ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜಧಾನಿ ಬೆಂಗಳೂರಿನ ಉತ್ತರ ವಿಭಾಗದ ಡಿಸಿಪಿ ನೇಮಗೌಡ ಸೇರಿದಂತೆ ಕರ್ತವ್ಯನಿರತ ಪೊಲೀಸ್ ಅಧಿಕಾರಿಗಳ ಮೇಲೆ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಹಾಗೂ ಆತನ ಬೆಂಬಲಿಗರು ಗೂಂಡಾಗಳಂತೆ ದಾಳಿ ನಡೆಸಿ, ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಜೆಡಿಎಸ್ ಘಟಕವು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.
ಘಟನೆಗೆ ಸಂಬಂಧಿಸಿದಂತೆ ವಿಡಿಯೋ ಸಾಕ್ಷ್ಯಾಧಾರಗಳಿದ್ದರೂ ಹಲ್ಲೆಕೋರರ ವಿರುದ್ಧ ಇದುವರೆಗೆ ಎಫ್‌ಐಆರ್ (FIR) ದಾಖಲಿಸಿಲ್ಲ ಹಾಗೂ ಬಂಧನ ಕೂಡ ಮಾಡಿಲ್ಲ ಎಂದು ಜೆಡಿಎಸ್ ತನ್ನ ಅಧಿಕೃತ ಹೇಳಿಕೆಯಲ್ಲಿ ಪ್ರಶ್ನಿಸಿದೆ. "ಕರ್ತವ್ಯನಿರತ ಐಪಿಎಸ್ ಅಧಿಕಾರಿಗೆ ಭದ್ರತೆ ಇಲ್ಲದಂತಾಗಿದ್ದು, ಯಾರ ರಕ್ಷಣೆಗಾಗಿ ಪೊಲೀಸರ ಕೈ ಕಟ್ಟಹಾಕಲಾಗಿದೆ?" ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ಜೆಡಿಎಸ್ ಎತ್ತಿರುವ ಪ್ರಮುಖ ಪ್ರಶ್ನೆಗಳು:
ನೀವು ರಾಜ್ಯಕ್ಕೋ ಅಥವಾ ವಿಪಕ್ಷಗಳಿಗೋ ಗೃಹ ಸಚಿವರು?
ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಕಿಡಿಕಾರಿರುವ ಜೆಡಿಎಸ್, "ಕಾನೂನು ಎಲ್ಲರಿಗೂ ಒಂದೇ ಆಗಿದ್ದರೆ, ಸ್ವಪಕ್ಷೀಯ ಎಂಬ ಕಾರಣಕ್ಕೆ ಗೂಂಡಾಗಿರಿ ಮಾಡಿದವರನ್ನು ರಕ್ಷಿಸಲು ಪೊಲೀಸ್ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದೀರಾ?" ಎಂದು ನೇರವಾಗಿ ಪ್ರಶ್ನಿಸಿದೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪಂಥಾಹ್ವಾನ:
"ನಿಮ್ಮ ಪೌರುಷ ಕೇವಲ ಅಮಾಯಕರು ಮತ್ತು ವಿರೋಧ ಪಕ್ಷಗಳ ಮುಖಂಡರ ಮೇಲೆ ಮಾತ್ರವೇ? ಆರಕ್ಷಕರ ಮೇಲೆಯೇ ಕೈಮಾಡಿದ ಕಾಂಗ್ರೆಸ್ ಪುಂಡರ ವಿರುದ್ಧ ಕ್ರಮ ಕೈಗೊಳ್ಳಲು ಹಿಂಜರಿಯುತ್ತಿರುವುದೇಕೆ?" ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಜೆಡಿಎಸ್ ತರಾಟೆಗೆ ತೆಗೆದುಕೊಂಡಿದೆ.
ಪೊಲೀಸ್ ಇಲಾಖೆಯ ಮೇಲೆ ನಡೆದಿರುವ ಈ ಗೂಂಡಾಗಿರಿಯನ್ನು ಕಟ್ಟುನಿಟ್ಟಾಗಿ ಖಂಡಿಸಿರುವ ಜೆಡಿಎಸ್, ಯಾವುದೇ ಒತ್ತಡಕ್ಕೆ ಮಣಿಯದೆ ಹಲ್ಲೆ ನಡೆಸಿದ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಹಾಗೂ ಆತನ ಗ್ಯಾಂಗ್ ಅನ್ನು ಕೂಡಲೇ ಬಂಧಿಸಿ ಜೈಲಿಗಟ್ಟಬೇಕೆಂದು ಆಗ್ರಹಿಸಿದೆ.




