ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಸಾಮಾಜಿಕ ಭದ್ರತಾ ಯೋಜನೆಯಡಿಯಲ್ಲಿ ಪಿಂಚಣಿ ಪಡೆಯಲು ೩೨ ಸಾವಿರ ರೂ.ಗಳ ಒಳಗೆ ಆದಾಯ ಪ್ರಮಾಣ ಪತ್ರ ಸಲ್ಲಿಸುವಂತೆ ಫಲಾನುಭವಿಗಳಿಗೆ ಸೂಚಿಸಿರುವುದನ್ನು ಸರ್ಕಾರ ರದ್ದುಪಡಿಸುವಂತೆ ಕರ್ನಾಟಕ ಕೊಳಗೇರಿ ನಿವಾಸಿಗಳ ಸಂಯುಕ್ತ ಸಂಘಟನೆಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿ ಕಚೇರಿ ಸಹಾಯಕರಿಗೆ ಮನವಿ ಸಲ್ಲಿಸಲಾಯಿತು.
ಸಂಧ್ಯಾ ಸುರಕ್ಷಾ, ವಿಧವಾ ವೇತನ, ಅಂಗವಿಕಲ ವೇತನ ಇನ್ನಿತರೆ ಮಾಶಾಸನಗಳನ್ನು ಪಡೆಯುತ್ತಿರುವವರಿಗೆ ೩೦ ರಿಂದ ೩೨ ಸಾವಿರ ರೂ.ಗಳ ಒಳಗೆ ಆದಾಯ ಪ್ರಮಾಣ ಪತ್ರವನ್ನು ಪಡೆದು ಲಗತ್ತಿಸಬೇಕೆಂದು ಷರತ್ತು ವಿಧಿಸಿರುವುದು ಸರಿಯಲ್ಲ. ಸಾವಿರಾರು ಫಲಾನುಭವಿಗಳು ಈಗಾಗಲೆ ಮಾಶಾಸನವಿಲ್ಲದೆ ಜೀವಿಸುವುದು ಕಷ್ಟವಾಗಿದೆ. ಸಾಮಾಜಿಕ ಭದ್ರತೆ ಯೋಜನೆಯಡಿ ಯಾವುದೇ ನಿಬಂಧನೆಗಳನ್ನು ಹೇರುವುದು ತರವಲ್ಲ. ಕೆಲವು ಮಾನದಂಡಗಳನ್ನು ಸರ್ಕಾರ ವಿಧಿಸಬಾರದೆಂದು
ಕರ್ನಾಟಕ ಕೊಳಗೇರಿ ನಿವಾಸಿಗಳ ಸಂಯುಕ್ತ ಸಂಘಟನೆ ಜಿಲ್ಲಾ ಸಮಿತಿ ಅಧ್ಯಕ್ಷ ಗಣೇಶ್ ಸರ್ಕಾರವನ್ನು ಒತ್ತಾಯಿಸಿದರು.
ರುದ್ರಮುನಿ, ಅಂಜಿನಯ್ಯ, ಶಭಿನಾಜಾನ್, ಲೀಲಾವತಿ, ಚಂದ್ರಮ್ಮ, ಗೀತಮ್ಮ ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.



