೀಘ್ರವಾಗಿ ಬರಲೆಂದು ದೇವರಲ್ಲಿ ಪ್ರಾರ್ಥಿಸತೊಡಗಿದೆ. ಈಗಾಗಲೇ ದೈಹಿಕ ನೋವಿನಿಂದ ನನಗೆ ಮುಕ್ತಿ ದೊರೆತಿತ್ತು. ನನ್ನ ಮೆದುಳು ದೇಹದ ಸ್ಪರ್ಶ ಶಕ್ತಿಯನ್ನೇ ಗ್ರಹಿಸುತ್ತಿರಲಿಲ್ಲ. ಹೆಚ್ಚು ಕಡಿಮೆ ಶವವಾಗಿದ್ದೆ. ಆದರೆ ಮನಸ್ಸು ಇನ್ನೂ ಜೀವಂತವಿತ್ತು.

ಬಸ್ಸು ಚಲಿಸುತ್ತಲೇ ಇತ್ತು. ಎಲ್ಲವೂ ಮುಗಿದ ಮೇಲೆ ಅವರು ಮುಂದಿನ ‌ಸೀಟಿನಲ್ಲಿ ಕುಳಿತು ತಮ್ಮ ಕಾರ್ಯಯೋಜನೆಯ ಬಗ್ಗೆ ಮಾತನಾಡುತ್ತಿದ್ದರು.

ಖುದಿರಾಮ ಮೆಲ್ಲಗೆ ತೆವಳುತ್ತಾ ನನ್ನ ಬಳಿ ಬಂದ. ಅವರು ದುರುಗುಟ್ಟಿ ನೋಡಿದರು. ಆದರೆ ಏನೂ ಮಾಡಲಿಲ್ಲ. ನಾನು ಕೀರಲು ಧ್ವನಿಯಲ್ಲಿ ಅವನ ಕಿವಿಯಲ್ಲಿ ಉಸುರಿದೆ.  " ಖುದಿ ನನ್ನನ್ನು ಕ್ಷಮಿಸು. ನನ್ನ ಜೀವನ ಮುಗಿಯಿತು. ಇವರು ನನ್ನನ್ನು ಜೀವಂತ ಬಿಟ್ಟರೆ ಕೆಳಗಿಳಿದು ಇದೇ ಬಸ್ಸಿನ ಚಕ್ರಕ್ಕೆ ತಲೆಕೊಟ್ಟು‌ಸಾಯುತ್ತೇನೆ. ನನ್ನಿಂದ ನಿನಗೂ ತುಂಬಾ ಏಟಾಯಿತು. ಬಹುಶಃ ಇನ್ನು ಅವರು ನಮ್ಮನ್ನು ಬಿಟ್ಟು ಬಿಡಬಹುದು. ನಿನ್ನ ಬದುಕು ಇನ್ನು ಮುಂದಾದರೂ ಸುಖಮಯವಾಗಲಿ " ಎಂದೆ. ತನ್ನ ಕಣ್ಣ ಮುಂದೆಯೇ ಸಾಮೂಹಿಕ ಅತ್ಯಾಚಾರವಾದ ಹೆಣ್ಣುನ್ನು‌ಯಾರು ಮದುವೆಯಾಗುತ್ತಾರೆ.

ಆದರೆ  ಖುದಿರಾಮ ನನ್ನ ಕೈಹಿಡಿದು ಹೇಳಿದ " ನಿನ್ನನ್ನು ಸಾಯಲು ನಾನು ಬಿಡುವುದಿಲ್ಲ. ಏನೇ ಆಗಲಿ ನಾನು ನಿನ್ನನ್ನೇ ಮದುವೆಯಾಗುತ್ತೇನೆ. ನೀನಿಲ್ಲದೆ ನಾನು ಇರುವುದಿಲ್ಲ. ಅವರು ಬಿಟ್ಟ ತಕ್ಷಣ ನಿನ್ನನ್ನು ಒಳ್ಳೆಯ ಆಸ್ಪತ್ರೆಗೆ ಸೇರಿಸುತ್ತೇನೆ. ಗುಣವಾದ ಮೇಲೆ ನಾವು ಇಲ್ಲಿರುವುದು ಬೇಡ. ಯಾವುದಾದರೂ ದೂರದ ರಾಜ್ಯಕ್ಕೆ ಹೋಗಿ ಬಿಡೋಣ. ಕೂಲಿಯಾದರೂ ಮಾಡಿ ನಿನ್ನನ್ನು ಸಾಕುತ್ತೇನೆ. ನೀನು ಯಾವುದೇ ಕಾರಣಕ್ಕೂ ಸಾಯುವ ಮಾತನಾಡಬೇಡ " ಎಂದು ಕೈಮುಗಿದು ಕೇಳಿಕೊಂಡ.

