ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದ ಐತಿಹಾಸಿಕ ಲಾಲ್‌ಬಾಗ್ ಸೇರಿದಂತೆ ಸಾರ್ವಜನಿಕ ಉದ್ಯಾನವನಗಳ ಶೇ.5 ರಷ್ಟು ಜಾಗವನ್ನು ರಿಯಲ್ ಎಸ್ಟೇಟ್ ಮಾಫಿಯಾ ಹಾಗೂ ಬಂಡವಾಳಶಾಹಿಗಳ ಮಡಿಲಿಗೆ ಹಾಕಲು ಹೊರಟಿದ್ದ ಕಾಂಗ್ರೆಸ್ ಸರ್ಕಾರ, ಸಾರ್ವಜನಿಕರ ಆಕ್ರೋಶ ಮತ್ತು ಬಿಜೆಪಿಯ ಕಾನೂನು ಸಮರಕ್ಕೆ ಬೆದರಿ ಯು-ಟರ್ನ್ ಹೊಡೆಯುವ ಹಂತಕ್ಕೆ ತಲುಪಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಹರಿದಾಯ್ದಿರುವ ಅವರು, ಸರ್ಕಾರದ 'ಉದ್ಯಾನವನಗಳ ಸಂರಕ್ಷಣೆ ತಿದ್ದುಪಡಿ ವಿಧೇಯಕ-2026' ಮರುಪರಿಶೀಲನೆಯ ನಾಟಕವನ್ನು ತೀವ್ರವಾಗಿ ಖಂಡಿಸಿದ್ದಾರೆ.
ಆರ್. ಅಶೋಕ್ ಎತ್ತಿರುವ ಪ್ರಮುಖ ವಿಚಾರಗಳು: ಚರ್ಚೆಯಿಲ್ಲದೆ ವಿಧೇಯಕ ಅಂಗೀಕಾರ:
'ಕರ್ನಾಟಕ ಸರ್ಕಾರದ ಉದ್ಯಾನವನಗಳ ಸಂರಕ್ಷಣೆ ತಿದ್ದುಪಡಿ ವಿಧೇಯಕ-2026' ಅನ್ನು ವಿಧಾನಸಭೆಯಲ್ಲಿ ಯಾವುದೇ ಚರ್ಚೆ ನಡೆಸದೆ ತರಾತುರಿಯಲ್ಲಿ ಅಂಗೀಕರಿಸಿಕೊಂಡಿದ್ದೇಕೆ? ಉದ್ಯಾನವನಗಳ ಜಾಗವನ್ನು ಮಾರಾಟ ಮಾಡಲು, ಅಡಮಾನ ಇಡಲು ಹಾಗೂ ಕಬಳಿಸಲು ಹಾದಿ ಸುಗಮ ಮಾಡಿಕೊಡುವುದೇ 'ಬ್ರಾಂಡ್ ಬೆಂಗಳೂರು' ಹಿಂದಿರುವ ಅಸಲಿ ಉದ್ದೇಶವೇ ಎಂದು ಸವಾಲು ಹಾಕಿದ್ದಾರೆ.
ಟನಲ್ ರಸ್ತೆ ಹೆಸರಲ್ಲಿ ಭೂಮಿ ಧಾರೆ: ಟನಲ್ ರಸ್ತೆ ಯೋಜನೆ ಹೆಸರಿನಲ್ಲಿ ಲಾಲ್‌ಬಾಗ್‌ನ ಭೂಮಿಯನ್ನು ಬಂಡವಾಳಶಾಹಿಗಳಿಗೆ ಧಾರೆ ಎರೆಯಲು ಕಮಿಷನ್ ದಂಧೆ ನಡೆದಿತ್ತು. ಆದರೆ ಪರಿಸರ ಪ್ರೇಮಿಗಳ ಆಕ್ರೋಶ, ಸಾರ್ವಜನಿಕ ಪ್ರತಿಭಟನೆ ಹಾಗೂ ಬಿಜೆಪಿಯ ಕಾನೂನು ಹೋರಾಟದ ಫಲವಾಗಿ ಸರ್ಕಾರ ಈಗ ಮರುಪರಿಶೀಲನೆಯ ನಾಟಕವಾಡುತ್ತಿದೆ ಎಂದಿದ್ದಾರೆ.
'ಉದ್ಯಾನನಗರಿ' ಈಗ 'ರಿಯಲ್ ಎಸ್ಟೇಟ್ ನಗರಿ'?: ಕಳಂಕಿತ ಮಾಜಿ ಸಚಿವ ಬಿ. ನಾಗೇಂದ್ರ ರಾಜೀನಾಮೆ ವಿಚಾರದಲ್ಲೂ ಜನಜಾಗೃತಿ ಮತ್ತು ಪ್ರತಿಪಕ್ಷಗಳ ಹೋರಾಟಕ್ಕೆ ಬೆದರಿ ಮಂಡಿಯೂರಿದ ಸರ್ಕಾರ, ಈಗ ಉದ್ಯಾನವನ ಕಬಳಿಸುವ ವಿಚಾರದಲ್ಲೂ ಹೆದರಿದೆ. ಬೆಂಗಳೂರನ್ನು ರಿಯಲ್ ಎಸ್ಟೇಟ್ ನಗರಿಯನ್ನಾಗಿ ಮಾಡಲು ಹೊರಟರೆ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದ್ದಾರೆ.
ಆಗ್ರಹಗಳು: ಉದ್ಯಾನವನಗಳನ್ನು ಕಬಳಿಸುವ ಈ ಮಾರಕ ತಿದ್ದುಪಡಿ ವಿಧೇಯಕವನ್ನು ಸರ್ಕಾರ ಸಂಪೂರ್ಣವಾಗಿ ಹಿಂಪಡೆಯಬೇಕು.
ಸಾರ್ವಜನಿಕ ಆಸ್ತಿ ಮತ್ತು ಹಸಿರು ಸಂಪತ್ತನ್ನು ಕಮಿಷನ್‌ಗಾಗಿ ಮಾರಿಕೊಳ್ಳುವ ಕಸರತ್ತನ್ನು ತಕ್ಷಣವೇ ನಿಲ್ಲಿಸಬೇಕು. ಜನವಿರೋಧಿ, ಹಸಿರುವಿರೋಧಿ ಮತ್ತು ಲೂಟಿಕೋರ ಕಾಂಗ್ರೆಸ್ ಸರ್ಕಾರದ ವಿರುದ್ಧ ಸೂಕ್ತ ನಿರ್ಧಾರ ಬರುವವರೆಗೆ ಬಿಜೆಪಿಯ ಹೋರಾಟ ನಿಲ್ಲುವುದಿಲ್ಲ ಎಂದು ಆರ್. ಅಶೋಕ್ ಸ್ಪಷ್ಟಪಡಿಸಿದ್ದಾರೆ.




