ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಡತನ ಶಾಪವಲ್ಲ, ಅದು ವರ! - ನೆಪೋಲಿಯನ್ ಬೋನಪಾರ್ಟೆ ಎಂಬ ಬೆಂಕಿಯ ಕಥೆ*
ಬಡತನವನ್ನು ನೆಪ ಮಾಡಿಕೊಂಡು ಜೀವನದಲ್ಲಿ ಹಿಂದೆ ಸರಿಯುವ ಪ್ರತಿಯೊಬ್ಬ ವಿದ್ಯಾರ್ಥಿಗಳು ಯುವಕರು ಒಮ್ಮೆ ನೆಪೋಲಿಯನ್ ಬೋನಪಾರ್ಟೆ ಜೀವನವನ್ನು ಓದಬೇಕು.
ಆತನೇ ಒಮ್ಮೆ ಬರೆದಿದ್ದ "ನಾನು ಹುಟ್ಟುವಾಗ ನನ್ನ ದೇಶ ಸಾಯುತ್ತಿತ್ತು."
1769ರ ಆಗಸ್ಟ್ 15. ಮೆಡಿಟರೇನಿಯನ್ ಸಮುದ್ರದ ಕಾರ್ಸಿಕಾ ದ್ವೀಪದ ಅಜಾಕ್ಸಿಯೋ ಎಂಬ ಪುಟ್ಟ ಪಟ್ಟಣ. ಫ್ರಾನ್ಸ್ ಕಾರ್ಸಿಕಾವನ್ನು ತನ್ನ ವಶಕ್ಕೆ ತೆಗೆದುಕೊಂಡು, ಅಲ್ಲಿನ ಸ್ವಾತಂತ್ರ್ಯದ ಕಿಡಿಯನ್ನು ಆರಿಸಿದ ವರ್ಷವೇ ಅದು. ಸಾಯುತ್ತಿದ್ದ ದೇಶದಲ್ಲಿ, ಬಡತನದ ಮನೆಯಲ್ಲಿ ಹುಟ್ಟಿದ ಆ ಮಗು ಮುಂದೆ ಫ್ರಾನ್ಸನ್ನು ಆಳಿದ್ದು ಇತಿಹಾಸದ ದೊಡ್ಡ ತಿರುವು.
ತಂದೆ ಕಾರ್ಲೋ ಬೋನಪಾರ್ಟೆ, ತಾಯಿ ಲೆಟಿಜಿಯಾ ರಮೊಲಿನೊ. ಈ ದಂಪತಿಗಳಿಗೆ 13 ಮಕ್ಕಳು. ಬದುಕುಳಿದವರು 8. ಅದರಲ್ಲಿ ನೆಪೋಲಿಯನ್ ಎರಡನೆಯವನು. ತಂದೆ ವೃತ್ತಿಯಲ್ಲಿ ವಕೀಲ, ಆದರೆ ಪ್ರವೃತ್ತಿಯಲ್ಲಿ ವಿಲಾಸಿ, ಜವಾಬ್ದಾರಿ ಇಲ್ಲದ ಮನುಷ್ಯ. ತನ್ನ ಜೀವನದ ದೊಡ್ಡ ಸಾಧನೆ 13 ಮಕ್ಕಳಿಗೆ ಜನ್ಮ ಕೊಟ್ಟದ್ದು ಎಂಬಂತೆ ಬದುಕಿದವನು. ಇಡೀ ಸಂಸಾರದ ಹೊರೆ, ಮಕ್ಕಳ ಹಸಿವು, ಶಿಕ್ಷಣ - ಎಲ್ಲವೂ ಆ ಕಲ್ಲಿನಂತಹ ತಾಯಿ ಲೆಟಿಜಿಯಾ ಹೆಗಲ ಮೇಲೆ.
ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಒಂದು ಹೊತ್ತಿನ ಊಟಕ್ಕೂ ಪರದಾಟ.
1. ಭಯವೆಂದರೇನು ಎಂದು ಕೇಳಿದ ಬಾಲಕ
ನೆಪೋಲಿಯನ್ ಬಾಲ್ಯದ ಒಂದು ಘಟನೆ ಅವನ ಇಡೀ ವ್ಯಕ್ತಿತ್ವವನ್ನು ಪರಿಚಯಿಸುತ್ತದೆ. ಒಮ್ಮೆ ಮಧ್ಯರಾತ್ರಿ ಮನೆಯಲ್ಲಿ ಚಿಕ್ಕ ಹುಡುಗ ನೆಪೋಲಿಯನ್ ಕಾಣಲಿಲ್ಲ. ತಾಯಿ ಲೆಟಿಜಿಯಾ ಗಾಬರಿಗೊಂಡು ಇಡೀ ರಾತ್ರಿ ಮನೆ, ಬೀದಿ, ಇಡೀ ಹಳ್ಳಿಯನ್ನೇ ಹುಡುಕಿದಳು. ಎಲ್ಲೂ ಇಲ್ಲ. ಆತಂಕ, ಅಳು, ಪ್ರಾರ್ಥನೆ.
