ಚಂದ್ರವಳ್ಳಿ ನ್ಯೂಸ್, ಮೈಸೂರು:
"ಬರದ ನೆಪ ಹೇಳಿ ಈ ಬಾರಿ ಸರಳ ದಸರಾ ಮಾಡುವುದಿಲ್ಲ. ಮೈಸೂರು ದಸರಾ ಮೇಲೆ ಇಡೀ ರಾಜ್ಯದ ಪ್ರವಾಸೋದ್ಯಮ ನಿಂತಿದೆ. ಹೀಗಾಗಿ ಸಾಂಪ್ರದಾಯಿಕ ಹಾಗೂ ಅತ್ಯಂತ ವಿಭಿನ್ನವಾಗಿ ಅದ್ಧೂರಿಯಾಗಿ ದಸರಾವನ್ನು ಆಚರಿಸಲಾಗುವುದು" ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಮೈಸೂರಿನ ಓವಲ್ ಗ್ರೌಂಡ್‌ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಿಶ್ವವಿಖ್ಯಾತ ಮೈಸೂರು ದಸರಾ ಆಚರಣೆ ಹಾಗೂ ರಾಜ್ಯ ರಾಜಕೀಯದ ಹಲವು ವಿದ್ಯಮಾನಗಳ ಕುರಿತು ಮುಕ್ತವಾಗಿ ಚರ್ಚಿಸಿದರು.
ದಸರಾ ಮೆರವಣಿಗೆಯ ಸ್ವರೂಪವೇ ಬದಲಾವಣೆ: ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿ ಮೆರವಣಿಗೆಯ ಕುರಿತು ಮಾತನಾಡಿದ ಸಿಎಂ, "ಕಾಲ ಬದಲಾದಂತೆ ದಸರಾ ಮೆರವಣಿಗೆಯ ಸ್ವರೂಪವನ್ನೂ ನಾವು ಬದಲಾಯಿಸುತ್ತಿದ್ದೇವೆ.
ಒಂದೇ ತರದ ಜನಪದ ಕಲಾ ಪ್ರಕಾರಗಳಿಗೆ ಮಾತ್ರ ಅವಕಾಶ ನೀಡದೆ, ಈ ಬಾರಿಯ ಮೆರವಣಿಗೆಯಲ್ಲಿ ಮಿಲಿಟರಿ ಹಾಗೂ ಸೇನಾ ಪಡೆಗಳ ಶಕ್ತಿ ಪ್ರದರ್ಶನ ಇರಲಿದೆ. ಇದರ ಜೊತೆಗೆ ಕನ್ನಡ ಚಿತ್ರರಂಗದ ಪ್ರಸಿದ್ಧ ನಟ-ನಟಿಯರು ಕೂಡ ಮೆರವಣಿಗೆಯಲ್ಲಿ ಸಾಗಲಿದ್ದಾರೆ" ಎಂದರು.
ದಸರಾ ಉದ್ಘಾಟಕರ ಕುರಿತು ಹಲವರ ಜೊತೆ ಚರ್ಚೆ ನಡೆಸಿದ್ದು, ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು.
ಕಂಬಳ ಆಯೋಜನೆಗೆ ಒಲವು: ದಸರಾದಲ್ಲಿ ಕಂಬಳ ಕ್ರೀಡೆ ಆಯೋಜಿಸುವ ಕುರಿತು ಪ್ರತಿಕ್ರಿಯಿಸಿ, "ಕಂಬಳದಿಂದ ಪರಿಸರ ಹಾನಿಯಾಗುತ್ತದೆ ಅಥವಾ ನೀರು ಪೋಲಾಗುತ್ತದೆ ಎಂಬ ಆರೋಪಗಳಲ್ಲಿ ಯಾವುದೇ ಅರ್ಥವಿಲ್ಲ. ಸುಮ್ಮನೆ ಕೆಲವರು ವಿರೋಧ ಮಾಡುತ್ತಿದ್ದಾರೆ.
ಈ ಆಚರಣೆಯ ಕುರಿತು ನಾನು ಯಾವುದೇ ಪ್ರತಿಷ್ಠೆ ತೆಗೆದುಕೊಂಡಿಲ್ಲ, ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುತ್ತೇನೆ" ಎಂದರು.ನಾಗೇಂದ್ರ ನಿರಾಪರಾಧಿ, ಬಿಜೆಪಿ ಬಲಿ ತೆಗೆದುಕೊಂಡಿದೆ.
