ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಭಾರತದ ಉಕ್ಕು ವಲಯದಲ್ಲಿ ಉದ್ಯೋಗಿ ಸುರಕ್ಷತೆ, ಕೈಗಾರಿಕಾ ನೈರ್ಮಲ್ಯ, ಪ್ರಕ್ರಿಯೆ ಸುರಕ್ಷತೆ ಹಾಗೂ ವಿಪತ್ತು ನಿರ್ವಹಣಾ ಸಿದ್ಧತೆಗಳನ್ನು ಬಲಪಡಿಸುವ ಉದ್ದೇಶದಿಂದ ಕೇಂದ್ರ ಉಕ್ಕು ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಪರಿಶೀಲನಾ ಸಭೆ ನಡೆಯಿತು.
ದೆಹಲಿಯಲ್ಲಿ ನಡೆದ ಈ ಸಭೆಯಲ್ಲಿ ಉಕ್ಕು ಸಚಿವಾಲಯದ ಹಿರಿಯ ಅಧಿಕಾರಿಗಳು, ಸಾರ್ವಜನಿಕ ವಲಯದ ಉಕ್ಕು ಉದ್ದಿಮೆಗಳ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರು ಸೇರಿದಂತೆ ವಿವಿಧ ಪ್ರಮುಖ ಪಾಲುದಾರರು ಭಾಗವಹಿಸಿ ವ್ಯಾಪಕ ಚರ್ಚೆ ನಡೆಸಿದರು.
ಕಾರ್ಖಾನೆಗಳು ಹಾಗೂ ಉತ್ಪಾದನಾ ಘಟಕಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರ ಮತ್ತು ಉದ್ಯೋಗಿಗಳ ಸುರಕ್ಷತೆಗೆ ಗರಿಷ್ಠ ಆದ್ಯತೆ ನೀಡಬೇಕಿದೆ. ಉಕ್ಕು ಉದ್ಯಮದ ಸುಸ್ಥಿರ ಬೆಳವಣಿಗೆಗೆ ಬೆಂಬಲ ನೀಡುವ ಜೊತೆಗೆ, ಕಾರ್ಮಿಕರ ಹಿತರಕ್ಷಣೆಗಾಗಿ ಬಲವಾದ ಸುರಕ್ಷತಾ ಸಂಸ್ಕೃತಿಯನ್ನು ರೂಪಿಸಲು ಸರ್ಕಾರ ಬದ್ಧವಾಗಿದೆ ಎಂದು ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದರು.
ಸ್ಥಳೀಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಉಕ್ಕು ಉತ್ಪಾದನಾ ಘಟಕಗಳಲ್ಲಿ ಯಾವುದೇ ರೀತಿಯ ಅನಾಹುತಗಳು ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ಮತ್ತು ಅಂತರರಾಷ್ಟ್ರೀಯ ಮಟ್ಟದ ಸುರಕ್ಷತಾ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಕುರಿತು ಸಭೆಯಲ್ಲಿ ಪ್ರಮುಖವಾಗಿ ಚರ್ಚಿಸಲಾಯಿತು.