ಸಾವು ಪ್ರೀತಿ ಬದುಕಿನ ನಡುವೆ ಮನಸ್ಸು ಹೊಯ್ದಾಡತೊಡಗಿತು. ಕೇವಲ ಮೂರು ಗಂಟೆಗಳ ಮೊದಲು ಹಕ್ಕಿಯಂತೆ ಸ್ವಚ್ಛಂದವಾಗಿ ಹಾರಾಡುತ್ತಿದ್ದ ಜೋಡಿಗಳು ಈಗ ಸಾವಿನ ನೆರಳಲ್ಲಿ ನರಳುತ್ತಿದ್ದವು. ಆ ನೋವಿನಲ್ಲೂ ಪ್ರೀತಿಯ ಆಳದ ಅನುಭವವನ್ನು ಸವಿಯುತ್ತಿದ್ದೆ.

ಕೆಲವು ನಿಮಿಷಗಳ ನಂತರ ಅವರು ಒಟ್ಟಾಗಿ ಬಂದರು. ಇನ್ನೇನು ಕಾದಿದೆಯೋ ಎಂದು ಭಯವಾಯಿತು. ಅದರಲ್ಲಿ ಒಬ್ಬ ಕಾಲಿನಿಂದ ಖುದಿರಾಮನಿಗೆ ಬಲವಾಗಿ ಒದ್ದು ಈ ವಿಷಯ ಪೋಲಿಸರಿಗೆ ಹೇಳಿದರೆ ನೀವು ಎಲ್ಲಿದ್ದರೂ ಹುಡುಕಿಕೊಂಡು ಬಂದು ಕೊಲ್ಲುತ್ತೇವೆ. ನಾವು ಯಾರಿಗೂ ಹೆದರದ ರೌಡಿಗಳು ಎಂದು ಧಮಕಿ ಹಾಕಿ ಇನ್ನು ಮೇಲೆ ದೆಹಲಿಯಲ್ಲಿ ಕಾಣಿಸಕೂಡದು ಎಂದು ಹೇಳಿ ಎಲ್ಲರೂ ಒಟ್ಟಾಗಿ ನಮ್ಮ ಕಾಲುಗಳನ್ನು ಹಿಡಿದು ಧರಧರನೆ ಎಳೆಯುತ್ತಾ ಡ್ರೈವರ್ ಗೆ ಬಸ್ಸಿನ ವೇಗ ಕಡಿಮೆ ಮಾಡಲು ಹೇಳಿ ಬಾಗಿಲಿನಿಂದ ಆಚೆ ನೂಕಿದರು. ಮೊದಲು ನಾನು ಕೆಳಗೆ ಬಿದ್ದೆ. ತಲೆ ನೆಲಕ್ಕೆ ಬಡಿಯಿತು. ಅಷ್ಟೆ, ಅಲ್ಲಿಂದ ಮುಂದೆ ನಡೆದದ್ದೆಲ್ಲವೂ ನಿಮಗೆ ತಿಳಿದಿದೆ.

