ಚಂದ್ರವಳ್ಳಿ ನ್ಯೂಸ್, ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ):
ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಖಾತೆ ಹಂಚಿಕೆ ಬೆನ್ನಲ್ಲೇ ಭುಗಿಲೆದ್ದಿರುವ ಸಚಿವರ ಬಂಡಾಯದ ಕಿಚ್ಚು ಇದೀಗ ಹೈಕಮಾಂಡ್ ಅಂಗಳ ತಲುಪಿದೆ.
ಹಿರಿಯ ನಾಯಕರಾದ ರಾಮಲಿಂಗಾ ರೆಡ್ಡಿ ಅವರ ರಾಜೀನಾಮೆ ಅಸ್ತ್ರ ಹಾಗೂ ಕೆ.ಎಚ್. ಮುನಿಯಪ್ಪ ಅವರ ಬಹಿರಂಗ ಬಂಡಾಯದಿಂದ ಎಚ್ಚೆತ್ತುಕೊಂಡಿರುವ ಕಾಂಗ್ರೆಸ್ ವರಿಷ್ಠರು, ಸರ್ಕಾರದ ಮೇಲಿನ ಕಂಟಕ ನಿವಾರಿಸಲು ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ವಿಐಪಿ ಲಾಂಜ್ ಹಾಗೂ ಪಕ್ಕದ ತಾಜ್ ಹೋಟೆಲ್‌ನಲ್ಲಿ ತುರ್ತು ‘ಹೈವೋಲ್ಟೇಜ್’ ಸಭೆ ನಡೆಸುತ್ತಿದ್ದಾರೆ.
ರಾಜ್ಯ ಸರ್ಕಾರದ ಅಸ್ತಿತ್ವಕ್ಕೆ ಆರಂಭದಲ್ಲೇ ಧಕ್ಕೆ ಬರದಂತೆ ತಡೆಯಲು ಎಐಸಿಸಿ ಮುಖಂಡ ರಾಹುಲ್ ಗಾಂಧಿ, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಜಂಟಿಯಾಗಿ ‘ಡ್ಯಾಮೇಜ್ ಕಂಟ್ರೋಲ್’ ಕಾರ್ಯಾಚರಣೆಗೆ ಇಳಿದಿದ್ದಾರೆ. ತೀವ್ರ ಅಸಮಾಧಾನಗೊಂಡಿರುವ ಸಚಿವ ಕೆ.ಎಚ್. ಮುನಿಯಪ್ಪ ಅವರನ್ನು ಹೈಕಮಾಂಡ್ ನಾಯಕರು ತುರ್ತಾಗಿ ಏರ್‌ಪೋರ್ಟ್‌ಗೆ ಕರೆಸಿಕೊಂಡು ಮಾತನಾಡಿದ್ದಾರೆ.
‘ನಾನು ಚಾರ್ಜ್ ತೆಗೆದುಕೊಳ್ಳಲ್ಲ’ ಎಂದ ಮುನಿಯಪ್ಪ; ಖರ್ಗೆಗೆ ವಾರ್ನಿಂಗ್!:
ತಮಗೆ ಹಂಚಿಕೆಯಾಗಿರುವ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಬಗ್ಗೆ ತೀವ್ರ ಆಕ್ರೋಶ ಹೊರಹಾಕಿರುವ ಕೆ.ಎಚ್. ಮುನಿಯಪ್ಪ, "ನಾನು ಯಾವುದೇ ಕಾರಣಕ್ಕೂ ಆಹಾರ ಇಲಾಖೆಯ ಸಚಿವನಾಗಿ ಅಧಿಕಾರ ಸ್ವೀಕರಿಸುವುದಿಲ್ಲ" ಎಂದು ಪಟ್ಟು ಹಿಡಿದಿದ್ದಾರೆ.
