ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬಹುಕೋಟಿ ರೂಪಾಯಿ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ. ನಾಗೇಂದ್ರ ಅವರ ವಿರುದ್ಧ ಕಾನೂನು ಸಂಕೋಲೆ ಮತ್ತಷ್ಟು ಬಿಗಿಯಾಗುವ ಲಕ್ಷಣಗಳು ಕಂಡುಬರುತ್ತಿವೆ.
ಪ್ರಕರಣದಲ್ಲಿ ಈಗಾಗಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ನಾಗೇಂದ್ರ ವಿರುದ್ಧ ಪ್ರಾಸಿಕ್ಯೂಷನ್‌ಗೆ (ಕಾನೂನು ಕ್ರಮ) ಅನುಮತಿ ನೀಡುವಂತೆ ಜಾರಿ ನಿರ್ದೇಶನಾಲಯ ರಾಜಭವನಕ್ಕೆ ಪತ್ರ ಬರೆದಿತ್ತು. ಈ ಪತ್ರದ ಆಧಾರದ ಮೇಲೆ ರಾಜ್ಯಪಾಲರು ಇದೀಗ ಸಚಿವ ಸಂಪುಟದ ಅಭಿಪ್ರಾಯ ಕೋರಿದ್ದಾರೆ.
ರಾಜ್ಯಪಾಲರು ಬಿ. ನಾಗೇಂದ್ರ ಅವರ ಪ್ರಕರಣದ ಜೊತೆಗೆ, ಮಾಜಿ ಸಚಿವರಾದ ಜಿ. ಜನಾರ್ಧನ ರೆಡ್ಡಿ ಹಾಗೂ ಸಿ.ಎಂ. ರೇಣುಕಾಚಾರ್ಯ ವಿರುದ್ಧದ ಪ್ರಕರಣಗಳ ಕುರಿತಾಗಿಯೂ ಸಂಪುಟದ ಸ್ಪಷ್ಟ ಅಭಿಪ್ರಾಯ ಕೇಳಿದ್ದಾರೆ ಎಂದು ತಿಳಿದುಬಂದಿದೆ.
ರಾಜ್ಯಪಾಲರ ನಡೆಗೆ ಕೌಂಟರ್ ಕೊಡಲು ಸರ್ಕಾರದ ತಂತ್ರ:ರಾಜಭವನದ ಈ ನಡೆಯಿಂದ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ, ರಾಜ್ಯಪಾಲರ ಪ್ರಶ್ನೆಗೆ ಪ್ರತಿಯಾಗಿ ರಾಜಕೀಯ ಹಾಗೂ ಕಾನೂನಾತ್ಮಕ ಕೌಂಟರ್ ನೀಡಲು ಗಂಭೀರ ಚಿಂತನೆ ನಡೆಸಿದೆ.
ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಸೇರಿದಂತೆ ಪ್ರತಿಪಕ್ಷಗಳ ಹಲವು ಹಿರಿಯ ನಾಯಕರ ವಿರುದ್ಧದ ಹಳೆಯ ಪ್ರಕರಣಗಳಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳು ರಾಜಭವನದಲ್ಲಿ ಇನ್ನೂ ಬಾಕಿ ಉಳಿದಿರುವ ವಿಚಾರವನ್ನು ಪ್ರಸ್ತಾಪಿಸಲು ಸರ್ಕಾರ ಮುಂದಾಗಿದೆ.
ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಇತರ ನಾಯಕರ ವಿರುದ್ಧದ ಪ್ರಾಸಿಕ್ಯೂಷನ್‌ಅರ್ಜಿಗಳ ಪ್ರಸ್ತುತ ಸ್ಥಿತಿಗತಿ ಏನು ಮತ್ತು ಅವುಗಳ ವಿಲೇವಾರಿಯಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ರಾಜಭವನದಿಂದಲೇ ಮಾಹಿತಿ ಕೋರಲು ಸಚಿವ ಸಂಪುಟ ಮಟ್ಟದಲ್ಲಿ ಕಾನೂನು ತಜ್ಞರ ಸಲಹೆ ಪಡೆಯಲಾಗುತ್ತಿದೆ.
ಒಟ್ಟಾರೆಯಾಗಿ, ವಾಲ್ಮೀಕಿ ನಿಗಮದ ಹಗರಣದ ತನಿಖೆ ರಾಜಭವನ ಹಾಗೂ ರಾಜ್ಯ ಸರ್ಕಾರದ ನಡುವಿನ ಹೊಸ ರಾಜಕೀಯ ಸಮರಕ್ಕೆ ವೇದಿಕೆಯಾಗಿದ್ದು, ಮುಂದಿನ ಸಂಪುಟ ಸಭೆಯಲ್ಲಿ ಸರ್ಕಾರ ಯಾವ ರೀತಿಯ ನಿರ್ಧಾರ ಕೈಗೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.




