ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸರ್ಕಾರಿ ಪ್ರಾಯೋಜಿತ ಯೋಜನೆಗಳಡಿ ಆಯ್ಕೆಯಾದ ಅರ್ಹ ಫಲಾನುಭವಿಗಳಿಗೆ ಬ್ಯಾಂಕುಗಳು ಕಾಲಮಿತಿಯಲ್ಲಿ ಮತ್ತು ತ್ವರಿತವಾಗಿ ಸಾಲ ಸೌಲಭ್ಯ ಒದಗಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಸ್.ಆಕಾಶ್ ತಿಳಿಸಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ 2026-27ನೇ ಸಾಲಿನ ಪ್ರಥಮ ತ್ರೈಮಾಸಿಕ ಜಿಲ್ಲಾ ಮಟ್ಟದ ಪುನರ್ ಪರಿಶೀಲನಾ ಸಮಿತಿ ಹಾಗೂ ಜಿಲ್ಲಾ ಮಟ್ಟದ ಸಮಾಲೋಚನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್‍ನಿಂದ ಜೂನ್‍ವರೆಗಿನ ಬ್ಯಾಂಕುಗಳ ಆದ್ಯತಾ ವಲಯದ ಸಾಲಗಳ ಪ್ರಗತಿ ಹಾಗೂ ಎಲ್ಲಾ ನಿಗಮ ಮಂಡಳಿಗಳ ಸರ್ಕಾರಿ ಪ್ರಾಯೋಜಿತ ಯೋಜನೆಗಳ ಪ್ರಗತಿ ಪರಿಶೀಲಿಸಿದರು.
ಆದ್ಯತಾ ವಲಯದ ಸಾಲಗಳಲ್ಲಿ ಕೃಷಿ, ಶಿಕ್ಷಣ, ವಸತಿ ಮತ್ತು ಸಣ್ಣ ಕೈಗಾರಿಕಾ ವಲಯಗಳಿಗೆ ನೀಡಿರುವ ಸಾಲಗಳ ಪ್ರಗತಿಯ ಬಗ್ಗೆ ವಿವರವಾಗಿ ಚರ್ಚಿಸಿದ ಅವರು, ಬಡವರು ಹಾಗೂ ಸ್ವಯಂ ಉದ್ಯೋಗಿಗಳಿಗೆ ಬ್ಯಾಂಕ್‍ಗಳು ಆಸರೆಯಾಗಬೇಕು ಎಂದು ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿ ಪ್ರಥಮ ತ್ರೈಮಾಸಿಕದಲ್ಲಿ ಬ್ಯಾಂಕುಗಳು ಒಟ್ಟು ರೂ.12,293.59 ಕೋಟಿ ಠೇವಣಿ ಹಾಗೂ ರೂ.15,218.09 ಕೋಟಿ ಮುಂಗಡ (ಸಾಲ) ಹೊಂದಿದ್ದು, ಸಾಲ-ಠೇವಣಿ ಅನುಪಾತ ಶೇ.123.79 ರಷ್ಟಿದೆ. ಇದರಲ್ಲಿ ಆದ್ಯತಾ ವಲಯಕ್ಕೆ ನೀಡಿದ ಸಾಲ ರೂ.10,177.70 ಕೋಟಿ (ಶೇ.66.91) ತಲುಪಿದೆ ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕ ಎಂ.ಪಿ.ಪ್ರವೀಣ್ ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಎಂ.ಪಿ.ಪ್ರವೀಣ್, ಆರ್‍ಬಿಐ ಎಲ್‍ಡಿಒ ಪಿ.ಅರುಣ್ ಕುಮಾರ್, ನಬಾರ್ಡ್ ಡಿಡಿಎಂ ಕೆ.ವಿನಂತ್, ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಜೆ.ಜಗನ್ನಾಥ್ ಹಾಗೂ ಕೆನರಾ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ನಿರ್ದೇಶ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.