ಅಷ್ಟೇ ಅಲ್ಲದೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರನ್ನೇ ಪ್ರಸ್ತಾಪಿಸಿ ನೇರ ವಾಗ್ದಾಳಿ ನಡೆಸಿರುವ ಅವರು, "ನಾನು ಈಗಾಗಲೇ 8 ಬಾರಿ ಗೆದ್ದಿರುವ ಹಿರಿಯ ರಾಜಕಾರಣಿ. ಆದರೆ ಖಾತೆ ಹಂಚಿಕೆಯಲ್ಲಿ ನಮ್ಮ ಸೀನಿಯಾರಿಟಿಗೆ ಬೆಲೆಯೇ ಇಲ್ಲದಂತಾಗಿದೆ. ಪಕ್ಷದಲ್ಲಿ ಎಲ್ಲ ನಾಯಕರನ್ನೂ ಸಮತೋಲನವಾಗಿ ನೋಡಬೇಕಿತ್ತು. ಮಲ್ಲಿಕಾರ್ಜುನ ಖರ್ಗೆ ಅವರು ಪಕ್ಷದಲ್ಲಿ ಎಲ್ಲರನ್ನೂ ಒಂದೇ ಕಣ್ಣಿನಿಂದ ನೋಡಬೇಕು" ಎಂದು 2028ರ ಮುಂದಿನ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಹೈಕಮಾಂಡ್‌ಗೆ ಕಠಿಣ ಸಂದೇಶ ರವಾನಿಸಿದ್ದಾರೆ.
ಏರ್‌ಪೋರ್ಟ್‌ನಿಂದ ತಾಜ್ ಹೋಟೆಲ್‌ಗೆ ಶಿಫ್ಟ್ ಆದ ಸಭೆ:
ಮೊದಲ ಹಂತದ ಮಾತುಕತೆ: ಕೆಂಪೇಗೌಡ ಏರ್‌ಪೋರ್ಟ್‌ನ ವಿಐಪಿ ಲಾಂಜ್‌ನಲ್ಲಿ ಸಚಿವ ಕೆ.ಎಚ್. ಮುನಿಯಪ್ಪ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಸುರ್ಜೆವಾಲ ಅವರನ್ನು ಭೇಟಿಯಾಗಿ ತಮ್ಮ ಖಾತೆ ಬದಲಾವಣೆ ಕುರಿತು ಪ್ರಾಥಮಿಕ ಅಸಮಾಧಾನ ತೋಡಿಕೊಂಡರು.
ರಾಹುಲ್ ಸಮ್ಮುಖದಲ್ಲಿ ಬಿಗ್ ಮೀಟಿಂಗ್: ಇದರ ಬೆನ್ನಲ್ಲೇ, ಪಕ್ಕದ ಐಷಾರಾಮಿ ತಾಜ್ ಹೋಟೆಲ್‌ನಲ್ಲಿ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಸುಮಾರು 40 ನಿಮಿಷಗಳ ಕಾಲ ಹಿರಿಯ ನಾಯಕರ ಮತ್ತೊಂದು ಮಹತ್ವದ ಸಭೆ ನಿಗದಿಯಾಗಿದೆ.
ಮುನಿಯಪ್ಪ ಡಿಮ್ಯಾಂಡ್ ಏನು?:
ತಮಗೆ ನೀಡಿರುವ ಆಹಾರ ಇಲಾಖೆಯ ಬದಲಾಗಿ, ತಮ್ಮ ಹಿರಿತನಕ್ಕೆ ತಕ್ಕುದಾದ ಕೃಷಿ ಅಥವಾ ಸಮಾಜ ಕಲ್ಯಾಣ ಇಲಾಖೆಯನ್ನು ನೀಡಬೇಕು ಎಂದು ಮುನಿಯಪ್ಪ ವರಿಷ್ಠರ ಮುಂದೆ ಖಡಕ್ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.
ರಾಮಲಿಂಗಾರೆಡ್ಡಿ ಅವರ ರಾಜೀನಾಮೆ ನಿರ್ಧಾರವನ್ನು ವಾಪಸ್ ಪಡಿಸುವುದು ಹಾಗೂ ಮುನಿಯಪ್ಪ ಅವರ ಅಸಮಾಧಾನವನ್ನು ತಣಿಸಲು ಹೈಕಮಾಂಡ್ ನಾಯಕರು ವಿಶೇಷ 'ಸಮನ್ವಯ ಸೂತ್ರ'ವೊಂದನ್ನು ಸಿದ್ಧಪಡಿಸುತ್ತಿದ್ದು, ಈ ಹೈವೋಲ್ಟೇಜ್ ಸಭೆಯ ನಂತರ ರಾಜ್ಯ ರಾಜಕಾರಣದ ಬಿಕ್ಕಟ್ಟು ಶಮನವಾಗಲಿದೆಯೇ ಅಥವಾ ಮತ್ತೊಂದು ಮಗ್ಗలు ಪಡೆಯಲಿದೆಯೇ ಎಂಬುದು ಸ್ಪಷ್ಟವಾಗಲಿದೆ.