ಬೆಳಗ್ಗೆ ದೂರದ ಕಾಡಿನಲ್ಲಿರುವ ಒಂದು ಹಳೆಯ ಕೊಳದ ಬಳಿ ಅವನು ಸಿಕ್ಕಿದ. ಆ ಕೊಳದಲ್ಲಿ ಒಂಟಿಯಾಗಿ, ತನ್ನದೇ ಲೋಕದಲ್ಲಿ ಕಲ್ಲುಗಳನ್ನು ಎಸೆಯುತ್ತಾ, ದೋಣಿಗಳಂತೆ ಮಾಡುತ್ತಾ ಆಟವಾಡುತ್ತಿದ್ದ.
ಸಿಟ್ಟು ಮತ್ತು ಪ್ರೀತಿಯಿಂದ ತಾಯಿ ಅವನನ್ನು ಅಪ್ಪಿಕೊಂಡು ಕೇಳಿದಳು "ಮಗೂ, ಇಡೀ ರಾತ್ರಿ ಈ ಕತ್ತಲಲ್ಲಿ, ಈ ಕಾಡಿನಲ್ಲಿ ಒಂಟಿಯಾಗಿ ಇದ್ದೆ, ನಿನಗೆ ಭಯವಾಗಲಿಲ್ಲವೇ?".
ಆ ಪುಟ್ಟ ಹುಡುಗ ತಾಯಿಯ ಮುಖವನ್ನೇ ನೋಡಿ ಮುಗ್ಧವಾಗಿ ಮರುಪ್ರಶ್ನೆ ಹಾಕಿದನಂತೆ "ಅಮ್ಮಾ, ಭಯ ಎಂದರೇನು?".
ಅವನ ಶಬ್ದಕೋಶದಲ್ಲಿ ಭಯ ಎಂಬ ಪದವೇ ಇರಲಿಲ್ಲ. ಸಾಧಕರಿಗೆ ಭಯ ಎಂಬುದು ಇರುವುದಿಲ್ಲ, ಅವರು ಭಯವನ್ನೇ ಹೆದರಿಸುತ್ತಾರೆ. ಕಾರ್ಸಿಕಾದ ಆ ಕತ್ತಲ ಕಾಡು ಅವನ ಮೊದಲ ಯುದ್ಧಭೂಮಿಯಾಗಿತ್ತು, ಅಲ್ಲಿಯೇ ಅವನು ಭಯವನ್ನು ಗೆದ್ದಿದ್ದ.
2. ಹಸಿವನ್ನು ಗೆದ್ದ ಹಠ
ಚಿಕ್ಕ ವಯಸ್ಸಿನಲ್ಲೇ ತಾಯಿಗೆ ಸಹಾಯ ಮಾಡಲು ಕೆಲಸಕ್ಕೆ ಸೇರಿದಾಗ ಅಲ್ಲಿ ಸಿಗುತ್ತಿದ್ದ ಸಂಬಳ ಒಂದು ಹೊತ್ತಿನ ಊಟಕ್ಕೂ ಸಾಲುತ್ತಿರಲಿಲ್ಲ. ಆ ಕಾಲದಲ್ಲಿ ಅವನು ತಾಯಿಗೆ ಬರೆದ ಪತ್ರ ಇಂದಿಗೂ ಕಣ್ಣೀರು ತರಿಸುತ್ತದೆ.
"ಅಮ್ಮಾ, ನಾನು ಬೆಳಗ್ಗೆ ಮತ್ತು ರಾತ್ರಿ ಊಟ ಮಾಡುವುದಿಲ್ಲ, ಮಧ್ಯಾಹ್ನ ಮಾತ್ರ ಮಾಡುತ್ತೇನೆ."
ಹಸಿವು ಅವನಿಗೆ ಶತ್ರುವಾಗಲಿಲ್ಲ, ಗುರುವಾಯಿತು. ಹಸಿವು ಅವನಿಗೆ ಎರಡು ಪಾಠ ಕಲಿಸಿತು ಸಹನೆ ಮತ್ತು ಹಠ.
3. ಅವಮಾನಗಳೇ ಅವನ ಶಾಲೆ
ಬಡ ಕಾರ್ಸಿಕಾ ಹುಡುಗನಾಗಿ ಫ್ರಾನ್ಸಿನ ಬ್ರಿಯೆನ್ ಮಿಲಿಟರಿ ಶಾಲೆಗೆ ಹೋದಾಗ ಅಲ್ಲಿ ಕಾದಿದ್ದು ನರಕ. ಎಲ್ಲರೂ ಶ್ರೀಮಂತ ಫ್ರೆಂಚ್ ಮಕ್ಕಳು. ಅವರು ಅವನ ಹಳೆಯ ಬಟ್ಟೆ, ಅವನ ಕಾರ್ಸಿಕಾ ಉಚ್ಚಾರಣೆ, ಅವನ ಖಾಲಿ ಜೇಬನ್ನು ನೋಡಿ "ಈ ಕಾರ್ಸಿಕಾ ಬಡವ" ಎಂದು ಅಪಹಾಸ್ಯ ಮಾಡುತ್ತಿದ್ದರು.