ಮಾಜಿ ಸಚಿವ ಬಿ. ನಾಗೇಂದ್ರ ರಾಜೀನಾಮೆ ವಿಚಾರವಾಗಿ ಮಾತನಾಡಿ, "ನಾಗೇಂದ್ರ ಯಾವುದೇ ತಪ್ಪು ಮಾಡದಿದ್ದರೂ ಪಕ್ಷದ ಹಿತದೃಷ್ಟಿಯಿಂದ ರಾಜೀನಾಮೆ ನೀಡಿದ್ದಾರೆ. ಆದರೆ ಬಿಜೆಪಿ ಈಗ ನಿರಾಪರಾಧಿಯನ್ನೇ ಬಲಿ ತೆಗೆದುಕೊಂಡು ರಾಜಕೀಯ ಮಾಡುತ್ತಿದೆ. ಅವರ ರಾಜೀನಾಮೆ ನಂತರವೂ ಬಿಜೆಪಿ ಪಾದಯಾತ್ರೆ ಮಾಡುವುದಾದರೆ ಮಾಡಿಕೊಳ್ಳಲಿ" ಎಂದು ತಿರುಗೇಟು ನೀಡಿದರು.
ಕುಮಾರಸ್ವಾಮಿಗೆ ಬಾಯಿ ಚಪಲ, ಅಸೂಯೆ!ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ 'ವಿಧಾನಸೌಧ ಮಾರುತ್ತಾರೆ' ಎಂಬ ಹೇಳಿಕೆಗೆ ಖಾರವಾಗಿ ಉತ್ತರಿಸಿದ ಡಿ.ಕೆ. ಶಿವಕುಮಾರ್, "ಯಾರ‍್ಯಾರು ಏನೇನು ಮಾಡಲು ಹೊರಟಿದ್ದರು ಎಂಬ ಚರಿತ್ರೆ ಬಿಚ್ಚಿಟ್ಟರೆ ಎಲ್ಲವೂ ಗೊತ್ತಾಗುತ್ತದೆ.
ಕುಮಾರಸ್ವಾಮಿಗೆ ಬಾಯಿ ಚಪಲ, ಮಾತನಾಡಿ ಖುಷಿಪಡಲಿ. ನಾನು ಮುಖ್ಯಮಂತ್ರಿಯಾಗಿರುವುದನ್ನು ಕಂಡು ಕುಮಾರಸ್ವಾಮಿ ಹಾಗೂ ಇಡೀ ಎನ್‌ಡಿಎ ಒಕ್ಕೂಟಕ್ಕೆ ಅಸೂಯೆಯಾಗಿದೆ. ಅವರ ಟೀಕೆಗಳಿಗೆ ತಲೆಕೆಡಿಸಿಕೊಳ್ಳದೆ ನಾನು ನನ್ನ ಕೆಲಸ ಮಾಡುತ್ತೇನೆ" ಎಂದರು.
ಹನೂರು ಶೂಟೌಟ್ ಸಿಒಡಿಗೆ ವಹಿಸಿ ತನಿಖೆ:ಹನೂರು ಶೂಟೌಟ್ ಪ್ರಕರಣದ ಕುರಿತು ಸ್ಪಷ್ಟನೆ ನೀಡಿದ ಸಿಎಂ, "ತನಿಖಾ ವರದಿ ಕೈಸೇರಿದ ತಕ್ಷಣವೇ ಪ್ರಕರಣವನ್ನು ಸಿಒಡಿಗೆ ವಹಿಸಿದ್ದೇವೆ. ವರದಿಯಲ್ಲಿ ಹತ್ತಿರದಿಂದ ಶೂಟ್ ಮಾಡಿರುವುದು ಹಾಗೂ ಕಾಡಿಗೆ ಏತಕ್ಕಾಗಿ ಹೋದರು ಎಂಬ ಹಲವು ಪ್ರಮುಖ ಅಂಶಗಳಿವೆ. ತನಿಖೆ ಪೂರ್ಣಗೊಂಡ ಬಳಿಕ ಸಂಪೂರ್ಣ ಸತ್ಯಾಸತ್ಯತೆ ಬಹಿರಂಗವಾಗಲಿದೆ" ಎಂದರು.
‘ಗ್ರೇಟರ್ ಮೈಸೂರು’ ಭರವಸೆ ಈಡೇರಿಸುವೆ:ಮೈಸೂರಿನ ಅಭಿವೃದ್ಧಿಯ ಕುರಿತು ಮಾತನಾಡುತ್ತಾ, "ಕಾವೇರಿ ನೀರು ಹಂಚಿಕೆ ಸಮಸ್ಯೆಯಿದ್ದ ಕಾರಣ ಈ ಕಡೆ ಗಮನ ಹರಿಸಲು ಸಾಧ್ಯವಾಗಿರಲಿಲ್ಲ. ಮೈಸೂರು ಅತ್ಯಂತ ಅಚ್ಚುಕಟ್ಟಾದ ನಗರ. ಸಿದ್ದರಾಮಯ್ಯ ಅವರು ನೀಡಿದ್ದ ‘ಗ್ರೇಟರ್ ಮೈಸೂರು’ ಭರವಸೆಯನ್ನು ಈಡೇರಿಸುವುದು ನನ್ನ ಜವಾಬ್ದಾರಿ. ಶೀಘ್ರದಲ್ಲೇ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆ ಕರೆದು ಭವಿಷ್ಯದ ಯೋಜನೆಗಳ ಬಗ್ಗೆ ಚರ್ಚಿಸುತ್ತೇನೆ" ಎಂದು ತಿಳಿಸಿದರು.




