ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಂಬಾಕು ಮುಕ್ತ ದಿನವು ಮಾನವ ಆರೋಗ್ಯದ ರಕ್ಷಣೆಗೆ ಒತ್ತು ನೀಡಿದರೆ, ವಿಶ್ವ ಪರಿಸರ ದಿನವು ಭೂಮಿಯ ಆರೋಗ್ಯ ಮತ್ತು ಪರಿಸರದ ಸಂರಕ್ಷಣೆಯ ಮಹತ್ವವನ್ನು ತಿಳಿಸುತ್ತದೆ ಎಂದು ಶ್ರೀ ದೇವರಾಜ್ ಅರಸ್ ಸಮೂಹ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ಜೆ. ರಾಜೇಂದ್ರ ಹೇಳಿದರು.
ಜಾಲಪ್ಪ ಲಾ ಕಾಲೇಜಿನಲ್ಲಿ ತಂಬಾಕು ಮುಕ್ತ ದಿನ ಮತ್ತು ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಆರೋಗ್ಯಕರ ವ್ಯಕ್ತಿ ಮತ್ತು ಸ್ವಚ್ಛ ಪರಿಸರ ಎರಡೂ ಉತ್ತಮ ಸಮಾಜದ ನಿರ್ಮಾಣಕ್ಕೆ ಅತ್ಯಗತ್ಯ. ಪ್ರತಿಯೊಬ್ಬರೂ ತಂಬಾಕು ಸೇವನೆಯನ್ನು ತ್ಯಜಿಸಿ ಪರಿಸರ ಸಂರಕ್ಷಣೆಯಲ್ಲಿ ಪಾಲ್ಗೊಳ್ಳಬೇಕು.
ತಂಬಾಕು ಸೇವನೆಯಿಂದ ಕ್ಯಾನ್ಸರ್, ಹೃದಯರೋಗ, ಉಸಿರಾಟದ ತೊಂದರೆಗಳು ಸೇರಿದಂತೆ ಅನೇಕ ಗಂಭೀರ ಕಾಯಿಲೆಗಳು ಉಂಟಾಗುತ್ತವೆ. ಯುವಕರು ತಂಬಾಕಿನಿಂದ ದೂರವಿದ್ದು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು ಎಂದರು.
ಮಾನವ ಸಂಪನ್ಮೂಲ ಅಧಿಕಾರಿ ಬಾಬುರೆಡ್ಡಿ ಮಾತನಾಡಿ ತಂಬಾಕು ಮುಕ್ತ ದಿನ ಮತ್ತು ವಿಶ್ವ ಪರಿಸರ ದಿನ ಎರಡೂ ಜನರಲ್ಲಿ ಜಾಗೃತಿ ಮೂಡಿಸುವ ಮಹತ್ವದ ದಿನಗಳಾಗಿವೆ. ಆರೋಗ್ಯಕರ ಜೀವನ ಮತ್ತು ಹಸಿರು ಪರಿಸರಕ್ಕಾಗಿ ನಾವು ಎಲ್ಲರೂ ನಮ್ಮ ಜವಾಬ್ದಾರಿಯನ್ನು ಅರಿತು ಕಾರ್ಯನಿರ್ವಹಿಸಬೇಕು ಎಂದರು.
ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಹರೀಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶ್ರೀ ದೇವರಾಜ್ ಅರಸ್ ಸಮೂಹ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರುಗಳಾದ ಡಾ. ಎಂ.ಎಸ್ ಗೌರಪ್ಪ, ಡಾ. ಎಂ ಚಿಕ್ಕಣ್ಣ, ಉಮೇಶ್ ಬಾವಿಕಟ್ಟಿ, ಪರಿಸರವಾದಿ ಗುರುದೇವ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.



