ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಿಲಿಕಾನ್ ಸಿಟಿಯ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯೊಂದರ ಶೌಚಾಲಯದಲ್ಲಿ ಗರ್ಭಿಣಿ ಮಹಿಳೆಯೊಬ್ಬರ ಖಾಸಗಿ ದೃಶ್ಯಗಳನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಲು ಯತ್ನಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಸಂತ್ರಸ್ತ ಮಹಿಳೆ ನೀಡಿದ ದೂರಿನನ್ವಯ ಆಸ್ಪತ್ರೆಯ ಹೌಸ್‌ಕೀಪಿಂಗ್ ಸಿಬ್ಬಂದಿ ಹಾಗೂ ಆಸ್ಪತ್ರೆ ಆಡಳಿತ ಮಂಡಳಿಯ ವಿರುದ್ಧ ವರ್ತೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಘಟನೆಯ ಸಂಪೂರ್ಣ ವಿವರ ಹಾಗೂ ನಗರದಲ್ಲಿ ನಡೆದಿರುವ ಮತ್ತೊಂದು ಗಂಭೀರ ಅಪರಾಧ ಪ್ರಕರಣದ ಮಾಹಿತಿ ಇಲ್ಲಿದೆ.
ಆಸ್ಪತ್ರೆ ಶೌಚಾಲಯದಲ್ಲಿ ವಿಕೃತಿ: ಏನಿದು ಘಟನೆ?
ಮೇ 21ರಂದು ಮಧ್ಯಾಹ್ನ ಗರ್ಭಿಣಿ ಮಹಿಳೆಯೊಬ್ಬರು ಸರ್ಜಾಪುರ ರಸ್ತೆಯಲ್ಲಿರುವ ಪ್ರಮುಖ ಖಾಸಗಿ ಆಸ್ಪತ್ರೆಗೆ ತಪಾಸಣೆಗಾಗಿ ಭೇಟಿ ನೀಡಿದ್ದರು. ಈ ವೇಳೆ ಅವರು ಆಸ್ಪತ್ರೆಯ ಶೌಚಾಲಯಕ್ಕೆ ಹೋದಾಗ, ಅಲ್ಲಿನ ಹೌಸ್‌ಕೀಪಿಂಗ್ ಸಿಬ್ಬಂದಿ ಕೃಷ್ಣ ರಾಮ್ ಪಾಂಗಿಂಗ್ ಎಂಬಾತನ ನಡವಳಿಕೆ ಸಂಶಯಾಸ್ಪದವಾಗಿ ಕಂಡುಬಂದಿದೆ.
ಸಿಕ್ಕಿಬಿದ್ದ ಆರೋಪಿ: ಆರೋಪಿ ಕೃಷ್ಣ ರಾಮ್ ತನ್ನ ಮೊಬೈಲ್ ಫೋನ್ ಬಳಸಿ ಶೌಚಾಲಯದ ಒಳಗಿನ ದೃಶ್ಯಗಳನ್ನು ಕದ್ದು ಚಿತ್ರೀಕರಿಸುತ್ತಿರುವುದನ್ನು ಮಹಿಳೆ ತಕ್ಷಣವೇ ಪತ್ತೆ ಹಚ್ಚಿದ್ದಾರೆ. ಮಹಿಳೆ ಆತನನ್ನು ಜೋರಾಗಿ ಪ್ರಶ್ನಿಸುತ್ತಿದ್ದಂತೆ ಗಾಬರಿಗೊಂಡ ಆರೋಪಿ ಅಲ್ಲಿಂದ ಓಡಿಹೋಗಲು ಯತ್ನಿಸಿದ್ದಾನೆ.
ಮೊಬೈಲ್‌ನಲ್ಲಿ ಬೇರೆ ಮಹಿಳೆಯರ ವಿಡಿಯೋ?: ತಕ್ಷಣವೇ ಮಹಿಳೆ ಆಸ್ಪತ್ರೆಯ ಆಡಳಿತ ಮಂಡಳಿಗೆ ದೂರು ನೀಡಿದ್ದಾರೆ. ಆಸ್ಪತ್ರೆಯ ಸಿಬ್ಬಂದಿ ಆರೋಪಿಯ ಮೊಬೈಲ್ ಪರಿಶೀಲಿಸಿದಾಗ, ಅದರಲ್ಲಿ ಈಗಾಗಲೇ ಹಲವು ಮಹಿಳೆಯರ ಫೋಟೋ ಮತ್ತು ವಿಡಿಯೋಗಳು ಇದ್ದವು ಎಂದು ನೊಂದ ಮಹಿಳೆ ತನ್ನ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಆಸ್ಪತ್ರೆ ಮಂಡಳಿ ಹಾಗೂ ಆರೋಪಿ ವಿರುದ್ಧ FIR-
ಈ ಘಟನೆಯಿಂದ ತೀವ್ರ ಆಘಾತಕ್ಕೊಳಗಾದ ಗರ್ಭಿಣಿ, ವರ್ತೂರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಸದ್ಯ ಪೊಲೀಸರು ಆರೋಪಿ ಕೃಷ್ಣ ರಾಮ್ ಹಾಗೂ ನಿರ್ಲಕ್ಷ್ಯ ವಹಿಸಿದ ಆಸ್ಪತ್ರೆ ಆಡಳಿತ ಮಂಡಳಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಕಾಯ್ದೆಯ ಸೆಕ್ಷನ್ 77, 79, 62 ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ (IT Act) ಸೆಕ್ಷನ್ 66E ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಡಿಸಿಪಿ ಸೈದುಲು ಅಡಾವತ್ ಅವರ ಹೇಳಿಕೆ: "ಪ್ರಾಥಮಿಕ ತನಿಖೆಯ ವೇಳೆ ಆರೋಪಿಯ ಮೊಬೈಲ್‌ನಲ್ಲಿ ಸದ್ಯಕ್ಕೆ ಯಾವುದೇ ಆಕ್ಷೇಪಾರ್ಹ ದೃಶ್ಯಗಳು ಪತ್ತೆಯಾಗಿಲ್ಲ. ಆದರೆ ಆರೋಪಿ ಸಾಕ್ಷ್ಯ ನಾಶಪಡಿಸಲು ಡೇಟಾವನ್ನು ಡಿಲೀಟ್ ಮಾಡಿರುವ ಸಾಧ್ಯತೆ ಇದೆ. ಹೀಗಾಗಿ ಮೊಬೈಲ್ ಫೋನ್ ಅನ್ನು ವಶಕ್ಕೆ ಪಡೆದು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ತನಿಖೆಗೆ ಹಾಜರಾಗುವಂತೆ ಆರೋಪಿ ಹಾಗೂ ಆಸ್ಪತ್ರೆ ಮಂಡಳಿಗೆ ನೋಟಿಸ್ ನೀಡಲಾಗಿದೆ" ಎಂದು ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ತಿಳಿಸಿದ್ದಾರೆ.