ಖುದಿರಾಮ ಪ್ರಜ್ಞೆ ತಪ್ಪಿದ ನನ್ನ ದೇಹವನ್ನು ತನ್ನ ತೋಳಿನಲ್ಲಿ ಎತ್ತಿಕೊಂಡು ಸ್ವತಃ ರಕ್ತ ಸುರಿಯುತ್ತಿದ್ದರು ಸಿಕ್ಕ ಸಿಕ್ಕ ಆಟೋ ನಿಲ್ಲಿಸಲು ಪ್ರಯತ್ನಿಸಿ ಕೊನೆಗೆ ಒಂದು ಆಸ್ಪತ್ರೆಗೆ ಸೇರಿಸಿದ. ಕೆಲ ಗಂಟೆಗಳ ನಂತರ ಡಾಕ್ಟರ್, ಎಷ್ಟೋ ಸಮಯದ ನಂತರ ಪೋಲೀಸ್, ಅನಂತರ ಮಾಧ್ಯಮ, ತದನಂತರ ಸಾರ್ವಜನಿಕರು ಮುಂದೆ ಸರ್ಕಾರ ಕೊನೆಗೆ ಇಡೀ ದೇಶವೇ ನನಗಾಗಿ ಸ್ಪಂದಿಸಿತು.

ನನ್ನಂತ ಸಾಮಾನ್ಯಳ ದೇಹವನ್ನು ಅದೂ ರಾಜಧಾನಿಯ ಆರು ಜನ ಸಾಮೂಹಿಕ ಅತ್ಯಾಚಾರದ ನಂತರ ವಿಶೇಷ ವಿಮಾನದಲ್ಲಿ ಸಿಂಗಪುರಕ್ಕೆ ಸಹ ಕೊಂಡೊಯ್ಯಲಾಯಿತು. ನನ್ನನ್ನು ಉಳಿಸಲು ಸೃಷ್ಟಿಸಿದವನಿಗೂ ಸಾಧ್ಯವಿರಲಿಲ್ಲ ಅಷ್ಟರಮಟ್ಟಿಗೆ ನನ್ನ ದೇಹ ಜರಡಿಯಂತಾಗಿತ್ತು........

ಖುದಿರಾಮ ಕೆಲವು ವರ್ಷಗಳು ನನ್ನದೇ ನೆನಪಿನಲ್ಲಿ ಹುಚ್ಚನಂತಾದ. ಊರಿನಲ್ಲಿ ಖಿನ್ನತೆಯಿಂದ ಬಳಲಿದ. ಇತ್ತೀಚೆಗೆ ಅವರ ಮನೆಯವರು ತುಂಬಾ ಒತ್ತಾಯ ಮಾಡಿ ಒಂದು ಮದುವೆ ಮಾಡಿದರು ಎಂದು ತಿಳಿಯಿತು. ಮನಸ್ಸು ತುಂಬಾ ಭಾರವಾಯಿತು. ಪಾಪ ನಾನು ಇನ್ನೆಂದಿಗೂ ಬರುವುದಿಲ್ಲ ಎಂದು ಅವನಿಗೂ ಅರ್ಥವಾಗಿದೆ. ಅವನಿಗೆ ಒಳ್ಳೆಯದಾಗಲಿ.

ನನ್ನ ಕೋರಿಕೆ ಏನೆಂದರೆ, ಮುಂದಿನ ಜನ್ಮದಲ್ಲಿ ನಾನು ಗಂಡಾಗಿ ಹುಟ್ಟಲು ಆಸೆ ಪಡುತ್ತೇನೆ. ಸಾಕು ಈ ಹೆಣ್ಣು ಜನ್ಮ.......
ಈಗಲೂ ಭಾರತ ಸರ್ಕಾರದ ಮುಖ್ಯ ಘೋಷಣೆ " ಬೇಟಿ ಬಚಾವೋ ಬೇಟಿ ಪಡಾವೋ " ಎಂದಿದೆ ಎಂದಾದರೆ ಮಹಿಳೆಯರ ಸ್ಥಿತಿ ಹೇಗಿರಬೇಡ.....ಇದನ್ನು ನಿಮ್ಮ ವಿವೇಚನೆಗೆ ಬಿಡುತ್ತಾ. ನಿರ್ಭಯ.........
ಲೇಖನ: ವಿವೇಕಾನಂದ. ಎಚ್. ಕೆ. 9844013068..........

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