ನೆಪೋಲಿಯನ್ ಜಗಳ ಮಾಡಲಿಲ್ಲ. ಅವನು ಮೂಲೆಯಲ್ಲಿ ಕುಳಿತು ಪುಸ್ತಕಗಳನ್ನು ಓದತೊಡಗಿದ. ಸ್ನೇಹಿತರಿಲ್ಲದ ಅವನಿಗೆ ಅಲೆಕ್ಸಾಂಡರ್, ಜೂಲಿಯಸ್ ಸೀಸರ್, ಹ್ಯಾನಿಬಲ್ ಮಹಾವೀರರೇ ಸ್ನೇಹಿತರಾದರು. ಗ್ರಂಥಾಲಯದ ಮೂಲೆಯಲ್ಲಿ ಹಿಮದಂತೆ ಕುಳಿತುಕೊಳ್ಳುತ್ತಿದ್ದ ಆ ಹುಡುಗನೊಳಗೆ ಜ್ವಾಲಾಮುಖಿಯೊಂದು ತಯಾರಾಗುತ್ತಿದೆ ಎಂದು ಯಾರಿಗೂ ಗೊತ್ತಿರಲಿಲ್ಲ.
ಬಡತನದಿಂದ ಸಿಂಹಾಸನಕ್ಕೆ
ಫ್ರೆಂಚ್ ಕ್ರಾಂತಿಯ ರಕ್ತಸಿಕ್ತ ದಿನಗಳಲ್ಲಿ ಅವನಿಗೆ ಅವಕಾಶ ಸಿಕ್ಕಿತು. 24ನೇ ವಯಸ್ಸಿಗೆ ಸೇನಾಪತಿ, 30ನೇ ವಯಸ್ಸಿಗೆ ಫ್ರಾನ್ಸಿನ ಸರ್ವಾಧಿಕಾರಿ.
ಒಂದು ಹೊತ್ತು ಊಟಕ್ಕಾಗಿ ಪರದಾಡಿದ ಹುಡುಗ 1804ರ ಡಿಸೆಂಬರ್ 2ರಂದು ಪ್ಯಾರಿಸ್‌ನ ನೊಟ್ರೆಡಾಮ್ ಚರ್ಚ್‌ನಲ್ಲಿ ಯಾರೂ ನೀಡದ ಕಿರೀಟವನ್ನು ತನ್ನ ಕೈಯಾರೆ ತಾನೇ ಎತ್ತಿ ಧರಿಸಿದ. ಪೋಪ್ ಕೈಯಿಂದ ಕಿರೀಟ ಪಡೆಯಲು ನಿರಾಕರಿಸಿದ. ಅದರ ಅರ್ಥ ಒಂದೇ "ನನ್ನ ಹಣೆಬರಹವನ್ನು ನಾನೇ ಬರೆಯುತ್ತೇನೆ, ದೇವರೂ ಅಲ್ಲ, ಪೋಪ್ ಕೂಡ ಅಲ್ಲ."
ವಾಟರ್ಲೂನಲ್ಲಿ ಸೋತು ಸೇಂಟ್ ಹೆಲೆನಾ ದ್ವೀಪದಲ್ಲಿ ಸೆರೆಯಾಳಾಗಿ ಸತ್ತರೂ, ಅವನು ಸತ್ತಾಗಲೂ ಚಕ್ರವರ್ತಿಯಾಗಿಯೇ ಸತ್ತ.
ಆ ಕಾಡಿನ ಕೊಳದಲ್ಲಿ ಮಧ್ಯರಾತ್ರಿ ಒಂಟಿಯಾಗಿ ಆಟವಾಡಿದ ಹುಡುಗನಿಗೆ ಭಯ ಗೊತ್ತಿರಲಿಲ್ಲ. ಅದಕ್ಕೇ ಜಗತ್ತು ಅವನಿಗೆ ಹೆದರಿತು.
ಬಡತನದಲ್ಲಿ ಹುಟ್ಟುವುದು ನಿನ್ನ ತಪ್ಪಲ್ಲ, ಬಡತನದಲ್ಲೇ ಸಾಯುವುದು ನಿನ್ನ ಆಯ್ಕೆ.
ಬಡತನವನ್ನು ನೆಪ ಹೇಳಬೇಡಿ. ಬಡತನವನ್ನೇ ದಾರಿ ಮಾಡಿಕೊಳ್ಳಿ. ಮಧ್ಯರಾತ್ರಿಯ ಕತ್ತಲ ಕಾಡಿನಲ್ಲಿ ನಿನಗೆ ಭಯವಾಗುತ್ತಿದೆಯೇ? ಹಾಗಾದರೆ ನೆಪೋಲಿಯನ್ ಹಾಗೆ ಕೇಳಿಕೋ "ಭಯ ಎಂದರೇನು?".
ಲೇಖನ: ಬನ್ನಿಹಟ್ಟಿ ಮಲ್ಲೇಶ್, ಉಪನ್ಯಾಸಕರು, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು, ಚಿತ್ರದುರ್ಗ.




