ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರು ನಗರ ರೈಲ್ವೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರತರಾಗಿದ್ದ ಗರ್ಭಿಣಿ ಮಹಿಳಾ ಪೊಲೀಸ್ ಕಾನ್ಸ್‌ಸ್ಟೇಬಲ್ ಮೇಲೆ ಪಾನಮತ್ತ ಕಿಡಿಗೇಡಿಯೊಬ್ಬ ಕಬ್ಬಿಣದ ರಾಡ್‌ನಿಂದ ಭೀಕರವಾಗಿ ಹಲ್ಲೆ ನಡೆಸಿರುವ ದಾರುಣ ಘಟನೆ ನಡೆದಿದೆ.
ದಾಳಿಗೊಳಗಾದ ಕಾನ್ಸ್‌ಸ್ಟೇಬಲ್ ಶಿಲ್ಪಾ ಡಿ. ನೀಡಿದ ದೂರಿನ ಆಧಾರದ ಮೇಲೆ ಸದ್ಯ ಆರೋಪಿ ಗಜೇಂದ್ರ ಎಂಬುವವನನ್ನು ಪೊಲೀಸರು ಬಂಧಿಸಿದ್ದಾರೆ.
ದೂರು ಪಡೆಯಲು 10 ನಿಮಿಷ ಕಾಯಿ ಎಂದಿದ್ದಕ್ಕೆ ಮಾರಣಾಂತಿಕ ಹಲ್ಲೆ:
ಆಗಸ್ಟ್ 25ರಂದು ರಾತ್ರಿ ಪಾಳಿಯ ಸೆಂಟ್ರಿ ಡ್ಯೂಟಿಯಲ್ಲಿದ್ದ ಶಿಲ್ಪಾ ಅವರಿಗೆ ಆ.26ರ ಬೆಳಗಿನ ಜಾವ 5.10ರ ಸುಮಾರಿಗೆ ಠಾಣೆಗೆ ಬಂದ ಒಡಿಶಾ ಮೂಲದ ಗಜೇಂದ್ರ, ರೈಲ್ವೆ ಪ್ಲಾಟ್‌ಫಾರ್ಮ್ 5ರಲ್ಲಿ ತನ್ನ ಮೊಬೈಲ್ ಕಳವಾಗಿದೆ ಎಂದು ತಿಳಿಸಿದ್ದ. ಆ ವೇಳೆ ಠಾಣಾಧಿಕಾರಿಗಳು ವಿಶ್ರಾಂತಿಯಲ್ಲಿದ್ದು, 10 ನಿಮಿಷ ಕಾಯುವಂತೆ ಶಿಲ್ಪಾ ತಿಳಿಸಿದ್ದಾರೆ. ಇದರಿಂದ ಕೋಪಗೊಂಡ ಗಜೇಂದ್ರ, "ದೂರು ತೆಗೆದುಕೊಳ್ಳದಿದ್ದರೆ ಕೊಲೆ ಮಾಡುತ್ತೇನೆ" ಎಂದು ಬೆದರಿಕೆ ಹಾಕಿ, ಹಿಂದಿಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಬಳಿಕ ಅಲ್ಲೇ ಇದ್ದ ಬ್ಯಾರಿಕೇಡ್ ವ್ಹೀಲ್‌ನ ಕಬ್ಬಿಣದ ರಾಡ್‌ನಿಂದ ಗರ್ಭಿಣಿ ಕಾನ್ಸ್‌ಸ್ಟೇಬಲ್ ತಲೆಗೆ 7 ಬಾರಿ ಸತತವಾಗಿ ಹೊಡೆದು ಗಂಭೀರ ಗಾಯಗೊಳಿಸಿ ಪರಾರಿಯಾಗಿದ್ದ.
ಮದ್ಯದ ನಶೆಯಲ್ಲಿ ಕೃತ್ಯ:
ಹಲ್ಲೆಯಿಂದ ತೀವ್ರ ಗಾಯಗೊಂಡ ಶಿಲ್ಪಾ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಬಗ್ಗೆ ಪ್ರತಿಕ್ರಿಯಿಸಿದ ರೈಲ್ವೆ ಎಸ್ಪಿ ಸಾರಾ ಫಾತಿಮಾ, "ಚೆನ್ನೈನಲ್ಲಿ ಗಾರೆ ಕೆಲಸ ಮಾಡುತ್ತಿದ್ದ ಆರೋಪಿ ಕೃತ್ಯದ ವೇಳೆ ಪಾನಮತ್ತನಾಗಿದ್ದ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಆತನ ವಿರುದ್ಧ ಕೊಲೆಯತ್ನ ಹಾಗೂ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ," ಎಂದು ಮಾಹಿತಿ ನೀಡಿದ್ದಾರೆ.
ಮೇಲಧಿಕಾರಿಗಳ ವಿರುದ್ಧ ಆಕ್ರೋಶ: ವಿಡಿಯೋ ವೈರಲ್
ಗರ್ಭಿಣಿಯಾಗಿದ್ದ ಶಿಲ್ಪಾ ಅವರು ಹಲವು ಬಾರಿ ಹಗಲು ಪಾಳಿಯ (ಡೇ ಡ್ಯೂಟಿ) ಕರ್ತವ್ಯಕ್ಕೆ ನಿಯೋಜಿಸುವಂತೆ ಠಾಣೆಯ ಇನ್‌ಸ್ಪೆಕ್ಟರ್ ಕಾಂತರಾಜ್ ಹಾಗೂ ಸಬ್‌ಇನ್‌ಸ್ಪೆಕ್ಟರ್ ನಟರಾಜ್ ಅವರಿಗೆ ಮನವಿ ಮಾಡಿದ್ದರು. ಆದರೂ ಉದ್ದೇಶಪೂರ್ವಕವಾಗಿ ಅವರನ್ನು ರಾತ್ರಿ ಪಾಳಿಗೆ ಹಾಕಲಾಗಿತ್ತು. ಈ ಘಟನೆಗೆ ಪರೋಕ್ಷವಾಗಿ ಠಾಣೆಯ ಮೇಲಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಶಿಲ್ಪಾ ಅವರ ಸಹೋದರ ಕೃಷ್ಣಾ ನಾಯಕ್ ವಿಡಿಯೋ ಮಾಡಿ ಆಕ್ರೋಶ ಹೊರಹಾಕಿದ್ದು, ಪ್ರಸ್ತುತ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.




